ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸಾಹಿತ್ಯ ಲೋಕದ ಮೂಲಕ ಇಡೀ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ಕುವೆಂಪು 20ನೇ ಶತಮಾನದ ದೈತ್ಯ ಪ್ರತಿಭೆ ಎಂದು ಅಂತಾರಾಷ್ಟ್ರಿಯ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.ನಗರದ ರೈತ ಸಭಾಂಗಣ ಆವರಣದಲ್ಲಿರುವ ರಾಷ್ಟ್ರಕವಿ ಕುವೆಂಪು ಪ್ರತಿಮೆ ಬಳಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್ ನ್ಯಾಷಿನಲ್ ಜಿಲ್ಲೆ ಮಂಡ್ಯ, ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನ ಹಾಗೂ ವಿಶ್ವ ಮಾನವ ದಿನಾಚರಣೆ ಪ್ರಯುಕ್ತ ವಿಶ್ವಮಾನವ ಪ್ರಶಸ್ತಿ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ, ಮೊದಲ ಪಂಪ ಪ್ರಶಸ್ತಿ, ಮೊಟ್ಟ ಮೊದಲ ಬಾರಿಗೆ ಕರ್ನಾಟಕ ರತ್ನ ಪುರಸ್ಕಾರ ಪಡೆದ ಕುವೆಂಪು ಭಾರತ ಸರ್ಕಾರದಿಂದ ಪದ್ಮವಿಭೂಷಣ, ಪದ್ಮಭೂಷಣ, ಗೌರವ ಡಾಕ್ಟರೇಟ್, 2ನೇ ರಾಷ್ಟ್ರಕವಿ ಬಿರುದುಗಳನ್ನು ತಂದುಕೊಟ್ಟವರಾಗಿದ್ದಾರೆ ಎಂದು ಸ್ಮರಿಸಿದರು.ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಹೆಚ್ಚು ಕಡಿಮೆ ಒಂದೇ ಬಗೆಯಾದ ಯಶಸ್ಸನ್ನು ಗಳಿಸಿದ ಲೇಖಕರು ಯಾವುದೇ ಭಾಷೆಯಲ್ಲಾದರೂ ಹೆಚ್ಚಾಗಿ ಸಿಗುವುದಿಲ್ಲ. ಇಂತಹ ಅಪರೂಪದ ಕವಿ ಕುವೆಂಪು, ಸಾರಸತ್ವ ಕ್ಷೇತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದ ಕೀರ್ತಿ, ಶ್ರೇಯಸ್ಸು ಇವರಿಗೆ ಲಭ್ಯವಾಗುತ್ತಿದೆ ಎಂದರು.
ಕುವೆಂಪು ಮೂಲತೆ- ಕ್ರಾಂತಿಕವಿ, ಸಾಮಾಜಿಕ ಅನ್ಯಾಯಗಳ ಬಗ್ಗೆ ತಮ್ಮ ಸಾಹಿತ್ಯದ ಮೂಲಕ ಪ್ರತಿಭಟಿಸಿದ ಕನ್ನಡ ಕವಿ, ವೈಜ್ಞಾನಿಕ ನೆಲೆ, ಸಾಹಿತ್ಯದ ಮೂಲಕ ಸಮಾಜಕ್ಕೆ ಚಾಟಿ ಬೀಸಿ ಎಚ್ಚರಿಸಿದ್ದಾರೆ. ಅನಿಷ್ಟ ಪದ್ಧತಿಗಳ ಬಗ್ಗೆ ಧ್ವನಿಎತ್ತಿದ್ದಾರೆ ಎಂದರು.ಶ್ರೀರಾಮಾಯಣ ದರ್ಶನಂ ಮಹಾ ಕೃತಿಯಲ್ಲಿ ಈ ಕಾಲಘಟ್ಟದ ಸನ್ನಿವೇಶಗಳನ್ನು ಕಟ್ಟಿಕೊಟ್ಟು ಹೊಸ ತಲೆಮಾರಿಗೂ ಆಲೋಚನೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಕಾದಂಬರಿಗಳ ಮೂಲಕ ಹೊಸತನ, ಪ್ರಕೃತಿ, ಜನಜೀವನ, ಸಮಸ್ಯೆಗಳು, ಸವಾಲುಗಳಿಗೆ ಉತ್ತರಗಳನ್ನು ಬಿತ್ತರಿಸಿದ್ದಾರೆ ಎಂದರು.
ಸಾಹಿತಿ ಹನಸೋಗೆ ಸೋಮಶೇಖರ್ ಮಾತನಾಡಿ, ಕುವೆಂಪು ಎಲ್ಲಾ ಬರಹಗಾರರಿಗೆ, ಕವಿಗಳಿಗೆ, ಲೇಖಕರಿಗೆ ಸ್ಪೂರ್ತಿ, ಯುವಜನರಿಗೆ ಚೇತನವಾಗಿದ್ದಾರೆ. ಈ ನೆಲದ ತಾತ್ವಿಕ ಸಂಘರ್ಷಗಳಿಂದ ಏಳುಬೀಳುಗಳಿಂದ ವ್ಯಾತಾಸವಾಗುತ್ತಿದ್ದರೂ ಎಲ್ಲವನ್ನೂ ಮೀರಿ ಬೆಳೆದು ಮಹಾ ಕವಿಯಾದರು ಎಂದು ನುಡಿದರು.ಇದೇ ವೇಳೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಧನೆ ಕುರಿತು ಗೀತೆ ಬರೆದ ಸಾಹಿತಿ ಹನಸೋಗೆ ಸೋಮಶೇಖರ್ ಅವರಿಗೆ 2024ರ ವಿಶ್ವ ಮಾನವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಾಯಕರು ಕುವೆಂಪು ವಿರಚಿತ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಪ್ರತಿಭಾಂಜಲಿ ಡೇವಿಡ್, ಅಲಯನ್ಸ್ ಸಂಸ್ಥೆ ಜಿಲ್ಲಾ ಉಪ ರಾಜ್ಯಪಾಲ ಶಶಿಧರ್ ಈಚೆಗೆರೆ, ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದಶೇಖರ್, ಗಾಯಕರಾದ ಸಂತಸಲ್ಗೆರೆ ಬಸವರಾಜು, ವೈರಮುಡಿ ಸೇರದಂತೆ ಹಲವರು ಹಾಜರಿದ್ದರು.