ಅವಘಡ ತಪ್ಪಿಸುವ ಅಗ್ನಿಶಾಮಕ ದಳಕ್ಕೆ ವಾಹನ ಕೊರತೆ

| Published : Nov 09 2024, 01:03 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ನಗರದ ಅಗ್ನಿಶಾಮಕ ಠಾಣೆಯಲ್ಲಿ ಅಗತ್ಯ ಸಿಬ್ಬಂದಿ ಇದ್ದಾರೆ. ಆದರೆ, ಎಲ್ಲಾದರೂ ಅವಘಡ ನಡೆದರೆ ಬೇಕಾದ ರಕ್ಷಣಾ ಸಾಮಗ್ರಿ ಹಾಗೂ ಬೆಂಕಿ ನಂದಿಸುವ ವಾಹನಗಳು ಇಲ್ಲ.ಇರುವ ಎರಡು ವಾಹನಗಳಲ್ಲಿ ಒಂದು 30 ವರ್ಷ ಪೂರ್ಣಗೊಳಿಸಿದೆ.ಇನ್ನೊಂದು 15 ವರ್ಷ ಪೂರ್ಣಗೊಳಿಸುರುವುದರಿಂದ ರಸ್ತೆಗೆ ಓಡಾಡುವುದಿಲ್ಲ. ಹೀಗಾಗಿ ವಿಜಯಪುರದಿಂದ ಒಂದು ಅಗ್ನಿಶಾಮಕ ವಾಹನ ಕಳುಹಿಸಿದ್ದು, ಅದರ ಮೂಲಕವೇ ಇಂಡಿ-ಚಡಚಣ ತಾಲೂಕುಗಳ ಗ್ರಾಮಗಳಿಗೆ ತುರ್ತು ಸೇವೆ ನೀಡಬೇಕಾಗಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ನಗರದ ಅಗ್ನಿಶಾಮಕ ಠಾಣೆಯಲ್ಲಿ ಅಗತ್ಯ ಸಿಬ್ಬಂದಿ ಇದ್ದಾರೆ. ಆದರೆ, ಎಲ್ಲಾದರೂ ಅವಘಡ ನಡೆದರೆ ಬೇಕಾದ ರಕ್ಷಣಾ ಸಾಮಗ್ರಿ ಹಾಗೂ ಬೆಂಕಿ ನಂದಿಸುವ ವಾಹನಗಳು ಇಲ್ಲ.ಇರುವ ಎರಡು ವಾಹನಗಳಲ್ಲಿ ಒಂದು 30 ವರ್ಷ ಪೂರ್ಣಗೊಳಿಸಿದೆ.ಇನ್ನೊಂದು 15 ವರ್ಷ ಪೂರ್ಣಗೊಳಿಸುರುವುದರಿಂದ ರಸ್ತೆಗೆ ಓಡಾಡುವುದಿಲ್ಲ. ಹೀಗಾಗಿ ವಿಜಯಪುರದಿಂದ ಒಂದು ಅಗ್ನಿಶಾಮಕ ವಾಹನ ಕಳುಹಿಸಿದ್ದು, ಅದರ ಮೂಲಕವೇ ಇಂಡಿ-ಚಡಚಣ ತಾಲೂಕುಗಳ ಗ್ರಾಮಗಳಿಗೆ ತುರ್ತು ಸೇವೆ ನೀಡಬೇಕಾಗಿದೆ.

ಇಂಡಿ, ಚಡಚಣ ಸೇರಿ ಇಂಡಿ ನಗರ ಕೇಂದ್ರದಿಂದ ಸುಮಾರು ಚಡಚಣ ಭಾಗದ ಕೊನೆಯ ಗ್ರಾಮ ಶಿರಾಡೋಣ,ಬಂಥನಾಳ,ತಾಂಬಾ, ಮಿರಗಿ, ಮಾರ್ಸನಹಳ್ಳಿ ಸೇರಿ ಸುಮಾರು 60 ಕಿಮೀ ಅಂತರದಲ್ಲಿ ಅಗ್ನಿಶಾಮಕ ವಾಹನ ಹೋಗಬೇಕು. ಹೋಗುವಷ್ಟರಲ್ಲಿ ಎಲ್ಲವೂ ಸುಟ್ಟು ಕರಕಲಾಗುತ್ತದೆ. ಹೀಗಿರುವಾಗ ತುರ್ತುಸೇವೆಗೆ ವಾಹನಗಳ ಕೊರತೆ ನಿಗುವುದು ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ಇಂಡಿ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಸಹ ಹಾದು ಹೋಗಿರುವುದರಿಂದ ಇಂಡಿ ನಗರ ಕೇಂದ್ರಕ್ಕೆ ಹೆಚ್ಚಿನ ಅಗ್ನಿಶಾಮಕ ವಾಹನಗಳ ಅವಶ್ಯಕತೆ ಇದೆ. 15 ವರ್ಷಗಳಿಗಿಂತಲೂ ಹಳೆಯ ವಾಹನಗಳನ್ನು ರಸ್ತೆಗೆ ಇಳಿಸುವಂತಿಲ್ಲ ಎಂಬ ಕೇಂದ್ರ ಸರ್ಕಾರದ ಮಾರ್ಗಸೂಚಿಯಿಂದಾಗಿ 15 ವರ್ಷ ಪೂರ್ಣಗೊಳಿಸಿದ ಅಗ್ನಿಶಾಮಕ ವಾಹನಗಳು ಠಾಣೆಯ ಶೆಡ್‌ನಲ್ಲಿ ನಿಂತಿವೆ.ಜಿಲ್ಲೆಯ ಇಂಡಿ, ಚಡಚಣ ಹಾಗೂ ತಾಂಬಾ ಭಾಗದಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುತ್ತಿದ್ದು, ಬೇಸಿಗೆ ಸಮಯದಲ್ಲಿ ಬೆಂಕಿ ಹೊತ್ತಿಕೊಳ್ಳುವುದು ಮಾಮೂಲು. ಇಂತಹ ಸಂದರ್ಭದಲ್ಲಿ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದರೆ ಒಂದಷ್ಟು ಬೆಳೆಯನ್ನು ಉಳಿಸಬಹುದು. ಆದರೆ, ಅಗ್ನಿಶಾಮಕ ಇಲಾಖೆಯ ವಾಹನ ಅಲ್ಲಿಗೆ ಹೋಗುವಷ್ಟರಲ್ಲಿ ಇಡೀ ಬೆಳೆ ಭಸ್ಮವಾಗಿ ಹೋಗಿರುತ್ತದೆ.ಅವಘಡ ಸಂಭವಿಸಿದಾಗ ನೆರವಿಗೆ ಧಾವಿಸುವ ಅಪತ್ಪಾಂಧವ ಇಂಡಿ-ಚಡಚಣ ಸೇರಿದಂತೆ ಜಿಲ್ಲೆಯ ಅಗ್ನಿಶಾಮಕ ದಳಕ್ಕೆ ವಾಹನಗಳ ಕೊರತೆ ಕಾಡುತ್ತಿದೆ.

ಎಲ್ಲಿಯೇ ಬೆಂಕಿ ಅವಘಡ, ಮಳೆಯಿಂದ ಉಂಟಾಗುವ ಅನಾಹುತ, ಹಳೆ ಕಟ್ಟಡಗಳ ದುರಂತ, ನದಿ, ಕೆರೆ, ಹಳ್ಳಗಳಲ್ಲಿ ಜನರನ್ನು ರಕ್ಷಿಸುವುದು ಸೇರಿದಂತೆ ಇನ್ನು ಯಾವುದೇ ಅನಾಹುತಗಳು ಸಂಭವಿಸಿದಾಗ ಶಬ್ದ ಮೊಳಗಿಸುತ್ತ ಸಾಗುವ ಅಗ್ನಿಶಾಮಕ ದಳಕ್ಕೆ ಅಗತ್ಯ ವಾಹನಗಳೇ ಇಲ್ಲದಿರುವುದರಿಂದ ಅಗ್ನಿಶಾಮಕ ಅಧಿಕಾರಿ, ಸಿಬ್ಬಂದಿ ಇರುವ ವಾಹನಗಳನ್ನು ಬಳಕೆ ಮಾಡಿಕೊಂಡೇ ಅಘಗಡಗಳಿಂದ ಬೆಳೆ, ಜನರನ್ನು ಪಾರು ಮಾಡಲು ಹರಸಾಹಸ ಪಡುತ್ತಿದ್ದಾರೆ. ಶೀಘ್ರದಲ್ಲಿ ತುರ್ತುಸೇವೆ ಅಗ್ನಿಶಾಮಕ ಠಾಣೆಗೆ ಜಲವಾಹನ ಪೊರೈಸಲು ಸರ್ಕಾರ ಮುಂದಾಗಬೇಕಾಗಿದೆ.ಹೊಸ ತಾಲೂಕಿಗಿಲ್ಲ ವ್ಯವಸ್ಥೆ:

ಜಿಲ್ಲೆಯ ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ವಿಜಯಪುರ, ತಾಳಿಕೋಟಿ ತಾಲೂಕುಗಳು ಹೊರತುಪಡಿಸಿ ಹೊಸದಾಗಿ ರಚನೆಯಾಗಿರುವ ತಾಲೂಕುಗಳಿಗೆ ಇಲ್ಲಿಯವರೆಗೆ ಅಗ್ನಿಶಾಮಕ ಠಾಣೆಯೂ ಇಲ್ಲ, ಜಲವಾಹನವೂ ಇಲ್ಲ. ಚಡಚಣ,ಆಲಮೇಲ, ದೇವರ ಹಿಪ್ಪರಗಿ, ಕೊಲಾರ, ನಿಡಗುಂದಿ, ತಿಕೋಟಾ ತಾಲೂಕುಗಳು ರಚನೆಯಾಗಿ 11 ರಿಂದ 12 ವರ್ಷ ಕಳೆಯುತ್ತಿದ್ದರೂ ಈ ತಾಲೂಕುಗಳಿಗೆ ತುರ್ತುಸೇವೆ ಅಗ್ನಿಶಾಮಕ ಠಾಣೆಗಳು ಆರಂಭಿಸಿರುವುದಿಲ್ಲ.

ಕೋಟ್‌.....

ಇಂಡಿ ಅಗ್ನಿಶಾಮಕ ಠಾಣೆಗೆ ಎರಡು ಜಲವಾಹಗಳಿದ್ದವು. ಎರಡು ವಾಹನಗಳ ಅವಧಿ ಮುಗಿದಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 15 ವರ್ಷ ಪೂರ್ಣಗೊಂಡ ವಾಹನಗಳು ರಸ್ತೆಗೆ ಬಿಬಿಡುವ ಹಾಗಿಲ್ಲ. ಹೀಗಾಗಿ, ತುರ್ತು ಸೇವೆಗಾಗಿ ವಿಜಯಪುರದಿಂದ ಒಂದು ಜಲವಾಹನ ಕಳುಹಿಸಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮೇಲಾಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಶೀಘ್ರ ವಾಹನಗಳು ಬಿಡುಗಡೆಯಾಗಲಿವೆ. ಇಂಡಿ ನಗರ ಕೇಂದ್ರದಿಂದ ಚಡಚಣ ತಾಲೂಕಿನ ಕೊನೆಯ ಹಳ್ಳಿಗಳು ದೂರವಾಗಿದ್ದು, ಚಡಚಣ ತಾಲೂಕಿನಲ್ಲಿ ಆಗ್ನಿಶಾಮಕ ಠಾಣೆ ಅವಶ್ಯಕತೆ ಇದೆ.

ಜಿ.ಎ.ತೇಲಿ, ಅಗ್ನಿಶಾಮಕ ಠಾಣಾಧಿಕಾರಿ, ಇಂಡಿ.