ಕೆಎಸ್‌ಆರ್‌ಟಿಸಿ ಗ್ರಾಮೀಣ ಬಸ್‌ ನಿಲ್ದಾಣ ಕಾಮಗಾರಿ ಶೀಘ್ರ ಆರಂಭ: ಶಾಸಕ ತಮ್ಮಯ್ಯ

| Published : Sep 09 2025, 01:00 AM IST

ಕೆಎಸ್‌ಆರ್‌ಟಿಸಿ ಗ್ರಾಮೀಣ ಬಸ್‌ ನಿಲ್ದಾಣ ಕಾಮಗಾರಿ ಶೀಘ್ರ ಆರಂಭ: ಶಾಸಕ ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ನಗರದ ಆರ್‌.ಜಿ. ರಸ್ತೆಯಲ್ಲಿರುವ ಹಳೇ ಜೈಲು ಜಾಗದಲ್ಲಿ ಕೆಎಸ್‌ಆರ್‌ಟಿಸಿ ಗ್ರಾಮೀಣ ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು.

- 19.87 ಕೋಟಿ ವೆಚ್ಚ । ಸಿಎಂ ಇಂದ ಕಾಮಗಾರಿಗೆ ಶಂಕುಸ್ಥಾಪನೆ । ನೂತನ ಡಿಸಿ ಕಚೇರಿ ಕಾಮಗಾರಿಗೂ ವೇಗ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರದ ಆರ್‌.ಜಿ. ರಸ್ತೆಯಲ್ಲಿರುವ ಹಳೇ ಜೈಲು ಜಾಗದಲ್ಲಿ ಕೆಎಸ್‌ಆರ್‌ಟಿಸಿ ಗ್ರಾಮೀಣ ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು.

ಈ ಕಾಮಗಾರಿಗೆ ಬೇಕಾಗಿರುವ ಸುಮಾರು ₹19.87 ಕೋಟಿ ರು.ಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇಲ್ಲಿ ಸುಸಜ್ಜಿತವಾದ ಬಸ್‌ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭದ್ರಾ ಉಪ ಕಣಿವೆ ಯೋಜನೆಯಡಿ ಕೆರೆ ತುಂಬಿಸುವ ಯೋಜನೆಗೆ ₹407 ಕೋಟಿ ವೆಚ್ಚವಾಗಲಿದ್ದು, ಈ ಸಂಬಂಧ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಚಿಕ್ಕಮಗಳೂರು ತಾಲೂಕಿನ ಹೆಚ್ಚು ಕೆರೆಗಳಿಗೆ ನೀರು ಸಿಗಲಿದೆ. ಈ ಕಾಮಗಾರಿಗೂ ಸಹ ಮುಖ್ಯಮಂತ್ರಿಯವರು ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ ಎಂದರು.

ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾಧಿಕಾರಿಗಳ ಕಚೇರಿ ನೂತನ ಕಟ್ಟಡ ಕಾಮಗಾರಿಗೆ ₹26.48 ಕೋಟಿ ರು. ಮಂಜೂರಾಗಿದ್ದು, ಕಾಮಗಾರಿ ವೇಗವಾಗಿ ನಡೆಯುತ್ತಿದ್ದು ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯಡಿ ರಸ್ತೆಗಳ ಅಭಿವೃದ್ಧಿಗೆ ₹10 ಕೋಟಿ ರು. ವಿಶೇಷ ಅನುದಾನ ಕ್ಷೇತ್ರಕ್ಕೆ ಬಂದಿದೆ. ಕೆರೆ ಹಾಗೂ ಕಾಲುವೆ ದುರಸ್ತಿ ಕಾಮಗಾರಿಗೆ ಸರ್ಕಾರ ₹25 ಕೋಟಿ ರು. ಅನುದಾನ ನೀಡಿದ್ದು, ಸದ್ಯದಲ್ಲೇ ಟೆಂಡರ್‌ ಕರೆಯಲಾಗುವುದು. ನಗರಾಭಿವೃದ್ಧಿ ಇಲಾಖೆಯಿಂದ ಎಸ್‌ಎಫ್‌ಸಿ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ₹10 ಕೋಟಿ ರು. ಮಂಜೂರಾಗಿದೆ ಎಂದು ಹೇಳಿದರು.

ಕಾಲೋನಿಗಳ ರಸ್ತೆ ಅಭಿವೃದ್ಧಿಗೆ ₹5 ಕೋಟಿ, ಮಲ್ಲೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಕ್ಕೆ ₹22 ಕೋಟಿ, ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ₹7 ಕೋಟಿ, ವಸತಿ ನಿಲಯಗಳ ದುರಸ್ತಿಗೆ ₹2 ಕೋಟಿ ಮಂಜೂರಾಗಿದೆ. ಹಿಂದುಳಿದ ವರ್ಗಗಳ ಇಲಾಖೆಯಿಂದ ಹೊಸದಾಗಿ ಹಾಸ್ಟೆಲ್‌ ಮಂಜೂರಾಗಿದೆ. ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ ಮಂಜೂರಾಗಿದೆ ಎಂದರು.

ಭೈರಾಪುರ ರಣಘಟ್ಟ ಕಾಲುವೆ ಅಭಿವೃದ್ಧಿಗೆ ₹9.90 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 2024-25ನೇ ಸಾಲಿನಲ್ಲಿ ಚಿಕ್ಕಮಗಳೂರು ವೈದ್ಯಕೀಯ ಕಾಲೇಜಿಗೆ ಹೆಚ್ಚುವರಿ ₹80 ಕೋಟಿ ರು. ಒದಗಿಸಲಾಗಿದೆ. ₹187 ಕೋಟಿ ವೆಚ್ಚದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಈ ಸಾಲಿನಲ್ಲಿ ₹39.6 ಕೋಟಿ ಹಣ ಒದಗಿಸಲಾಗಿದೆ. ಸ್ತನ ಕ್ಯಾನ್ಸರ್‌ ಪತ್ತೆ ಹಚ್ಚಲು ಜಿಲ್ಲಾಸ್ಪತ್ರೆ ಆವರಣದಲ್ಲಿ ಮ್ಯಾಮೋಗ್ರಾಫಿ ವಿಭಾಗ ತೆರೆಯಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನ ₹50 ಕೋಟಿ ನೀಡಲಾಗಿದ್ದು, ಇದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಗೆ ₹51 ಕೋಟಿ ಮಂಜೂರಾಗಿದೆ. ಮುಖ್ಯಮಂತ್ರಿಗಳ ವಿಶೇಷ ನಿಧಿ ಯಿಂದ 2023-24ನೇ ಸಾಲಿನಲ್ಲಿ ₹15 ಕೋಟಿ ಬಿಡುಗಡೆಯಾಗಿದೆ ಎಂದು ಹೇಳಿದ ಶಾಸಕರು, ಹಿಂದಿನ ಶಾಸಕರು ಮಂಜೂರಾತಿ ನೀಡಿದ್ದ ಕೆಲವು ಕಾಮಗಾರಿಗಳನ್ನು ರಿಟೆಂಡರ್‌ ಮಾಡಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್‌, ಸಿಡಿಎ ಅಧ್ಯಕ್ಷ ನಯಾಜ್‌ ಅಹಮದ್‌, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ತಾಲೂಕು ಅಧ್ಯಕ್ಷ ಮಲ್ಲೇಶ್‌ಸ್ವಾಮಿ, ತನೋಜ್‌ ನಾಯ್ಡು ಉಪಸ್ಥಿತರಿದ್ದರು.

8 ಕೆಸಿಕೆಎಂ 1ಚಿಕ್ಕಮಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಸೋಮವಾರ ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಾ. ಅಂಶುಮಂತ್‌, ಎಂ.ಸಿ. ಶಿವಾನಂದಸ್ವಾಮಿ, ಮಂಜೇಗೌಡ, ಮಲ್ಲೇಶ್‌ಸ್ವಾಮಿ ಇದ್ದರು.