ಸಾರಾಂಶ
ಚಳ್ಳಕೆರೆ ತಾಲೂಕಲ್ಲಿ ರೆಡ್ಡಿ ಜನ ಸಂಘದಿಂದ ವಸತಿಯುತ ಶಾಲೆ ಆರಂಭಿಸಲು ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನ
ಕನ್ನಡಪ್ರಭ ವಾರ್ತೆ ಚಿತ್ರದುರ್ಗರೆಡ್ಡಿ ಸಮಾಜದ ಮಕ್ಕಳ ಶೈಕ್ಷಣಿಕ ಉನ್ನತಿಗೆ ಭವಿಷ್ಯದಲ್ಲಿ ಎಲ್‌ಕೆಜಿಯಿಂದ ಪಿಯುವರೆಗೆ ವಸತಿ ಶಾಲೆ ಆರಂಭಿಸಲು ತೀರ್ಮಾನ ಮಾಡಲಾಗಿದೆ ಎಂದು ಮಾಜಿ ಶಾಸಕ ಹಾಗೂ ರೆಡ್ಡಿ ಜನ ಸಂಘದ ಅಧ್ಯಕ್ಷ ತಿಪ್ಪಾರೆಡ್ಡಿ ತಿಳಿಸಿದರು.ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯ ಕಟ್ಟಬೇಕಾದರೆ ಶಿಕ್ಷಣದ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ವಸತಿ ಶಾಲೆ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದರು. ರೆಡ್ಡಿ ಜನಸಂಘ ಸ್ಥಾಪನೆ ಮಾಡಲು ಹಲವಾರು ಮಹನೀಯರು ಶ್ರಮ ಹಾಕಿದ್ದಾರೆ. 1905ರಲ್ಲಿ ಜನ ಸಂಘ ಸ್ಥಾಪನೆಯಾಗಿದೆ. ಹಿಂದೆ ಸಮುದಾಯದ ಮಕ್ಕಳು ಜಿಲ್ಲಾ ಕೇಂದ್ರಕ್ಕೆ ಬಂದು ಶಿಕ್ಷಣ ಪಡೆಯುವುದು ಅಸಾಧ್ಯವಾಗಿತ್ತು. ಇಲ್ಲಿ ಸರಿಯಾದ ಜಾಗ ಇಲ್ಲದೆ ಶಿಕ್ಷಣವನ್ನು ಪಡೆಯಲು ಶ್ರಮ ಪಡಬೇಕಾಗಿತ್ತು. ಈ ಸಮಯದಲ್ಲಿ ನಮ್ಮ ಹಿರಿಯರು ಸೇರಿ ಹಣ ಸಂಗ್ರಹ ಮಾಡಿ ಚಿತ್ರದುರ್ಗದಲ್ಲಿ ಜಾಗ ಖರೀದಿ ಮಾಡಿ ವಸತಿ ನಿಲಯ ಪ್ರಾರಂಭಿಸಿದರು. ನಂತರ ಇದನ್ನು ಮುಂದುವರೆಸಿಕೊಂಡು ಬಂದ ಹಿರಿಯರು ಹಾಗೂ ಬೇರೆಯವರು ಮಕ್ಕಳ ಶಿಕ್ಷಣಕ್ಕಾಗಿ ವಸತಿ ನಿಲಯ ಮುನ್ನಡೆಸಿದರು ಎಂದು ಹೇಳಿದರು.ಅಂದು ಹಿರಿಯರು ಮಾಡಿದ ಆಸ್ತಿ ಇಂದು ನಮ್ಮನ್ನು ಕಾಪಾಡಿದೆ. ರೆಡ್ಡಿ ಜನ ಸಂಘ ಇಂದು ಆರ್ಥಿಕವಾಗಿ ಸದೃಢವಾಗಿದೆ ಎಂದರೆ ಅದಕ್ಕೆ ಹಿಂದಿನವರ ಶ್ರಮ ಕಾರಣ. ರೆಡ್ಡಿ ಜನ ಸಂಘದ ಆಶ್ರಯದಲ್ಲಿ ವಿವಿಧ ರೀತಿಯ ಮಕ್ಕಳಿಗೆ ಉಪಯುಕ್ತವಾದ ಕಾರ್ಯಕ್ರಮಗಳ ಹಮ್ಮಿಕೊಳ್ಳಲಾಗುತ್ತಿದೆ. ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪುರಸ್ಕಾರ ಮಾಡುವುದರ ಮೂಲಕ ಅವರನ್ನು ಪ್ರೋತ್ಸಾಹ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಮುದಾಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಕಾರ್ಯಕಾರಿ ಸಮಿತಿಯಲ್ಲಿ ತಿರ್ಮಾನ ಮಾಡಿ ಇದಕ್ಕಾಗಿ ಚಳ್ಳಕೆರೆ ತಾಲೂಕಿನಲ್ಲಿ ಸುಮಾರು 10 ಎಕರೆ ಜಾಗವನ್ನು ನೋಡಿದ್ದು, ಖರೀದಿ ಮಾಡುವುದರ ಮೂಲಕ ಮುಂದಿನ ದಿನದಲ್ಲಿ ಸುಸಜ್ಜಿತ ಶಾಲೆಯನ್ನು ನಿರ್ಮಾಣ ಮಾಡಲಾಗುವುದು. ಇದಕ್ಕೆ ಬೇಕಾದ ತಯಾರಿ ನಡೆಯುತ್ತಿದೆ. ಎಲ್‌ಕೆಜಿಯಿಂದ ಹಿಡಿದು ಪಿಯುವರೆಗೂ ವಸತಿಯುತ ಶಾಲೆ ತೆರೆಯಲಾಗುತ್ತಿದೆ ಎಂದರು.ರೆಡ್ಡಿ ಜನ ಸಂಘ ಬೆಳೆಯಲು ಕಾರಣರಾದವರು ಹಾಗೂ ನಮ್ಮಲ್ಲಿ ರೂಂಗಳನ್ನು ನಿರ್ಮಾಣ ಮಾಡಲು ಸಹಾಯ ಮಾಡಿದವರ ಭಾವಚಿತ್ರವನ್ನು ಹಾಕಲು ತೀರ್ಮಾನ ಮಾಡಲಾಗಿದೆ. ದಾವಣಗೆರೆಯಲ್ಲಿನ ನಮ್ಮ ಆಸ್ತಿಯಲ್ಲಿ ಹಳೆಯದಾದ ಕಟ್ಟಡ ಇತ್ತು. ಅದನ್ನು ಕೆಡವಿ ಸುಮಾರು 8 ಕೋಟಿ ರು. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಸಂಘದ ಆಸ್ತಿಗಳಿಂದ ಪ್ರತಿ ತಿಂಗಳು ವರಮಾನ ಬರಲಿದೆ. ಸಮುದಾಯದ ಮಕ್ಕಳು ಐಪಿಎಸ್, ಐಎಎಸ್, ಕೆಎಎಸ್ ಮಾಡಲು ಬೇಕಾದ ತರಬೇತಿ ನೀಡಲು ನಮ್ಮ ಸಂಘ ತಯಾರಿ ನಡೆಸಿದೆ. ಇದಕ್ಕೆ ಅಗತ್ಯ ಸಂಪನ್ಮೂಲ ನೀಡಲು ಸಂಘ ಸಿದ್ಧವಿದೆ ಎಂದು ಹೇಳಿದರು.ಸಂಘದ ಕಾರ್ಯದರ್ಶಿ ಡಿ.ಕೆ.ಶೀಲ ಮಾತನಾಡಿ, ಜಗಳೂರು ಹಾಸ್ಟೆಲ್ ಕಟ್ಟಡದ ನವೀಕರಣ ಕೈಗೊಂಡು ಹೂಸದಾಗಿ 4 ರೂಂಗಳನ್ನು ನಿರ್ಮಾಣ ಮಾಡಲಾಗಿದೆ. ಚಿತ್ರದುರ್ಗದ ಈ ಸಮುದಾಯ ಭವನದಲ್ಲಿ ವರ್ಷದಲ್ಲಿ 87 ಮದುವೆಗಳು ನಡೆದಿವೆ. ನಮ್ಮ ಹಿರಿಯರು ಸ್ಥಾಪನೆ ಮಾಡಿದ ಸಂಘ ಉತ್ತಮವಾಗಿ ಸದೃಢವಾಗಿದೆ. ಬೇರೆ ಸಮಾಜಕ್ಕೆ ಹೋಲಿಸಿದರೆ ನಮ್ಮ ಸಮಾಜ ಉತ್ತಮವಾಗಿದೆ ಎಂದರು.ಕಾರ್ಯದರ್ಶಿ ಪರಶುರಾಮರೆಡ್ಡಿ, ಖಂಜಾಚಿ ಸುರೇಶ್ ಕುಮಾರ್, ಸದಸ್ಯರುಗಳಾದ ರಾಮಕೃಷ್ಣ, ಮಂಜುನಾಥ್, ಸುದರ್ಶನ ರೆಡ್ಡಿ, ವೇಣುಗೋಪಾಲ್, ರಾಘವರೆಡ್ಡಿ, ತಿಪ್ಪಾರೆಡ್ಡಿ, ನಾಗರಾಜ್, ಚಂದ್ರರೆಡ್ಡಿ, ಮಾರುತೇಶ್ ರೆಡ್ಡಿ, ಹರೀಶ್, ರೂಪ, ಸುಜಾತ, ಶ್ರೀಮತಿ ಸುಮನ್, ಶ್ರೀಮತಿ ರೇಖಾ ಹಾಗೂ ಇಂದಿರಮ್ಮ ಇದ್ದರು.ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನಸಂಘದ ಉಪಾಧ್ಯಕ್ಷ ಎಂ.ಕೆ.ಆನಂತರೆಡ್ಡಿ ಸ್ವಾಗತಿಸಿದರು. ಅಂಜನಾ ನೃತ್ಯ ಕಲಾ ಕೇಂದ್ರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.