ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವಸ್ಥಾನದ ಅಭಿವೃದ್ಧಿಗೆ ಸುದೀರ್ಘ 45 ವರ್ಷಗಳ ಕಾಲ ಅಧ್ಯಕ್ಷರಾಗಿ ನಿವೃತ್ತಿ ಹೊಂದಿದ ವಿ.ಎನ್.ವಸಂತಕುಮಾರ್‌ಗೆ ದೇವಸ್ಥಾನದ ನೂತನ ಸಮಿತಿಯ ಆಡಳಿತ ಮಂಡಳಿ ವತಿಯಿಂದ ಪೌರ ಸನ್ಮಾನ ಕಾರ್ಯಕ್ರಮ ನಡೆಯಿತು.ಕುಶಾಲನಗರ ಮಾರುತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಮಡಿಕೇರಿ ಮಾಜಿ ಶಾಸಕ ಅಪ್ಪಚ್ಚುರಂಜನ್ ಚಾಲನೆ ನೀಡಿ ಮಾತನಾಡಿ, ದೇವಾಲಯ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಧಾರ್ಮಿಕ ಕೆಲಸ ಕಾರ್ಯಗಳನ್ನು ನಡೆಸುವುದು ಕೇವಲ ಸಂಪತ್ತಿನಿಂದ ಮಾತ್ರವಲ್ಲದೆ ಶುದ್ಧ ಮನಃಸ್ಥಿತಿ ಮೂಲಕ ಕೆಲಸ ನಿರ್ವಹಿಸಬೇಕಾದ ಜವಾಬ್ದಾರಿ ಇರುತ್ತದೆ ಎಂದರು.ವಿ.ಎನ್.ವಸಂತಕುಮಾರ್ ದಂಪತಿಗೆ ಸನ್ಮಾನ ನೆರವೇರಿಸಿದ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ದೇವಾಲಯ ಕಟ್ಟುವುದು ಸುಲಭ, ದೇವಸ್ಥಾನ ಹಾಗೂ ದೇವರ ಕಾರ್ಯಗಳನ್ನು ಸುಸೂತ್ರವಾಗಿ, ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವುದು ಕಷ್ಟಕರ ಕೆಲಸ ಎಂದರು.
ದೇವಾಲಯ ಸಮಿತಿ ನಿರ್ದೇಶಕ ವಿ.ಪಿ.ಶಶಿಧರ್ ಮಾತನಾಡಿ, ಊರು ಹಾಗೂ ದೇವಾಲಯ ಮತ್ತಷ್ಟು ಅಭಿವೃದ್ಧಿಗೊಂಡು ಸಮೃದ್ದಿ ಕಾಣಬೇಕಿದೆ, ಧರ್ಮ ಹಾಗೂ ಸಂಸ್ಕೃತಿ, ಸದಾ ನೆಲೆನಿಲ್ಲಲು ಸೇವೆ ಸಲ್ಲಿಸುವಂತಹ ವಾತಾವರಣ ವೃದ್ಧಿಸಬೇಕೆಂಬ ವಸಂತಕುಮಾರ್ ಅವರ ಆಶಯ ಮುಂದುವರಿಯಲಿ ಎಂದರು.ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಂ.ಕೆ.ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಇತಿಹಾಸ ಹಾಗೂ ವಿ.ಎನ್.ವಸಂತಕುಮಾರ್ ಅವರ ಕೊಡುಗೆ ಹಾಗೂ ಸೇವೆಯ ಬಗ್ಗೆ ಮಾಹಿತಿ ನೀಡಿದರು.
ಸಮಿತಿ ಉಪಾಧ್ಯಕ್ಷ ಆರ್.ಬಾಬು, ನಿರ್ದೇಶಕ ಟಿ.ಆರ್.ಶರವಣಕುಮಾರ್, ಪ್ರಧಾನ ಅರ್ಚಕ ಆರ್ ಕೆ ನಾಗೇಂದ್ರ, ಉದ್ಯಮಿ ಎಸ್ ಎಲ್ ಎನ್ ವಿಶ್ವನಾಥನ್ ಮಾತನಾಡಿದರು.ನಿವೃತ್ತರಾಗಿರುವ ಸಮಿತಿಯ ಪದಾಧಿಕಾರಿಗಳನ್ನೂ ಗೌರವಿಸಲಾಯಿತು. ವಿವಿಧ ಸಂಘಸಂಸ್ಥೆಗಳ ಪ್ರಮುಖರು ವಸಂತಕುಮಾರ್ ಅವರನ್ನು ಗೌರವಿಸಿದರು.
ಸಮಿತಿ ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ಖಜಾಂಚಿ ಎಸ್.ಕೆ.ಸತೀಶ್, ಸಹ ಕಾರ್ಯದರ್ಶಿ ಕೆ.ಎನ್.ದೇವರಾಜ್, ನಿರ್ದೇಶಕರಾದ ವಿ.ಡಿ.ಪುಂಡರೀಕಾಕ್ಷ, ಹೆಚ್.ಎಂ.ಚಂದ್ರು ಇದ್ದರು.