ಸಾರಾಂಶ
ದೇಗುಲ ಕಳಸ ಪ್ರತಿಷ್ಠಾಪನೆ, ಉತ್ಸವ
ಕನ್ನಡಪ್ರಭ ವಾರ್ತೆ ತುರುವೇಕೆರೆದೇವರು ಮತ್ತು ರೈತರೇ ಇಲ್ಲದಿದ್ದರೆ ಯಾರೂ ಸಹ ಜೀವಂತವಾಗಿ ಇರಲು ಸಾಧ್ಯವೇ ಇಲ್ಲ. ಸದ್ಯದ ಸ್ಥಿತಿಯಲ್ಲಿ ರೈತರೇ ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಮೂಲ ಬೇರಾಗಿದ್ದಾರೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಮಾಯಸಂದ್ರ ಹೋಬಳಿಯ ಬ್ಯಾಲಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಉಡಸಲಮ್ಮ ಮೂಲ ದೇವರ ನೂತನ ದೇವಾಲಯ ಪ್ರವೇಶ ಸ್ಥಿರ ಬಿಂಬ ಪ್ರತಿಷ್ಠಾಪನಾ ಮತ್ತು ವಿಮಾನ ಗೋಪುರ ಕಳಸ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಬಿಷೇಕ ಮಹೋತ್ಸವದ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಆಶೀರ್ವಚನ ನೀಡಿದರು.ಯಾವುದೇ ಮರಗಳು ಗಟ್ಟಿಯಾಗಿ ನಿಲ್ಲಲು ಹಾಗೂ ಸದೃಢವಾಗಿ ಬೆಳೆಯಲು ಬೇರುಗಳೇ ಮುಖ್ಯ ಆಧಾರ. ಆದರೆ ಮರದ ಬೇರಿನ ಸೇವೆಯನ್ನು ಯಾರೂ ಸಹ ನೆನೆಪಿಸಿಕೊಳ್ಳುವುದಿಲ್ಲ. ಅದರಂತೆ ರೈತರ ಬದುಕು ದೇಶದ ಅಭಿವೃದ್ದಿಗೆ, ಆರ್ಥಿಕತೆ ಮುಂದುವರಿಯಲು ಕೈಗಾರಿಕೆಗಳು ನಡೆಯಲು ಸಹಕಾರಿಯಾಗಿದೆ. ರೈತರು ಉತ್ಪಾದಿಸುವ ವಸ್ತುಗಳ ಮೇಲೆ ನಿಂತಿದೆ. ಆದರೂ ಸಹ ರೈತರನ್ನು ನಿರ್ಲಕ್ಷಿಸಲಾಗುತ್ತಿದೆ. ರೈತರು ತಮ್ಮ ನಿತ್ಯ ಕಾಯಕದ ಜತೆಗೆ ದೇವರ ಪೂಜೆ, ಧಾರ್ಮಿಕ ಕಾರ್ಯವನ್ನು ಮರೆಯುವುದಿಲ್ಲ. ಆದ್ದರಿಂದಲೇ ಹಳ್ಳಿಗಳಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿದೆ ಎಂದು ಹೇಳಿದರು.
ಚಿತ್ರದುರ್ಗ ಮಠದ ಪೀಠಾಧ್ಯಕ್ಷ ಕೃಷ್ಣಯಾದವಾನಂದ ಸ್ವಾಮೀಜಿ ಮಾತನಾಡಿ, ದೇವಾಲಯಗಳು ಇಲ್ಲದಿದ್ದರೆ ಇಲ್ಲಿ ನಾವು, ನೀವು ಯಾರು ಸಹ ಸೇರುತ್ತಿಲ್ಲ. ಜನರು ಭಕ್ತಿ ಭಾವದಿಂದ ಸೇರುವುದೇ ದೇವಾಲಯದಲ್ಲಿ ಮಾತ್ರ. ನಾಡಿನಲ್ಲಿ ನೂತನ ದೇವಾಲಯ ಬಹಳಷ್ಟು ಉದ್ಘಾಟನೆಯಾಗುತ್ತಿರುವುದು ಸಂತೋಷದಾಯಕ. ಆದರೆ ಹಿಂದೂ ಸಮಾಜದ ಕೆಲವು ಯುವತಿ, ಯುವಕರು ಪವಿತ್ರ ಹಿಂದೂ ಧರ್ಮದ ಆಚಾರ, ವಿಚಾರದ ಅರಿವು ಇಲ್ಲದೆ. ದಾರಿ ತಪ್ಪಿ ಬೇರೆ ಧರ್ಮಕ್ಕೆ ಮತಾಂತರವಾಗುತ್ತಿರುವುದು ವಿಷಾದನೀಯ ಸಂಗತಿ. ನಮ್ಮ ಹಿಂದೂ ಸಮಾಜದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಹಣ್ಣು ಕಾಯಿ, ಬಾಳೇ ಹಣ್ಣು ಇಟ್ಟು ಪೂಜೆ ಮಾಡದೇ ಗ್ರಾಮ ದೇವಾಲಯದಲ್ಲಿ ಸಂಜೆ, ಬೆಳಿಗ್ಗೆ ಕುಳಿತು ದೇವರ ಪ್ರಾರ್ಥನೆ ಮಾಡುವುದನ್ನು ರೂಡಿಸಿಕೊಳ್ಳಬೇಕಿದೆ. ಇಂತಹ ಸಂಸ್ಕಾರವನ್ನು ತಮ್ಮ ಮಕ್ಕಳಿಗೆ ಕಲಿಸಬೇಕು ಎಂದು ಕಿವಿಮಾತು ಹೇಳಿದರು.ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಈ ಭಾಗದಲ್ಲಿ ಎಲ್ಲ ಕೆರೆ ಕಟ್ಟೆಗಳನ್ನು ಹೇಮಾವತಿ ನೀರು ಹರಿಸಿ ತುಂಬಿಸಲಾಗಿದೆ. ಕೆರೆ ಕಟ್ಟೆ ತುಂಬಿದರೆ ರೈತರು ಸಂತೋಷವಾಗಿ ದೇವರ ಕಾರ್ಯ ಮಾಡುತ್ತಾರೆ. ಭಕ್ತರು ಸೇರಿ ಬ್ಯಾಲಹಳ್ಳಿ ಗ್ರಾಮದಲ್ಲಿ ಉತ್ತಮವಾದ ದೇವಾಲಯ ನಿರ್ಮಾಣ ಮಾಡಿದ್ದಾರೆ. ದೇವಾಲಯ ಆವರಣದಲ್ಲಿ ಸಮುದಾಯ ಭವನ ಅವಶ್ಯಕತೆ ಇದೆ. ಸಮುದಾಯ ಭವನ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ದೇವಾಲಯ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ದೇವಾಲಯ ಕಮಿಟಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಆರ್.ಜಯರಾಮ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ.ಸೋಮಶೇಖರ್, ಗ್ರಾಮ ಪಂಚಾಯಿತಿ ಸದಸ್ಯ ಸತೀಶ್, ದೇವಾಲಯ ಕಮಿಟಿ ಅಧ್ಯಕ್ಷ ವಿ.ಎನ್.ಹನುಮಂತಯ್ಯ, ಅಂಗಡಿಗೆರೆ ರಾಮಣ್ಣ, ಸಿ.ಬಿ.ಶಂಕರ್, ಶಿವಣ್ಣ, ಡೆಲ್ಲಿತಿಮಯ್ಯ, ಗಂಗಣ್ಣ, ಶಿವಕುಮಾರ್ ಇದ್ದರು.