ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ನಮ್ಮ ಕ್ಷೇತ್ರದ ರೈತರಿಗೆ ಮುಂಗಾರು ಹಂಗಾಮಿಗೆ ಅಗತ್ಯವಾದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಸಮಯಕ್ಕೆ ತಕ್ಕಂತೆ ಸಮರ್ಪಕವಾಗಿ ಒದಗಿಸಬೇಕೆಂದು ಶಾಸಕ ಸುರೇಶ್ ಬಾಬು ಸಿ.ಬಿ. ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕು ಕಚೇರಿ ನ್ಯಾಯಾಲಯದ ಸಭಾಂಗಣದಲ್ಲಿ ಕೃಷಿ ಪರಿಕರ ಮಾರಾಟಗಾರರೊಂದಿಗೆ ಸಭೆ ನಡೆಸಿ ಚರ್ಚಿಸಿ ಮಾತನಾಡಿ ಪೂರ್ವ ಮುಂಗಾರು ಹಂಗಾಮಿನಲ್ಲಿ ಹೆಸರು, ಅಲಸಂದೆ ಹಾಗೂ ಎಳ್ಳು ಬೆಳೆಗಳನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಮುಂಗಾರು ಹಂಗಾಮಿನಲ್ಲಿ ಸಾಮೆ ಬೆಳೆ ಬೆಳೆಯುವ ಸಾಧ್ಯತೆಯೂ ಇದೆ. ಜೊತೆಗೆ, ರಾಗಿ ಈ ಭಾಗದ ಪ್ರಮುಖ ಮುಂಗಾರು ಬೆಳೆ ಆಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯವಿರುವ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರಗಳನ್ನು ಮುಂಚಿತವಾಗಿ ದಾಸ್ತಾನೀಕರಿಸುವುದು ಅತ್ಯಾವಶ್ಯಕವಾಗಿದೆ. ಜೊತೆಗೆ ರೈತರಿಗೆ ಸಾವಯವ ಕೃಷಿ ಹಾಗೂ ಸಹಜ ಕೃಷಿ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ.
ಹಿಂದಿನ ಕಾಲದಲ್ಲಿ ರೈತರು ಕುರಿ ಹಾಗೂ ದನದ ಗೊಬ್ಬರಗಳನ್ನು ಬಳಸಿಕೊಂಡು ಬೆಳೆಗಳನ್ನು ಬೆಳೆಯುತ್ತಿದ್ದು, ಇದರಿಂದ ಉತ್ತಮ ಇಳುವರಿ ಮತ್ತು ಆರೋಗ್ಯಕರ ಆಹಾರ ದೊರೆಯುತ್ತಿತ್ತು. ಇಂದಿನ ಸಂದರ್ಭದಲ್ಲಿ ನ್ಯಾನೋ ಯೂರಿಯಾ ಸೇರಿದಂತೆ ಹೊಸ ತಂತ್ರಜ್ಞಾನಗಳತ್ತ ರೈತರು ಒಲವು ತೋರಬೇಕಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ಪರಿಕರ ಮಾರಾಟಗಾರರು ಈ ಕುರಿತು ವ್ಯಾಪಕವಾಗಿ ಪ್ರಚಾರ ನಡೆಸಬೇಕು ಎಂದು ತಿಳಿಸಿದರು.ಕೃಷಿ ಪರಿಕರ ಮಾರಾಟಗಾರರು ಹಾಗೂ ಸಹಕಾರಿ ಸಂಘಗಳು (ಪಿ.ಎ.ಸಿ.ಎಸ್) ಅಗತ್ಯವಿರುವ ರಸಗೊಬ್ಬರ, ವಿಶೇಷವಾಗಿ ಯೂರಿಯಾ ಗೊಬ್ಬರವನ್ನು ಮುಂಚಿತವಾಗಿ ದಾಸ್ತಾನಿಕರಿಸಲು ಕ್ರಮವಹಿಸಬೇಕು. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ರಸಗೊಬ್ಬರಗಳ ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ, ರೈತರಿಗೆ ಯಾವುದೇ ತೊಂದರೆಯಾಗದಂತೆ ಸಮರ್ಪಕ ವ್ಯವಸ್ಥೆ ಮಾಡಬೇಕು. ಯಾವುದೇ ಕೃಷಿ ಪರಿಕರ ಮಾರಾಟಗಾರರು ರಸಗೊಬ್ಬರಗಳನ್ನು ನಿಗದಿತ ದರಕ್ಕಿಂತ ಹೆಚ್ಚಾಗಿ ಮಾರಾಟ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಎಫ್.ಐ.ಡಿ ಮೂಲಕ ಈ ವರ್ಷ ಗೊಬ್ಬರ ವಿತರಣೆ ನಡೆಯುತ್ತಿರುವುದರಿಂದ, ರೈತರು ಕೇವಲ ಯೂರಿಯಾ ಗೊಬ್ಬರದ ಅವಲಂಬಿಸದೇ, ಸಮಗ್ರ ಪೋಷಕಾಂಶ ನಿರ್ವಹಣಾ ಪದ್ಧತಿಯನ್ನು ಅನುಸರಿಸಬೇಕು ಎಂದು ತಿಳಿಸಿದರು.
ಈ ಸಭೆಯಲ್ಲಿ ತಾಲೂಕು ಕೃಷಿ ಸಮಾಜ ಅಧ್ಯಕ್ಷ ಗಂಗಣ್ಣˌ ಕೃಷಿ ಇಲಾಖಾಧಿಕಾರಿ ಶಿವರಾಜು, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಪ್ರಕಾಶ್, ಕೃಷಿ ಪರಿಕರ ಮಾರಾಟಗಾರರು ಹಾಗೂ ವಿ.ಎಸ್.ಎಸ್.ಎನ್. ಸೊಸೈಟಿಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.