ಕಡೂರು ಕಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಣನೀಯ ಸಾಧನೆ ಶ್ಲಾಘನೀಯ ಇದಕ್ಕಾಗಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸುವುದಾಗಿ ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಸುದ್ದಿಗೋಷ್ಠಿ

ಕನ್ನಡಪ್ರಭ ವಾರ್ತೆ, ಕಡೂರು

ಕಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಣನೀಯ ಸಾಧನೆ ಶ್ಲಾಘನೀಯ ಇದಕ್ಕಾಗಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸುವುದಾಗಿ ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕಳೆದ ಶೈಕ್ಷಣಿಕ ವರ್ಷದ ಸ. ಪ.ಪೂ. ಕಾಲೇಜುಗಳ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಶೇ.17ರಷ್ಟು ಫಲಿತಾಂಶ ಹೆಚ್ಚಳದ ಜೊತೆಗೆ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಸುಧಾರಣೆ ಕಂಡು ಬಂದಿದೆ ಎನ್ನುವುದು ಸಾಬೀತಾಗಿದೆ.

ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮತ್ತಷ್ಟು ಬಲಿಷ್ಠವಾಗುತ್ತಿದ್ದು, ಪೋಷಕರು ಖಾಸಗಿ ಕಾಲೇಜುಗಳ ವ್ಯಾಮೋಹದಿಂದ ಹೊರ ಬಂದು ಸರ್ಕಾರಿ ಶಿಕ್ಷಣ ವ್ಯವಸ್ಥೆ ಯನ್ನು ಬಲಪಡಿಸುವ ಸಲುವಾಗಿ ಸಮರ್ಥ ಹಾಗೂ ಸುಸಜ್ಜಿತ ಶಿಕ್ಷಣ ವ್ಯವಸ್ಥೆಯಾದ ಸರ್ಕಾರಿ ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಅವರ ಉತ್ತಮ ಭವಿಷ್ಯ ರೂಪಿಸಲು ಮುಂದಾಗಬೇಕು ಎಂದು ಕರೆ ನೀಡಿದರು. ಪಟ್ಟಣ ಹಾಗು ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಮನೆ ಪಾಠ ವ್ಯವಸ್ಥೆ ಇಲ್ಲ. ಇಂತಹ ಸನ್ನಿವೇಶದಲ್ಲಿ ಶೇ.90 ಮತ್ತು ಹೆಚ್ಚು ಫಲಿತಾಂಶ ಪಡೆಯುವಲ್ಲಿ ಸರ್ಕಾರಿ ಕಾಲೇಜುಗಳು ಯಶಸ್ವಿಯಾಗಿರುವುದು ರಾಜ್ಯ ಸರ್ಕಾರ ಶಿಕ್ಷಣ ವ್ಯವಸ್ಥೆಗೆ ನೀಡುತ್ತಿರುವ ಉತ್ತೇಜನವೇ ಕಾರಣ. ಕಳೆದ ವರ್ಷದಿಂದ ರಾಜ್ಯ ಸರ್ಕಾರ ತನ್ನ ಅಧೀನದ ವ್ಯಾಸಂಗ ಮಾಡುವ ಕಾಲೇಜು ಗಳ ವಿದ್ಯಾರ್ಥಿಗಳ ಉಜ್ಷಲ ಭವಿಷ್ಯಕ್ಕಾಗಿ ಬೆಳಿಗ್ಗೆ 8.30 ರಿಂದ 10.20 ರವರೆಗೆ ಸಿಇಟಿ ಮತ್ತು ನೀಟ್ ತರಬೇತಿಯನ್ನು ಸ್ಮಾರ್ಟ್ ಕ್ಲಾಸ್ ಮೂಲಕ ನೀಡಿದೆ. ಇದರಿಂದ ವಿಜ್ಞಾನ ವಿಭಾಗದಲ್ಲೂ ಉತ್ತಮ ಹಾಗೂ ಹೆಚ್ಚಿನ ಫಲಿತಾಂಶ ಪಡೆಯುವಲ್ಲಿ ನೆರವಾಗಿದೆ ಹಾಗೂ ಇದು ಸರ್ಕಾರದ ಪ್ರಯತ್ನಕ್ಕೆ ಸಿಕ್ಕ ಜಯ ಎಂದರೆ ತಪ್ಪಾಗಲಾರದು ಎಂದು ಹೇಳಿದರು.

ಕಡೂರು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ₹2.75 ಕೋಟಿ ವೆಚ್ಚದಲ್ಲಿ 4 ಪ್ರಯೋಗಾಲಯ, 2 ನೂತನ ಕೊಠಡಿಗಳನ್ನು ನಿರ್ಮಿಸಿದ್ದು, ಶೀಘ್ರದಲ್ಲೇ ಲೋಕಾರ್ಪಣೆ ಗೊಳಿಸಲಾಗುವುದು. ಪಟ್ಟಣದ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು ಕೂಡ ಅನೇಕ ಬೇಡಿಕೆಗಳನ್ನು ಇಟ್ಟಿದೆ. ಆಡಿಟೋರಿಯಂ ನಿರ್ಮಾಣ, ಶಿಥಿಲ ಕೊಠಡಿ ತೆರವು, ಶೌಚಾಲಯ ನಿರ್ಮಾಣ ಮತ್ತಿತರ ಕೋರಿಕೆಗಳ ಈಡೇರಿಕೆಗೆ ಕ್ರಮ ವಹಿಸಲಾಗುವುದು. ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಉತ್ತೇಜನ ತುಂಬುವ ಮೂಲಕ ಸುಧಾರಿತ ಬೋಧನಾ ವ್ಯವಸ್ಥೆ ಉತ್ತಮಗೊಳಿಸುವಲ್ಲಿ ಮುಂದಾಗಬೇಕು ಇದಕ್ಕೆ ಸದಾ ತಮ್ಮ ಸಹಕಾರ ಇರುತ್ತದೆ ಎಂದರು. ಕಡೂರು ಸರಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಎಸ್.ಎಸ್.ತವರಾಜ್ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಶಿಕ್ಷಣದ ಬಗೆಗಿನ ಕಾಳಜಿಯಿಂದ ಶಾಸಕರು ಅನೇಕ ಭಾರಿ ಕಾಲೇಜಿಗೆ ಭೇಟಿ ನೀಡಿ ವ್ಯವಸ್ಥೆ ಸರಿಪಡಿಸುವ ಕುರಿತು ಉತ್ತಮ ಸಲಹೆ-ಸೂಚನೆ ನೀಡುವ ಜೊತೆಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭೋಧನಾ ವ್ಯವಸ್ಥೆ ಸುಧಾರಿಸುವ ಮತ್ತು ಫಲಿತಾಂಶ ಇನ್ನಷ್ಟು ಉತ್ತಮಗೊಳಿಸುವಲ್ಲಿ ಶ್ರಮಿಸುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚೇತನ್, ಕೆಎಲ್ ಕೆ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರಪ್ಪ, ಯಗಟಿ ಕಾಲೇಜಿನ ತಮ್ಮಯ್ಯ, ಉಪನ್ಯಾಸಕ ಹನುಮಂತಪ್ಪ, ಮಂಜುಳಾ, ಫಣಿರಾಜ್ ಸೇರಿದೆಂತೆ ಮತ್ತಿತರರು ಇದ್ದರು. 13ಕೆಡಿಯು1.

ಕಡೂರು ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಶಾಸಕ ಕೆ.ಎಸ್.ಆನಂದ್ ಸರ್ಕಾರಿ ಪ.ಪೂ.ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.