ಹುಬ್ಬಳ್ಳಿ:

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಧಾರವಾಡ ವಲಯದಿಂದ ಇಲ್ಲಿನ ರಾಜ ನಗರದಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಮೊದಲ ಬಾರಿಗೆ 14, 16, 19 ವರ್ಷದೊಳಗಿನ ಬಾಲಕರು ಹಾಗೂ 15, 19 ವರ್ಷದೊಳಗಿನ ಬಾಲಕಿಯರಿಗಾಗಿ 1 ತಿಂಗಳ ಕ್ರಿಕೆಟ್ ಬೇಸಿಗೆ ಶಿಬಿರ ಆರಂಭಿಸಲಾಗಿದೆ. ಟ್ರಯಲ್ಸ್‌ನಲ್ಲಿ ಭಾಗವಹಿಸಿದ 1,076 ಆಟಗಾರರಲ್ಲಿ 125 ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ವಲಯ ಸಂಚಾಲಕ ವೀರಣ್ಣ ಸವಡಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಲಯದ ಅಡಿಯಲ್ಲಿ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಈಗಾಗಲೇ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಎಲ್ಲ ವಯೋಮಾನದ ಗುಂಪುಗಳಲ್ಲಿ ಪರಸ್ಪರ 4 ಪಂದ್ಯ ಆಡಲಾಗಿದೆ. ಆಟಗಾರರ ತಾಂತ್ರಿಕ ಕೌಶಲ್ಯ ಗುರುತಿಸಿದ ಬಳಿಕ ಅರ್ಹ 125 ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂದರು.

ಬಾಲಕರ 3 ವಿಭಾಗಗಳಲ್ಲಿ ಹುಬ್ಬಳ್ಳಿಯಿಂದ 26, ಧಾರವಾಡದಿಂದ 12, ಗದಗದಿಂದ 9, ಬೆಳಗಾವಿಯಿಂದ 17 ಮತ್ತು ಉತ್ತರಕನ್ನಡದಿಂದ 11 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಮಹಿಳಾ ವಿಭಾಗಗಳಲ್ಲಿ ಹುಬ್ಬಳ್ಳಿಯಿಂದ 13, ಧಾರವಾಡದಿಂದ 14, ಬೆಳಗಾವಿಯಿಂದ 17 ಮತ್ತು ಗದಗದಿಂದ 6 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ಗ್ರಾಮೀಣ ಪ್ರದೇಶದ ಆಟಗಾರರನ್ನು ಆಯ್ಕೆ ಮಾಡಿರುವುದು ವಿಶೇಷ ಎಂದು ಹೇಳಿದರು.

ಸೋಮವಾರದಿಂದ ತರಬೇತಿ ಆರಂಭವಾಗಿದ್ದು, ಒಂದು ತಿಂಗಳು ನಡೆಯಲಿದೆ. ಎಲ್ಲ ಆಟಗಾರರಿಗೆ ಉಚಿತ ವಸತಿ, ಆಹಾರ, ದೈಹಿಕ ಪರೀಕ್ಷೆ, ವೀಡಿಯೋ ವಿಶ್ಲೇಷಣೆ ಮತ್ತು ಬಿಸಿಸಿಐ ಮಟ್ಟದ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಆಯಾ ವಿಭಾಗದ ಆಟಗಾರರು ಉಳಿದ ವಲಯಗಳೊಂದಿಗೆ ಪಂದ್ಯ ಆಡಲು ಸಹಕಾರಿಯಾಗಲಿದೆ. ಈಗಾಗಲೇ ಕೆಎಸ್‌ಸಿಎ ಬೆಂಗಳೂರು ಟಿಆರ್‌ಡಿಒ (ಪ್ರತಿಭಾ ಸಂಪನ್ಮೂಲ ಅಭಿವೃದ್ಧಿ ಘಟಕ) ವೀಕ್ಷಕರ ಅಡಿಯಲ್ಲಿ ವಲಯದ ನಾಲ್ಕು ಜಿಲ್ಲೆಗಳಿಗೆ ತೆರಳಿ ಪಾರದರ್ಶಕತೆಯೊಂದಿಗೆ ತಂಡಗಳ ಆಯ್ಕೆ ಮಾಡಲಾಗಿದೆ ಎಂದರು.


ಕೆಎಸ್‌ಸಿಎ 28 ಸ್ಕೋರ್‌ರ ಮತ್ತು 45 ಅಂಪೈರ್‌ಗಳನ್ನು ಆಯ್ಕೆ ಮಾಡಿದೆ ಮತ್ತು ವೀಡಿಯೋ ವಿಶ್ಲೇಷಕ ತರಬೇತಿ, ತರಬೇತುದಾರರು ಮತ್ತು ಕ್ಯುರೇಟರ್‌ಗಳಿಗೆ ತರಬೇತಿ ನೀಡುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈಚೆಗೆ ಅತಿ ಕಡಿಮೆ ಸಮಯದಲ್ಲಿ ರಣಜಿ ಫೈನಲ್‌ ಪಂದ್ಯವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸುವ ಮೂಲಕ ಯಶಸ್ವಿಯಾಗಿದ್ದು, ಮುಂದೆ ಮಹಾರಾಜಾ ಟ್ರೋಫಿ ಸೇರಿದಂತೆ ವಿವಿಧ ಕ್ರಿಕೆಟ್‌ ಪಂದ್ಯಗಳು ಧಾರವಾಡ ವಲಯದ ಕ್ರೀಡಾಂಗಣದಲ್ಲಿ ನಡೆಸುವ ನಿರೀಕ್ಷೆಯಿದೆ. ಅದಕ್ಕೆ ತಕ್ಕಂತೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಚಟುವಟಿಕೆ ನಡೆಸುವ ಚಿಂತನೆಯಿದೆ ಎಂದು ಸವಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಎಸ್‌ಸಿಎ ಧಾರವಾಡ ವಲಯ ಅಧ್ಯಕ್ಷ ಅಲ್ತಾಫ್ ಕಿತ್ತೂರ, ವಲಯ ಸಮಿತಿ ಸದಸ್ಯ ವಸಂತ್ ಮುರ್ಡೇಶ್ವರ, ವಿಜಯ ವೈದ್ಯ ಸೇರಿದಂತೆ ಹಲವರಿದ್ದರು.