ವೈಚಾರಿಕ ದೀವಿಗೆಯನ್ನು ಜನ ಸಾಮಾನ್ಯರ ಮನದಲ್ಲಿ ಬೆಳಗಲು ಕುವೆಂಪು ಅವರ ಸಾಹಿತ್ಯ ಕಾರಣ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವೈಚಾರಿಕ ದೀವಿಗೆಯನ್ನು ಜನ ಸಾಮಾನ್ಯರ ಮನದಲ್ಲಿ ಬೆಳಗಲು ಕುವೆಂಪು ಅವರ ಸಾಹಿತ್ಯ ಕಾರಣ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಸಹಯೋಗದಲ್ಲಿ ಸೋಮವಾರ ದೇವಂಗಿ ಆರ್.ರತ್ನಾಕರ್ ಸ್ಮಾರಕ ದತ್ತಿ ಅಂಗವಾಗಿ, ದತ್ತಿ ದಾನಿಗಳಾದ ಅಮರೇಂದ್ರ ಕಿರೀಟಿ ಅವರ ಆಶಯದಂತೆ ರಾಷ್ಟ್ರಕವಿ ಕುವೆಂಪು ಅವರ ‘ವಿಚಾರ ಕ್ರಾಂತಿಗೆ ಆಹ್ವಾನ’ ವಿಶೇಷ ಉಪನ್ಯಾಸ ಹಾಗೂ ಆಯೇಶಭಿಯಾನೆ ಖಾಸಿಂಬಿ ಕೋಂ ಸಯದ್ ರಸೂಲ್ ಸಾಬ್ ಅಬ್ಬಲಗೆರೆ ಸ್ಮಾರಕ ದತ್ತಿ ಅಂಗವಾಗಿ, ದತ್ತಿ ದಾನಿಗಳಾದ ಅಬ್ಬಾಸ್ ಅಬ್ಬಲಗೆರೆ ಅವರ ಆಶಯದಂತೆ ‘ಶಿಶುನಾಳ ಶರೀಫರ ಗೀತೆಗಳ ಗಾಯನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ವಿಚಾರಗಳನ್ನು ಅಭಿವ್ಯಕ್ತಪಡಿಸುವ ಹಲವು ವಿಧಾನಗಳಲ್ಲಿ ದತ್ತಿ ಉಪನ್ಯಾಸಗಳು ಒಂದು. ವೈಚಾರಿಕ ನೆಲೆಯನ್ನು ಪಸರಿಸಲು ದತ್ತಿ ಕಾರ್ಯಕ್ರಮಗಳು ಪೂರಕವಾಗಿದೆ. ಹಿಂಜರಿಕೆಯಿಂದ ಯುವ ಸಮೂಹ ಹೊರಬರಬೇಕಿದೆ. ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ, ಯುದ್ಧಪೀಡಿತ ಪ್ರದೇಶದ ಯುವ ಸಮೂಹದ ತಲ್ಲಣಗಳು ಏನಾಗಿರಬಹುದು ಎಂಬುದು ವಿಮರ್ಶಿಸಬೇಕಿದೆ. ವೈಚಾರಿಕ ಪ್ರಜ್ಞೆ ಅಂತಹ ವಿಮರ್ಶಾತ್ಮಕ ಜ್ಞಾನವನ್ನು ನೀಡಲಿದೆ ಎಂದು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ, ಕನ್ನಡ ಭಾಷೆಯ ಜನರನ್ನು ಒಟ್ಟುಗೂಡಿಸುವ ಹಂಬಲವನ್ನು ಸಾರ್ಥಕಗೊಳಿಸುವ ಉದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಸಾಪವನ್ನು ಸ್ಥಾಪಿಸಿದರು. ಹೊಸ ತಲೆಮಾರಿಗೆ ಸಾಹಿತ್ಯದ ಚಿಂತನೆಗಳ ಮೂಲಕ ಕ್ರೀಯಾಶೀಲತೆಯನ್ನು ಬಿತ್ತುವ ಕಾರ್ಯವನ್ನು ದತ್ತಿಯ ಮೂಲಕ ಮಾಡುತ್ತಿದ್ದೇವೆ. ಭಾಷೆಯ ಬಗ್ಗೆ ಉದಾಸೀನ ಬೇಡ ಎಂದರು.
ಕುವೆಂಪು ಅವರ ‘ವಿಚಾರ ಕ್ರಾಂತಿಗೆ ಆಹ್ವಾನ’ ಕುರಿತು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ್ ಮರ್ಗನಳ್ಳಿ ಮಾತನಾಡಿ, ಇಂದಿನ ತಲೆಮಾರು ಜನಸಮೂಹದ ಜೊತೆಗೆ ಸಂವಹನ ನಡೆಸಲು ನಿರಾಸಕ್ತರಾಗಿದ್ದಾರೆ. ಪರಂಪರೆಯ ಜ್ಞಾನವಿಲ್ಲದೆ, ಕೇವಲ ವರ್ತಮಾನದಲ್ಲಿ ಬದುಕಲು ಸಾಧ್ಯವಿಲ್ಲ. ಕುವೆಂಪು ಅವರನ್ನು ಹೊಗಳುವ ಬದಲು, ಅವರು ಪ್ರತಿಪಾದಿಸಿದ ಸಂಗತಿಗಳನ್ನು ಅರ್ಥೈಸಿಕೊಳ್ಳಬೇಕು ಎಂದರು.ಪರಕೀಯರಿಂದ ಮುಕ್ತಿ ಪಡೆಯುವುದೊಂದೇ ಭಾರತದ ಸ್ವಾತಂತ್ರ್ಯ ಚಳವಳಿಯ ಆಶಯವಾಗಿರಲಿಲ್ಲ. ಬದಲಿಗೆ ಅತ್ಯುತ್ತಮ ಸದೃಢ ಸಮಾಜ ನಿರ್ಮಾಣ ಮಾಡುವ ಕನಸು ಹೋರಾಟಗಾರರದ್ದಾಗಿತ್ತು. ಹಣ ಎಂದಿಗೂ ರಾಜಕೀಯ ವ್ಯವಸ್ಥೆಯನ್ನು ಆಳಬಾರದು ಎಂದು ಹೇಳುತ್ತ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ಯುವ ಸಮೂಹಕ್ಕೆ ಕರೆ ನೀಡಿದವರು ಕುವೆಂಪು ಎಂದು ಹೇಳಿದರು.
ಸಂತ ಶಿಶುನಾಳ ಶರೀಫರ ಗೀತೆಗಳನ್ನು ಗಾಯಕಿ ನಳಿನಾಕ್ಷಿ ಹಾಡಿದರು. ಉಪನ್ಯಾಸಕರಾದ ಬಿ.ಎನ್.ಪ್ರವೀಣ್, ಟಿ.ಗಾಯತ್ರಿ, ಕೆ.ಚೈತ್ರಾ, ಕಸಾಪ ಪದಾಧಿಕಾರಿಗಳಾದ ಡಿ.ಗಣೇಶ್, ಅನುರಾಧ ಮತ್ತಿತರರು ಹಾಜರಿದ್ದರು. ವಿದ್ಯಾರ್ಥಿನಿ ಅನನ್ಯ ನಿರೂಪಿಸಿದರು.