ಕನ್ನಡಪ್ರಭ ವಾರ್ತೆ ಜಮಖಂಡಿ

ಬರಗಾಲದಿಂದ ಬಸವಳಿದಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷ್ಣಾ ನದಿಗೆ ರಾಜಾಪೂರ ಬ್ಯಾರೇಜ್‌ನಿಂದ ಬಿಡುಗಡೆ ಗೊಳಿಸಿದ್ದ ನೀರು ಭಾನುವಾರ ಚಿಕ್ಕಪಡಸಲಗಿ ಬ್ಯಾರೇಜ್‌ ದಾಟಿ ಮುಂದಕ್ಕೆ ಹರಿಯುತ್ತಿದ್ದು, ರೈತಾಪಿ ವರ್ಗ ಸಂತಸ ವ್ಯಕ್ತ ಪಡಿಸಿದೆ.

ನೀರಿಲ್ಲ, ಮುಂಗಾರು ಮಳೆಯು ತಡವಾಗಿದ್ದರಿಂದ ಬಿತ್ತನೆ ಕಾರ್ಯ ಕುಂಠಿತಗೊಂಡಿತ್ತು. ಕಬ್ಬು ಬಿತ್ತನೆ ಮಾಡಿದ್ದ ರೈತರು ನದಿಯಲ್ಲಿ ನೀರಿಲ್ಲದೇ ಬೆಳೆಗಳು ಒಣಗುವ ಭೀತಿ ಎದುರಿಸುತ್ತಿದ್ದರು. ನದಿಗೆ ನೀರು ಬಂದಿದ್ದರಿಂದ ರೈತಾಪಿ ವಲಯ ಹರ್ಷವ್ಯಕ್ತ ಪಡಿಸಿದ್ದು, ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ನದಿಯಲ್ಲಿ ನೀರು ಬತ್ತಿ ಹೋಗಿದ್ದರಿಂದ ಇದ್ದ ಬೋರ್‌ವೆಲ್‌ಗಳು ನೀರಿನ ಕೊರತೆ ಅನುಭವಿಸುತ್ತಿದ್ದವು. ಇದರಿಂದ ಬೆಳೆಸಿದ ಬೆಳೆ ನಾಶವಾಗುವ ಭೀತಿಯಲ್ಲಿದ್ದವರಿಗೆ ನದಿಯಲ್ಲಿ ನೀರು ಬಂದಿರುವುದು ಸಂತಸ ಮೂಡಿಸಿದೆ.