90% ಫಲಿತಾಂಶ ಬಂದರೆ ಶಿಕ್ಷಕರ ಪಾದಪೂಜೆ

| Published : Sep 09 2025, 01:00 AM IST

ಸಾರಾಂಶ

ತಾಲೂಕಿನ ಶಾಲೆಗಳಲ್ಲಿ ಪ್ರಸಕ್ತ ವರ್ಷದ ಎಸ್‌ಎಸ್ಎಲ್‌ಸಿ ಫಲಿತಾಂಶ ಶೇ.90ರಷ್ಟು ಬಂದರೆ ಶಿಕ್ಷಕರ ಪಾದಪೂಜೆ ಮಾಡುವುದಾಗಿ ಶಾಸಕ ಡಾ. ರಂಗನಾಥ್‌ ಘೋಷಣೆ ಮಾಡಿದ್ದಾರೆ.

ಕನ್ನಡ ಪ್ರಭ ವಾರ್ತೆ ಕುಣಿಗಲ್ ತಾಲೂಕಿನ ಶಾಲೆಗಳಲ್ಲಿ ಪ್ರಸಕ್ತ ವರ್ಷದ ಎಸ್‌ಎಸ್ಎಲ್‌ಸಿ ಫಲಿತಾಂಶ ಶೇ.90ರಷ್ಟು ಬಂದರೆ ಶಿಕ್ಷಕರ ಪಾದಪೂಜೆ ಮಾಡುವುದಾಗಿ ಶಾಸಕ ಡಾ. ರಂಗನಾಥ್‌ ಘೋಷಣೆ ಮಾಡಿದ್ದಾರೆ.

ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅವರು, ಶಿಕ್ಷಕರು ರಾಜಕೀಯ ಬಿಟ್ಟು ಮಕ್ಕಳ ಶಿಕ್ಷಣದ ಕಡೆ ಗಮನ ಕೊಡಿ. ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕರು ಹಲವಾರು ಪಕ್ಷಗಳಲ್ಲೂ ಮತ್ತು ಬೇಡದ ವಿಚಾರಗಳಲ್ಲಿ ರಾಜಕೀಯ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಶಿಕ್ಷಕರು ತಮ್ಮ ಶಿಷ್ಯರ ಸರ್ವತೋಮುಖ ಏಳಿಗೆ ಅಭಿವೃದ್ಧಿಗೆ ಸದಾ ಶ್ರಮಿಸುತ್ತಾ ಸಮಾಜಕ್ಕೆ ಉತ್ತಮ ಪ್ರಜೆ ನೀಡುವ ಉತ್ತಮ ಕಾರ್ಯ ಮಾಡುತ್ತಾರೆ. ಈ ಮಧ್ಯೆ ಕೆಲ ಶಿಕ್ಷಕರು ರಾಜಕಾರಣ ಮಾಡುತ್ತಾ ತಮ್ಮ ವೃತ್ತಿಗೆ ದ್ರೋಹ ಬಗೆಯುವುದು ಸರಿಯಲ್ಲ. ತಾಲೂಕಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಈ ಬಾರಿ ಶೇ.90 ಕ್ಕಿಂತ ಹೆಚ್ಚು ಬರಲು ಶಿಕ್ಷಕರು ಶ್ರಮಿಸಬೇಕು. ಈ ರೀತಿ ಫಲಿತಾಂಶ ಬಂದಲ್ಲಿ ಶಿಕ್ಷಕರ ಪಾದಪೂಜೆ ಮಾಡುತ್ತೇನೆ ಎಂದರು.

ಶಿಕ್ಷಕರ ಮೇಲೆ ಬಿಸಿಯೂಟ ಒತ್ತಡ ಕಡಿಮೆ ಮಾಡುವ ಬೇಡಿಕೆಗೆ ಸರ್ಕಾರದ ಮಟ್ಟದಲ್ಲಿ ಶ್ರಮಿಸುತ್ತೇನೆ. ಅತಿಥಿ ಶಿಕ್ಷಕರ ವೇತನ ಏರಿಕೆಗೂ ಸರ್ಕಾರದ ಮಟ್ಟದಲ್ಲಿ ಶ್ರಮ ಹಾಕುತ್ತೇನೆ ಎಂದರು . ಒಳಮೀಸಲಾತಿ ಜಾರಿಯಾದ ನಂತರ 20 ಸಾವಿರ ಶಿಕ್ಷಕರ ನೇಮಕವಾಗಲಿದ್ದು ತಾಲೂಕಿನ ಶಿಕ್ಷಕರ ಕೊರತೆ ನೀಗಲಿದೆ ಎಂದರು.

ಪ್ರಧಾನ ಭಾಷಣ ಮಾಡಿದ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್, ಕನ್ನಡಭಾಷೆ ಉಳಿಸಿ, ಬೆಳೆಸಿ, ಅಭಿವೃದ್ಧಿಗೊಳಿಸುವ ಮಹತ್ತರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ, ಬೋಧನ ಅವಧಿಯಲ್ಲಿ ಒಗಟು, ರಾಮಾಯಣ, ಮಹಾಭಾರತ ಕಿರುಕಥೆ, ಕಥೆಗಳನ್ನು ಅಳವಡಿಸಿಕೊಂಡು ಬೋಧನೆ ಮಾಡುವ ಮಕ್ಕಳಲ್ಲಿ ಕಲಿಕೆ, ಸಂಸ್ಕಾರ ವೃದ್ಧಿಸಬೇಕು. ಪ್ರತಿಯೊಬ್ಬ ಶಿಕ್ಷಕರಲ್ಲೂ ವಿಶೇಷ ಜ್ಞಾನ, ಅದ್ಭುತ ಶಕ್ತಿ ಇದೆ, ಇದನ್ನು ಬಳಸಿಕೊಂಡು ಮಕ್ಕಳಿಗೆ ಪರಿಣಾಮಕಾರಿ ಬೋಧನೆ ಮಾಡುವ ಮೂಲಕ ಮಕ್ಕಳ ಸರ್ವತೋಮುಖವಾಗಿ ಜ್ಞಾನ ಗ್ರಹಿಸಿ ಪ್ರಶ್ನೆ ಮಾಡುವ ರೀತಿಯಲ್ಲಿ ಸಿದ್ಧಗೊಳಿಸಬೇಕಿದೆ. ಶಿಕ್ಷಕರು ಉತ್ತಮ ಸಮಾಜ ನಿರ್ಮಾಣ ಮಾಡುವ ಹೊಣೆಗಾರಿಕೆ ಇದೆ ಎಂಬುದ ಮರೆಯಬಾರದು ಎಂದರು. ಉತ್ತಮ ಸಾಧನೆ ಮಾಡಿದ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬಿಇಒ ಬೋರೇ ಗೌಡ, ಪುರಸಭೆ ಸದಸ್ಯರಾದ ಮಂಜುಳಮ್ಮ, ಜಯಲಕ್ಷ್ಮೀ, ಕಸಾಪ ಅಧ್ಯಕ್ಷ ಡಾ.ಕಪನಿಪಾಳ್ಯ ರಮೇಶ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಣ್ಣ, ಪ್ರಾಥಮಿಕ, ಪ್ರೌಢಶಾಲಾ ವಿವಿಧ ಶಿಕ್ಷಕ ಸಂಘದ ಪದಾಧಿಕಾರಿಗಳು ಇತರರು ಹಾಜರಿದ್ದರು.