170 ಗಂಟೆ ಭರತನಾಟ್ಯ ಪ್ರದರ್ಶನ: ವಿಶ್ವ ದಾಖಲೆ ಸೃಷ್ಟಿಸಿದ ರೆಮೋನಾ!

| Published : Jul 29 2025, 01:47 AM IST

ಸಾರಾಂಶ

ಈ ಹಿಂದೆ ಈ ವಿಶ್ವ ದಾಖಲೆಯು 127 ಗಂಟೆಗಳ ಭರತನಾಟ್ಯ ಪ್ರದರ್ಶನ ನೀಡಿದ ಭಾರತದ ಸೃಷ್ಟಿ ಸುಧೀರ್ ಜಗ್ತಾಪ್ ಹೆಸರಿನಲ್ಲಿತ್ತು. ಈ ದಾಖಲೆಯನ್ನು ಮಂಗಳೂರಿನ ರೆಮೋನಾ ಎವೆಟ್ ಪಿರೇರಾ ಹಿಂದಿಕ್ಕಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಮಂಗಳೂರು: ಸುದೀರ್ಘ ಏಳು ದಿನ- 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಈ ಹಿಂದಿನ ವಿಶ್ವ ದಾಖಲೆಯನ್ನು ಮುರಿದು ನಗರದ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ, ನೃತ್ಯ ಪಟು ರೆಮೋನಾ ಎವೆಟ್ ಪಿರೇರಾ ಅವರು ಗೋಲ್ಡನ್ ಬುಕ್ ಆಫ್‌ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ.

ಈ ಹಿಂದೆ ಈ ವಿಶ್ವ ದಾಖಲೆಯು 127 ಗಂಟೆಗಳ ಭರತನಾಟ್ಯ ಪ್ರದರ್ಶನ ನೀಡಿದ ಭಾರತದ ಸೃಷ್ಟಿ ಸುಧೀರ್ ಜಗ್ತಾಪ್ ಹೆಸರಿನಲ್ಲಿತ್ತು. ಈ ದಾಖಲೆಯನ್ನು ರೆಮೋನಾ ಎವೆಟ್ ಪಿರೇರಾ ಹಿಂದಿಕ್ಕಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸೋಮವಾರ ಗೋಲ್ಡನ್ ಬುಕ್ ಆಫ್‌ ವರ್ಲ್ಡ್ ರೆಕಾರ್ಡ್‌ನ ಭಾರತದ ಪ್ರತಿನಿಧಿ ಡಾ. ಮನೀಶ್ ವಿಷ್ನೋಯಿ ಅವರು ಈ ದಾಖಲೆಯ ಪ್ರಮಾಣ ಪತ್ರವನ್ನು ಪ್ರದಾನ ಮಾಡಿದರು.ನಗರದ ಸಂತ ಅಲೋಶಿಯಸ್‌ ಕಾಲೇಜಿನ ಎಲ್ಐಸಿಆರ್‌ ರಾಬರ್ಟ್‌ ಸಿಕ್ವೇರಾ ಸಭಾಂಗಣದಲ್ಲಿ ಜು.21ರಂದು ಬೆಳಗ್ಗೆ 10 ಗಂಟೆಗೆ ಭರತನಾಟ್ಯ ಪ್ರದರ್ಶನ ಆರಂಭಿಸಿದ್ದ ರೆಮೋನಾ ಜು.28ರಂದು ಮಧ್ಯಾಹ್ನ 12 ಗಂಟೆಯವರೆಗೆ ನೃತ್ಯ ಮುಂದುವರಿಸಿದ್ದರು. ಮೂರು ಗಂಟೆಗೊಮ್ಮೆ 15 ನಿಮಿಷ ವಿರಾಮದೊಂದಿಗೆ ಸತತ 7 ದಿನಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಶ್ರೀ ಗಣೇಶನ ಸ್ತುತಿಯೊಂದಿಗೆ ಪ್ರದರ್ಶನ ಆರಂಭಿಸಿ ದುರ್ಗೆಯ ಹಾಡಿನೊಂದಿಗೆ ದಾಖಲೆಯ ಪ್ರದರ್ಶನ ಸಂಪನ್ನಗೊಳಿಸಿದರು. ಕಳೆದ ಒಂದು ವಾರದ ಅವಧಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಮಂದಿ ರೆಮೋನಾ ಭರತನಾಟ್ಯ ಪ್ರದರ್ಶನ ವೀಕ್ಷಣೆಗೆ ಆಗಮಿಸಿದ್ದರು.

ಗೋಲ್ಡನ್ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ ಹಸ್ತಾಂತರ ಸಮಾರಂಭದಲ್ಲಿ ನೃತ್ಯ ಗುರು ವಿದ್ಯಾ ಮುರಳೀಧರ್‌, ರೆಮೋನಾ ತಾಯಿ ಗ್ಲ್ಯಾಡಿಸ್, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ, ಸಂತ ಅಲೋಶಿಯಸ್ ಸಂಸ್ಥೆಯ ರೆಕ್ಟರ್ ರೆ.ಫಾ. ಮೆಲ್ವಿನ್ ಜೆ. ಪಿಂಟೋ ಇದ್ದರು.ರೆಮೋನಾ ವಿಶ್ವ ದಾಖಲೆಯ ಕುರಿತು ಪ್ರತಿಕ್ರಿಯಿಸಿದ ಗೋಲ್ಡನ್ ಬುಕ್ ಆಫ್‌ ವರ್ಲ್ಡ್ ರೆಕಾರ್ಡ್‌ನ ಭಾರತೀಯ ಪ್ರತಿನಿಧಿ ಡಾ. ಮನೀಶ್ ವಿಷ್ನೋಯಿ, ರೆಮೋನಾ ಅವರು ಭರತನಾಟ್ಯದ 7 ದಿನಗಳ ಮಾರಥಾನ್ ಬಗ್ಗೆ ಸಂಸ್ಥೆಗೆ ಕೋರಿಕೊಂಡಾಗ, ರೆಕಾರ್ಡ್‌ಗೆ 5 ದಿನಗಳ ನಿರಂತರ ನೃತ್ಯ ಸಾಕು ಎಂದಿದ್ದೆವು. ಆದರೆ ಆಕೆ ಮಾತ್ರ 7 ದಿನಗಳ ಕಾಲ ನೃತ್ಯ ಮಾಡುವುದಾಗಿ ಆರಂಭದಲ್ಲಿಯೇ ಹೇಳಿಕೊಂಡಿದ್ದಳು. ಆ ಮೂಲಕ 10,200 ನಿಮಿಷಗಳ ನೃತ್ಯ ದಾಖಲೆಯನ್ನು ಮಾಡಿದ್ದಾರೆ ಎಂದು ತಿಳಿಸಿದರು.