ಕನ್ನಡಪ್ರಭ ವಾರ್ತೆ ಮಂಡ್ಯ
ಸಾವಿರಾರು ರೋಗಿಗಳು ಹೊಸ ಜೀವನದ ನಿರೀಕ್ಷೆಯಲ್ಲಿದ್ದು, ಅವರಿಗೆ ದಾನಿಗಳಿಂದ ಸಿಗಬೇಕಾದ ಅಂಗಾಂಗಳ ಅಭಾವದಿಂದ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಅದಕ್ಕಾಗಿ ಅಂಗಾಂಗ ದಾನದ ಬಗ್ಗೆ ಜನರು ಜಾಗೃತರಾಗುವುದು ಅತ್ಯಂತ ಅವಶ್ಯಕವಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಕಾರ್ಡಿಯೋಥೆರಾಸಿಕ್ ತಜ್ಞ ಡಾ.ಕೆ.ಮಹದೇವ ಹೇಳಿದರು.ದೇಶದಲ್ಲಿ ೧೫ ಕೋಟಿ ಜನರಲ್ಲಿ ಕಿಡ್ನಿ ತೊಂದರೆ ಎದುರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಐದು ಸಾವಿರ ಜನರು ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರೆ ೧೫೦ ಮಂದಿ ಕಿಡ್ನಿ ದಾನ ಮಾಡುತ್ತಿದ್ದಾರೆ. ಹೀಗೆ ವಿವಿಧ ಅಂಗಾಂಗಗಳ ಅಭಾವ ಎದುರಾಗಿರುವುದರಿಂದ ಹೆಚ್ಚು ಜನರು ಅಂಗಾಂಗ ದಾನಕ್ಕೆ ಮುಂದಾಗುವಂತೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬ್ರೈನ್ ಡೆತ್ ಬಗ್ಗೆ ಜನರಲ್ಲಿ ಸರಿಯಾದ ಅರಿವು ಮೂಡಿಸುವುದು. ಅಂಗಾಂಗಗಳನ್ನು ಹೊರತೆಗೆಯುವ ಪ್ರಕ್ರಿಯೆಯಲ್ಲಿ ಸಮಯದ ಪ್ರಾಮುಖ್ಯತೆ ವಿವರಿಸುವುದು ಹಾಗೂ ಮರಣೋತ್ತರ ಅಂಗಾಗದಾನದ ಮಹತ್ವ ತಿಳಿಸುವುದು ಬಹಳ ಅವಶ್ಯವಾಗಿದೆ ಎಂದು ನುಡಿದರು.ಅಂಗಾಂಗ ದಾನದ ಬಗ್ಗೆ ಕೆಲವೊಂದು ತಪ್ಪು ಕಲ್ಪನೆಗಳಿವೆ. ವೆಂಟಿಲೇಟರ್ ಸಹಾಯದಿಂದ ಹೃದಯ ಬಡಿಯುತ್ತಿರುವುದರಿಂದ ಬ್ರೈನ್ ಡೆಡ್ ಆದ ವ್ಯಕ್ತಿಗೆ ಮತ್ತೆ ಜೀವ ಮರಳಿಸಬಹುದು ಎಂಬ ನಂಬಿಕೆ ಇದೆ. ಆದರೆ, ಬ್ರೈನ್‌ಡೆತ್ ಎಂದರೆ ವೈದ್ಯಕೀಯ, ಕಾನೂನುಬದ್ಧವಾಗಿ ಸಂಪೂರ್ಣ ಮರಣ ಎಂದರ್ಥ. ಅಂಗಾಂಗಗಳನ್ನು ಹೊರತೆಗೆಯುವುದರಿಂದ ದೇಹದ ರೂಪಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಗೌರವಪೂರ್ವಕ ಶಸ್ತ್ರಚಿಕಿತ್ಸೆ ಮೂಲಕವೇ ಪ್ರಕ್ರಿಯೆ ನಡೆದು ಅಂತಿಮ ಸಂಸ್ಕಾರಕ್ಕೆ ದೇಹವನ್ನು ಸಿದ್ಧಪಡಿಸಿಕೊಡಲಾಗುವುದು ಎಂದರು.
ಡಾ.ಉಪೇಂದ್ರ ಶೆಣೈ ಮಾತನಾಡಿ, ದೇಹದಿಂದ ಅಂಗಾಂಗಳನ್ನು ಹೊರತೆಗೆಯಲು ೨ ರಿಂದ ೩ ಗಂಟೆಯವರೆಗೆ ಸಮಯ ಬೇಕಾಗಲಿದೆ. ಅದನ್ನು ಮತ್ತೊಬ್ಬರಿಗೆ ಕಸಿ ಮಾಡಲು ಸಮಯ ಬಹಳ ಕಡಿಮೆ. ಹೃದಯವನ್ನು ಸಾಮಾನ್ಯವಾಗಿ ೪ ಗಂಟೆಗಳ ಒಳಗೆ ಮತ್ತೊಬ್ಬರಿಗೆ ಕಸಿ ಮಾಡಬೇಕು. ಇದಕ್ಕಾಗಿ ಸಂಚಾರಿ ಪೊಲೀಸರು ಗ್ರೀನ್ ಕಾರಿಡಾರ್ ಅಥವಾ ಏರ್ ಆಂಬ್ಯುಲೆನ್ಸ್ ಮೂಲಕ ಹೃದಯವನ್ನು ತ್ವರಿತವಾಗಿ ಕಸಿ ಕೇಂದ್ರಕ್ಕೆ ತಲುಪಿಸುವರು ಎಂದರು.
ಕಿಡ್ನಿಯನ್ನು ವಿಶೇಷ ಸಂರಕ್ಷಣಾ ತಂತ್ರಜ್ಞಾನದ ಸಹಾಯದಿಂದ ೨೪ ರಿಂದ ೩೬ ಗಂಟೆಗಳವರೆಗೆ ಸಂರಕ್ಷಿಸಬಹುದು. ಕಣ್ಣಿನ ಕಾರ್ನಿಯಾವನ್ನು ಹಲವು ದಿನಗಳವರೆಗೆ ಸಂರಕ್ಷಿಸಬಹುದು. ನೇತ್ರದಾನ ಹೆಚ್ಚಿನ ಪ್ರಮಾಣದಲ್ಲಿದ್ದು, ಹೃದಯ, ಶ್ವಾಸಕೋಶ, ಕಿಡ್ನಿಯಂತಹ ಪ್ರಮುಖ ಅಂಗಗಳ ವಿಷಯದಲ್ಲಿ ಪ್ರತಿಯೊಂದು ನಿಮಿಷವೂ ಮಹತ್ವದ್ದಾಗಿದೆ ಎಂದರು.
ಡಾ.ವಿಪಿನ್ ಕಾವೇರಪ್ಪ ಮಾತನಾಡಿ, ರಾಜ್ಯದಲ್ಲಿ ೫ ಸಾವಿರ ಜನರು ಕಿಡ್ನಿ ಕಸಿಗೆ ಕಾಯುತ್ತಿದ್ದರೆ, ಪ್ರತಿ ವರ್ಷ ೩೦೦ ಜನರಿಗೆ ಮಾತ್ರ ಕಿಡ್ನಿ ಕಸಿ ಸಾಧ್ಯವಾಗುತ್ತಿದೆ. ಇದರಿಂದ ರೋಗಿಗಳು ೨-೩ ವರ್ಷದವರೆಗೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.ಗೋಷ್ಠಿಯಲ್ಲಿ ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಬಿ.ಜೆ.ಸಂದೀಪ್ ಪಟೇಲ್ ಇದ್ದರು.