ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಮಂಗಳೂರು ವಿಭಾಗ ಮಂಗಳೂರು-ಬೆಂಗಳೂರು ನಡುವೆ ಹೊಸದಾಗಿ ಐದು ಬಸ್‌ಗಳ ಸಂಚಾರಕ್ಕೆ ಭಾನುವಾರ ಚಾಲನೆ ನೀಡಿದೆ. ಇದರಲ್ಲಿ ಎರಡು ನೂತನ ವೋಲ್ವೋ ಮಲ್ಟಿ ಆ್ಯಕ್ಸಿಲ್ ಸೀಟರ್ 2.0 ಹಾಗೂ ಮೂರು ನೂತನ ಅಂಬಾರಿ ಉತ್ಸವ ಬಸ್‌ಗಳು ಸೇರಿವೆ. ಅಂಬಾರಿ ಉತ್ಸವ ಬಸ್‌ಗಳ ಪೈಕಿ ಒಂದು ಬಸ್ ಪ್ರತಿದಿನ ಮಧ್ಯಾಹ್ನ 1 ಗಂಟೆಗೆ ಮಂಗಳೂರು ನಿಲ್ದಾಣದಿಂದ ಹೊರಟು ಹಾಸನ ಮೂಲಕ ಸಂಚರಿಸಿ ರಾತ್ರಿ 7.30ಕ್ಕೆ ಬೆಂಗಳೂರು ತಲುಪಲಿದೆ. ಈ ಬಸ್‌ಗೆ ಟಿಕೆಟ್ ದರ ಕೂಡ ಮಾಮೂಲಿ ಅಂಬಾರಿ ಉತ್ಸವಗಳಿಗಿಂತ ಕಡಿಮೆ ಇರಲಿದೆ. ಬೆಂಗಳೂರಿನಿಂದ ರಾತ್ರಿ 11 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 6.15 ಗಂಟೆಗೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಹಗಲು ಹೊತ್ತು ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್ ಸಂಚಾರ ಇದೇ ಪ್ರಥಮ.ಇನ್ನೊಂದು ಅಂಬಾರಿ ಉತ್ಸವ ಸ್ಲೀಪರ್ ಬಸ್ ಪ್ರತಿದಿನ ರಾತ್ರಿ 9.30ಕ್ಕೆ ಮಂಗಳೂರಿನಿಂದ ಹೊರಟು ಪುತ್ತೂರು, ಮೈಸೂರು ಮೂಲಕ ಮರುದಿನ ಬೆಳಗ್ಗೆ 5.50ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಟು ಮೈಸೂರು, ಪುತ್ತೂರು ಮೂಲಕ ಮರುದಿನ ಬೆಳಗ್ಗೆ 6 ಗಂಟೆಗೆ ಮಂಗಳೂರು ತಲುಪಲಿದೆ. ಪುತ್ತೂರು ಮೂಲಕ ರಾಜಧಾನಿ ಬೆಂಗಳೂರಿಗೆ ಅಂಬಾರಿ ಬಸ್ ಸಂಚಾರ ಏರ್ಪಡಿಸುವಂತೆ ಸ್ಥಳೀಯ ಶಾಸಕ ಅಶೋಕ್ ಕುಮಾರ್ ರೈ ಅವರು ಸಾರಿಗೆ ಸಚಿವರಲ್ಲಿ ಮನವಿ ಮಾಡಿದ್ದರು.
ಬೆಂಗಳೂರಿಗೆ ಹೊಸ ಬಸ್:ಉಳಿದ ಮಲ್ಟಿ ಆ್ಯಕ್ಸಿಲ್ 2.0 ಬಸ್‌ಗಳ ಪೈಕಿ ಮಂಗಳೂರಿನಿಂದ ಬೆಳಗ್ಗೆ 10 ಗಂಟೆಗೆ ಹೊರಟು ಹಾಸನ ಮೂಲಕ ಸಂಜೆ 5.30 ಗಂಟೆಗೆ ಬೆಂಗಳೂರು ತಲುಪಲಿದೆ. ಅಲ್ಲಿಂದ ರಾತ್ರಿ 10.10 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 5.45 ಗಂಟೆಗೆ ಮಂಗಳೂರು ತಲುಪಲಿದೆ. ಪ್ರತಿದಿನ ರಾತ್ರಿ 9.30ಕ್ಕೆ ಮಂಗಳೂರಿನಿಂದ ಹೊರಡುವ ಮಲ್ಟಿ ಆ್ಯಕ್ಸಿಲ್ 2.0 ಬಸ್ ಹಾಸನ ಮೂಲಕ ಮರುದಿನ ಬೆಳಗ್ಗೆ 5.40 ಗಂಟೆಗೆ ಬೆಂಗಳೂರು ತಲುಪಲಿದೆ. ಅಲ್ಲಿಂದ ಬೆಳಗ್ಗೆ 10 ಗಂಟೆಗೆ ಹೊರಟು ಸಂಜೆ 6.10ಕ್ಕೆ ಮಂಗಳೂರು ತಲುಪಲಿದೆ. ಇನ್ನೊಂದು ಮಲ್ಟಿ ಆ್ಯಕ್ಸಿಲ್ ಬಸ್ ಸಂಜೆ 5 ಗಂಟೆಗೆ ಮಂಗಳೂರಿನಿಂದ ಹೊರಟು ಹಾಸನ ಮೂಲಕ ಮಧ್ಯರಾತ್ರಿ 12.15 ಗಂಟೆಗೆ ಬೆಂಗಳೂರು ತಲುಪಲಿದೆ. ಅಧಿವೇಶನದಲ್ಲಿ ಪ್ರಸ್ತಾಪ: ಐವನ್ ಡಿಸೋಜಾಕೆಎಸ್ಆರ್‌ಟಿಸಿ ಮಂಗಳೂರು ವಿಭಾಗ ಮೇಲ್ದರ್ಜೆಗೇರಿಸುವ ಆವಶ್ಯಕತೆ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗಕ್ಕೆ ಎರಡು ನೂತನ ವೋಲ್ವೊ ಮಲ್ಟಿ ಆ್ಯಕ್ಸೆಲ್ ಸೀಟರ್ ಹಾಗೂ ಮೂರು ನೂತನ ಅಂಬಾರಿ ಉತ್ಸವ ಬಸ್‌ಗಳಿಗೆ ವಿಭಾಗದ ಬಿಜೈ ನಿಲ್ದಾಣದಲ್ಲಿ ಭಾನುವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ, ಪ್ರಥಮ ಬಾರಿಗೆ ವಿಭಾಗದಿಂದ ಹಗಲು ವೇಳೆ ಬೆಂಗಳೂರಿಗೆ ಹವಾನಿಯಂತ್ರಿತ ಸ್ಲೀಪರ್ ಬಸ್ ಪರಿಚಯಿಸಲಾಗುತ್ತಿದೆ. ಪುತ್ತೂರು- ಸುಳ್ಯ- ಮಡಿಕೇರಿ ಮಾರ್ಗ ಎಸಿ ಸ್ಲೀಪರ್ ಪ್ರಥಮ ಬಾರಿಗೆ ಆರಂಭಿಸಲಾಗುತ್ತಿದೆ ಎಂದರು.ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಮಂಗಳೂರು ತಾಲೂಕು ಅಧ್ಯಕ್ಷ ಸುರೇಂದ್ರ ಕಾಂಬಳಿ, ಪಾಲಿಕೆ ಮಾಜಿ ಸದಸ್ಯೆ ಎಸ್.ಅಪ್ಪಿ, ಕೆಎಸ್‌ಆರ್‌ಟಿಸಿ ಡಿವಿಜನಲ್ ಟ್ರಾಫಿಕ್ ಅಧಿಕಾರಿ ಕಮಲ್ ಕುಮಾರ್, ಅಸಿಸ್ಟೆಂಟ್ ಟ್ರಾಫಿಕ್ ಮೆನೇಜರ್ ನಿರ್ಮಲಾ, ಡಿಪೋ ಮೆನೇಜರ್ ಪ್ರೀತ ಕುಮಾರಿ, ಮೂರನೇ ಡಿಪೋ ಮೆನೇಜರ್ ಮಂಜುನಾಥ್ ಮತ್ತಿತರರಿದ್ದರು.