ಶ್ರೀ ಮಹಾವೀರ ಪದವಿ ಮತ್ತು ಪದವಿಪೂರ್ವ ಕಾಲೇಜುಗಳ ಕನ್ನಡ ವಿಭಾಗ, ಕನ್ನಡ ಸಂಘ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶಗಳ ಸಹಯೋಗದೊಂದಿಗೆ 71ನೇ ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು.
ಮೂಡುಬಿದಿರೆ: ಶ್ರೀ ಮಹಾವೀರ ಪದವಿ ಮತ್ತು ಪದವಿಪೂರ್ವ ಕಾಲೇಜುಗಳ ಕನ್ನಡ ವಿಭಾಗ, ಕನ್ನಡ ಸಂಘ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶಗಳ ಸಹಯೋಗದೊಂದಿಗೆ 71ನೇ ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು.
ಕವಿ, ಸಾಹಿತಿ, ಆಳ್ವಾಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹರೀಶ್ ಟಿ. ಜಿ. ಕನ್ನಡ ನಾಡು-ನುಡಿಗಳ ಹಿರಿಮೆಯನ್ನು ಅನೇಕ ಪ್ರಾಚೀನ ಆಧುನಿಕ ಕವಿಗಳ ಕಾವ್ಯದ ಸಾಲುಗಳ ಉದಾಹರಣೆಗಳೊಂದಿಗೆ ವಿವರಿಸಿದರು. ಸಾಹಿತ್ಯ ಮತ್ತು ಜನಜೀವನದಲ್ಲಿ ಅಂದಿನಿಂದ ಇಂದಿನವರೆಗೂ ಕನ್ನಡತನ ಹಾಸುಹೊಕ್ಕಾಗಿದೆ ಎಂದರು.ಪದವಿಪೂರ್ವಕಾಲೇಜಿನ ಪ್ರಾಂಶುಪಾಲೆ ಲೆ. ವಿಜಯಲಕ್ಷ್ಮೀ ಮಾತನಾಡಿ ಕನ್ನಡ ಭಾಷೆಯ ಕುರಿತಸಾಹಿತಿಗಳ ಹೊಗಳಿಕೆಗಳು ವಾಸ್ತವ. ಅದನ್ನು ಅರಿತು ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿಯುವ ಮೂಲಕ ವಿದ್ಯಾರ್ಥಿಗಳು ಕನ್ನಡವನ್ನು ಅನ್ನದ ಭಾಷೆಯನ್ನಾಗಿಸಿಕೊಳ್ಳಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹರೀಶ್ ಮಾತನಾಡಿ, ಒಂದು ಕಾಲದಲ್ಲಿ ದೃಶ್ಯ ಮಾಧ್ಯಮಗಳು ಕನ್ನಡ ಭಾಷಾ ಕಲಿಕೆಗೆ ಪೂರಕವಾಗಿ ಕೆಲಸ ಮಾಡುತ್ತಿದ್ದವು. ಇಂದು ಪರಿಸ್ಥಿತಿ ಬದಲಾಗಿದೆ. ಆದರೂ ನಾವು ಕನ್ನಡ ಭಾಷೆಯ ಕುರಿತು ಅಭಿಮಾನ ಹೊಂದಿ ಅದನ್ನು ಉಳಿಸಿ ಬೆಳೆಸುವತ್ತ ಗಂಭೀರವಾಗಿ ಗಮನ ಹರಿಸಬೇಕು ಎಂದರು.ಕನ್ನಡ ಸಂಘದ ಸಂಚಾಲಕ ಮತ್ತು ವಿಭಾಗ ಮುಖ್ಯಸ್ಥ ಡಾ.ಚಿನ್ನಸ್ವಾಮಿ ಎನ್. ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಸಿದ ಅಂದದ ಕೈಬರಹ ಸ್ಪರ್ಧೆ, ಸ್ವಷ್ಟ ಕನ್ನಡ ವಾಚನ ಸ್ಪರ್ಧೆ ಮತ್ತು ಕನ್ನಡ ನಾಡಿನ ವಾಸ್ತುಶಿಲ್ಪಗಳ ಕುರಿತ ಪ್ರಬಂಧ ಸ್ಪರ್ಧೆಗಳ ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಕನ್ನಡ ಸಂಘದ ಕಾರ್ಯದರ್ಶಿಯಾದ ಅಂತಿಮ ಬಿ.ಎ. ವಿದ್ಯಾರ್ಥಿ ರಂಜನ್ ಎಂ.ಆರ್, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ, ಪದವಿಪೂರ್ವ ಮತ್ತು ಪದವಿ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಚಂದನಾ ಕೆ.ಎಸ್. ನಿರೂಪಿಸಿದರು. ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ತನುಜ ವಂದಿಸಿದರು. ಪದವಿ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.