ಸಾರಾಂಶ
ಮಲ್ಲನಘಟ್ಟ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಮಾಹಿತಿ । ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣತಾಲೂಕಿನ ಕಸಬಾ ಹೋಬಳಿ ಮಲ್ಲವನಘಟ್ಟದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ, ನೂತನ ವಿಮಾನ ಗೋಪುರ ಕಳಶ ಪ್ರತಿಷ್ಠಾಪನೆ ಹಾಗೂ ಮಹಾ ಕುಂಭಾಭಿಷೇಕ ಮಾ.೧೪ ರಿಂದ ೧೬ರ ವರೆಗೆ ನಡೆಯಲಿದೆ ಎಂದು ಮಲ್ಲನಘಟ್ಟ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಸುಮಾರು ೫೦೦ ವರ್ಷಗಳ ಇತಿಹಾಸವಿರುವ ಶ್ರೀ ವೀರಾಂಜನೇಯ ದೇವಾಲಯ ಶಿಥಿಲಗೊಂಡಿದ್ದು ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಸಹಕಾರದೊಂದಿಗೆ ಒಂದು ಕೋಟಿ ರು. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ. ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜಿನ ವೇದಾಂತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಆಚಾರ್ಯ ವಿದ್ವಾನ್ ವಿ.ಆರ್.ಹರಿಪ್ರಸಾದ್ ಗುರೂಜಿ ನೇತತ್ವದಲ್ಲಿ ಮಾ.೧೪ರ ಗುರುವಾರ ಸಾಯಂಕಾಲ ೫ ಗಂಟೆಗೆ ಗೋಧೂಳಿ ಲಗ್ನದಲ್ಲಿ ಅಕ್ರೋಧಕ ಸಂಗ್ರಹಣೆಯೊಂದಿಗೆ ಗಂಗಾಪೂಜೆ, ಮೃತ್ತಿಕಾ ಸಂಗ್ರಹಣೆ, ಸ್ವಸ್ತಿವಾಚನ, ಅನುಜ್ಞೆ, ವಿಶ್ವಕ್ಷೇನಾರಾಧನೆ, ಭಗವದ್ ವಾಸುದೇವ ಪುಣ್ಯಾಹವಾಚನ, ರಕ್ಷಾಬಂಧನ, ಆಚಾರ್ಯ ಋತ್ವಿಕರಣ, ಅಂಕುರಾರ್ಪಣೆ, ದ್ವಾರತೋರಣ ಧ್ವಜಕುಂಭಾರಾಧನೆ, ವಾಸ್ತು-ರಾಕ್ಟೋಘ್ರ ಆರಾಧನೆ, ಯಾಗಶಾಲಾ ಪ್ರವೇಶ, ಅಗ್ನಿ ವಿಶ್ವಕ್ಸೆನಹೋಮ, ಅಂಕುರಾರ್ಪಣಾಂಗಹೋಮ, ವಾಸ್ತುಹೋಮ, ರಾಕ್ಷೆಘ್ನಹೋಮ, ನೃಸೂಕ್ತಾದಿಹೋಮ, ಲಘುಪೂರ್ಣಾಹುತಿ, ಅಷ್ಟದಿಕ್ಷಾಲಕಬಲಿ, ವಾಸ್ತುಬಲಿ, ದೃಷ್ಟಿದೋಷ ನಿವಾರಣಾಂಗ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಇದೇ ದಿನ ಮಧ್ಯಾಹ್ನ ೩ ಗಂಟೆಗೆ ವೀರಗಾಸೆ ಕುಣಿತ ಹಾಗೂ ರಾತ್ರಿ ೯ ಗಂಟೆಗೆ ರಾಮಾಯಣ ಹರಿಕಥೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.ಮಾ.೧೫ರ ಶುಕ್ರವಾರ ಪ್ರಾತಃಕಾಲ ಸುಪ್ರಭಾತಸೇವೆ, ವೇದಪಾರಾಯಣ, ಪ್ರಬಂಧಪಾರಾಯಣ, ನಿತ್ಯಾರಾಧನೆ, ಪುಣ್ಯಾಹ, ಪಂಚಗವ್ಯ ಆರಾಧನೆ, ಪಂಚಗವ್ಯ ಸ್ನಪನ, ಆದಿವಾಸರಗಳು, ದ್ವಾರತೋರಣ ಧ್ವಜಕುಂಭಾರಾಧನೆ, ವಿಶ್ವಕ್ಸೆನಾರಾಧನೆ, ನವಗ್ರಹ ಆರಾಧನೆ, ಮೃತ್ಯುಂಜಯ ಆರಾಧನೆ, ಉಪಕುಂಭಾರಾಧನೆ ಪ್ರಧಾನ ಕಳಶಾರಾಧನೆ, ವಿಮಾನಗೋಪುರ ಕಳಶಾರಾಧನೆ, ವಿಶ್ವಕ್ಷೆನಗಣಹೋಮ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಸಾಯಂಕಾಲ ಪೂಜೆ ವೇದ ಪ್ರಬಂಧ ಪಾರಾಯಣದೊಂದಿಗೆ ಚತುಸ್ಥಾನಾರ್ಚನೆ, ನಿತ್ಯಹೋಮ, ಮೂರ್ತಿಹೋಮ, ಅಷ್ಟಮಹಾಲಕ್ಷ್ಮಿಹೋಮ, ಜೀವಾದಿತತ್ವನ್ಯಾಸಾದಿಹೋಮ, ಶ್ರೀ ರಾಮತಾರಕಹೋಮ, ಕಾರ್ಯಸಿದ್ಧಿ ಆಂಜನೇಯ ಹೋಮ ಸ್ಥಿರಬಿಂಬ, ನ್ಯಾಸಪೂರ್ವಕ ಸ್ಥಿರಬಿಂಬ ಹೋಮ, ಸುದರ್ಶನಹೋಮ, ನೃಸೂಕ್ತಪೂರ್ವಕಶಾಂತಿಹೋಮ, ಮಂತ್ರಪುಷ್ಪ, ಹವಿರ್‌ನಿವೇದನಾ, ಬಲಿಹರಣ, ಮಹಾಮಂಗಳಾರತಿ, ಶಾತ್ತುಮೊರೈ, ತೀರ್ಥ ಪ್ರಸಾದ ವಿನಿಯೋಗ ನಡೆಸಲಾಗುವುದು. ಇದೇ ದಿನ ಮಧ್ಯಾಹ್ನ ೩ ಗಂಟೆಗೆ ಡೊಳ್ಳುಕುಣಿತ ಹಾಗೂ ರಾತ್ರಿ ೯ ಗಂಟೆಗೆ ಕುರುಕ್ಷೇತ್ರ ನಾಟಕ ಆಯೋಜಿಸಲಾಗಿದೆ ಎಂದು ಹೇಳಿದರು.
ಮಾ.೧೬ರ ಶನಿವಾರ ಪ್ರಾತಃಕಾಲ ಸುಪ್ರಭಾತ ಸೇವೆ, ವೇದ-ಪ್ರಬಂಧ ಪಾರಾಯಣ, ನಿತ್ಯಾರಾಧನೆ, ಪುಣ್ಯಾಹ, ನಿತ್ಯಹೋಮ, ಮೂರ್ತಿಹೋಮ, ಪರಿವಾರಾಧಿಹೋಮ, ವಿಷ್ಣುಸಹಸ್ರನಾಮಹೋಮ, ನೃಸೂಕ್ತದಿಹೋಮ, ಶ್ರೀಸೂಕ್ತಧಿಹೋಮ ಪೂರ್ವಕ ಶಾಂತಿಹೋಮ, ಮಹಾಪೂರ್ಣಾಹುತಿ, ಕುಂಭೋದ್ವಾಸನ ಕಳಾಸಂಯೋಜನ ಮಹಾಕುಂಬಾಭಿಷೇಕ, ಮಹಾಮಂಗಳಾರತಿ, ಶಾತ್ತುಮೊರೈ, ತೀರ್ಥಪ್ರಸಾದ ವಿನಿಯೋಗ ನಡೆಯುತ್ತದೆ. ಇದೇ ದಿನ ಮಧ್ಯಾಹ್ನ ೩ ಗಂಟೆಗೆ ವೀರಗಾಸೆ ಕುಣಿತ ಹಾಗೂ ರಾತ್ರಿ ಸತ್ಯವ್ರತ ಅಥವಾ ಶನಿಪ್ರಭಾವ ನಾಟಕವನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮಕ್ಕೆ ಹಾಲಿ ಸಚಿವರು, ಮಾಜಿ ಸಚಿವರು, ಜನಪ್ರತಿನಿಧಿಗಳು, ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜೇಗೌಡ, ಜವರೇಗೌಡ, ಮುಖಂಡರಾದ ನಂಜುಂಡೇಗೌಡ, ಅನಂತ್, ಉಮೇಶ್ ಭಾಗವಹಿಸಿದ್ದರು.ಸುದ್ದಿಗೋಷ್ಠಿಯಲ್ಲಿ ಮಲ್ಲನಘಟ್ಟ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಮಾತನಾಡಿದರು.