ಮಣ್ಣಿನ ಮಗನಾದ ಕುಮಾರಸ್ವಾಮಿಯವರಿಗೆ ನೇಗಿಲ ಯೋಗಿಗಳ ಸಂಕಷ್ಟದ ಅರಿವಿದೆ. ಇನ್ನೆರಡು ವರ್ಷಗಳ ನಂತರ ನಮ್ಮ ಪಕ್ಷ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ

ಕೊಪ್ಪಳ: ರೈತರ ಒಳಿತಿಗಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಶೀಘ್ರವೇ ಕೆಲವು ಯೋಜನೆ ಪ್ರಕಟಿಸುವ ಸಾಧ್ಯತೆ ಇದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಹೇಳಿದರು.

ಕುಮಾರಸ್ವಾಮಿಯವರ 66ನೇ ಜನ್ಮದಿನದ ಅಂಗವಾಗಿ ಮಂಗಳವಾರ ಶ್ರೀಗವಿಮಠದಲ್ಲಿ ವಿಶೇಷ ಪೂಜೆ ನೆರವೇರಿಸಿದ ನಂತರ ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.

ಮಣ್ಣಿನ ಮಗನಾದ ಕುಮಾರಸ್ವಾಮಿಯವರಿಗೆ ನೇಗಿಲ ಯೋಗಿಗಳ ಸಂಕಷ್ಟದ ಅರಿವಿದೆ. ಇನ್ನೆರಡು ವರ್ಷಗಳ ನಂತರ ನಮ್ಮ ಪಕ್ಷ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಅಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತ. ಅಧಿಕಾರದಲ್ಲಿದ್ದಾಗ ಬೃಹತ್ ಪ್ರಮಾಣದಲ್ಲಿ ರೈತರ ಸಾಲ ಮನ್ನಾ ಮಾಡಿದ ಅವರಿಗೆ ರೈತರಿಗೆ ಇನ್ನಷ್ಟು ಉಪಯೋಗವಾಗುವ ಯೋಜನೆ ಹಮ್ಮಿಕೊಳ್ಳುವ ಯೋಚನೆಯಿದೆ. ಅದು ಶೀಘ್ರದಲ್ಲಿ ಸಾಧ್ಯವಾಗಬಹುದು ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಭೂಮರೆಡ್ಡಿ ಮಾತನಾಡಿ, ಕೇಂದ್ರ ಸಚಿವರ ಜನ್ಮದಿನದ ಅಂಗವಾಗಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲು ಜಿಲ್ಲಾ ಘಟಕ ನಿರ್ಧರಿಸಿತ್ತು. ಪಕ್ಷದ ಮುಖಂಡರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಪಕ್ಷದ ಕಾರ್ಯಕರ್ತರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು ಎಂದರು.

ಇದೇ ಮೊದಲ ಸಲ ಜಿಲ್ಲಾ ಘಟಕ ಕುಮಾರಸ್ವಾಮಿಯವರ ಜನ್ಮದಿನ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಿತ್ತು. ನಾವು ರಕ್ತದಾನ ಮಾಡಿ ನಾಲ್ಕು ಜನಕ್ಕೆ ನೆರವಾದ ಸಂತಸವಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮ ಮುಂದುವರೆಯಲಿದೆ ಎಂದು ರಕ್ತದಾನ ಮಾಡಿದ ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ ಹೇಳಿದರು.

ಜಿಲ್ಲಾ ವಕ್ತಾರ ಮಲ್ಲನಗೌಡ ಕೋಣನಗೌಡ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ, ಒಬಿಸಿ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ, ಮಹಿಳಾ ಘಟಕದ ನಗರ ಅಧ್ಯಕ್ಷ ನಿರ್ಮಲಾ ಮೇದಾರ್, ಉಪಾಧ್ಯಕ್ಷೆ ರತ್ನಮ್ಮ ಹಿರೇಮಠ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಏಣಿಗಿ, ಪ್ರವೀಣ್ ಕುಮಾರ್ ಇಟಗಿ, ನಗರ ಘಟಕದ ಪದಾಧಿಕಾರಿ ಶ್ರೀನಿವಾಸ್ ಗೊಂದಳಿ, ಗಂಗಾಧರ್ ವಸ್ತ್ರದ, ಶಿವರಾಜ್ ಮಠಪತಿ, ರಂಗಪ್ಪ ಭೋವಿ, ಬಸವ ಶ್ರೀ, ಶಂಭು ಕೂಕನಪಳ್ಳಿ, ಜಿಲ್ಲಾ ಸಹ ವಕ್ತಾರ ಯಮನೂರಪ್ಪ ಕಟಿಗಿ, ಮಾರುತಿ, ವೀರೇಶ್ ಅಂಗಡಿ ಹಾಗೂ ಮೌನೇಶ್ ಕಿನ್ನಾಳ ಉಪಸ್ಥಿತರಿದ್ದರು.