ಎಲ್ಲಾ ಕೆಲಸ ಒಂದೇ ಬಾರಿ ಮಾಡಲು ಸಾಧ್ಯವಿಲ್ಲ: ಶಾಸಕ ಕೆ. ಷಡಕ್ಷರಿ

| Published : Nov 09 2024, 01:03 AM IST

ಎಲ್ಲಾ ಕೆಲಸ ಒಂದೇ ಬಾರಿ ಮಾಡಲು ಸಾಧ್ಯವಿಲ್ಲ: ಶಾಸಕ ಕೆ. ಷಡಕ್ಷರಿ
Share this Article
  • FB
  • TW
  • Linkdin
  • Email

ಸಾರಾಂಶ

ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಸಹಾಯಕ ಮನೋಭಾವ ಉಂಟಾಗಿದ್ದು, ನಮಗೆ ಇಂತಹ ಪೌರಾಯುಕ್ತರು ಬೇಡ ಎಂದು ನಗರಸಭೆ ಸದಸ್ಯರು ಪೌರಾಯುಕ್ತರ ನಡೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಲ್ಲಿನ ನಗರಸಭೆಯಲ್ಲಿ ನಡೆಯಿತು. ತಿಪಟೂರಿನಲ್ಲಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಸಭೆಯಲ್ಲಿ ಕೊಲಾಹಲ । ಪೌರಾಯುಕ್ತರ ವರ್ಗಾವಣೆಗೆ ಆಗ್ರಹ । ಸಾಮಾನ್ಯ ಸಭೆ ಕನ್ನಡಪ್ರಭ ವಾರ್ತೆ ತಿಪಟೂರು

ಪೌರಾಯುಕ್ತರ ಬೇಜವಾಬ್ದಾರಿತನದಿಂದ ನಗರಸಭೆ ವ್ಯಾಪ್ತಿಯ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ. ಸದಸ್ಯರ ಮನವಿ ಹಾಗೂ ಸೂಚನೆಗಳಿಗೆ ಕಿಮ್ಮತ್ತಿಲ್ಲದಂತಾಗಿದೆ. ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಸಹಾಯಕ ಮನೋಭಾವ ಉಂಟಾಗಿದ್ದು, ನಮಗೆ ಇಂತಹ ಪೌರಾಯುಕ್ತರು ಬೇಡ ಎಂದು ನಗರಸಭೆ ಸದಸ್ಯರು ಪೌರಾಯುಕ್ತರ ನಡೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಲ್ಲಿನ ನಗರಸಭೆಯಲ್ಲಿ ನಡೆಯಿತು.

ನಗರಸಭಾ ಸಭಾಂಗಣದಲ್ಲಿ ಶುಕ್ರವಾರ ನಗರಸಭಾ ಅಧ್ಯಕ್ಷೆ ಯಮುನಾರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಬಡವರು, ಜನಸಾಮಾನ್ಯರು ನಗರಸಭೆಯಲ್ಲಿ ಕೆಲಸ ಮಾಡಿಸಿಕೊಳ್ಳಲಾಗುತ್ತಿಲ್ಲ. ಹಣವಿದ್ದರೆ ಮಾತ್ರ ಇಲ್ಲಿ ಕೆಲಸವಾಗುತ್ತದೆ. ಕಮಿಷನ್ ದಂಧೆ ನಡೆಯುತ್ತಿದ್ದು ಇಂತಹ ಭ್ರಷ್ಟ ಪೌರಾಯುಕ್ತರು ಬೇಡ. ಇವರಿಂದ ತಾಲೂಕು ಆಡಳಿತಕ್ಕೆ ಕಪ್ಪುಚುಕ್ಕೆಯಗಾಲಿದೆ ಎಂದರು.

ಕೂಡಲೇ ಇವರನ್ನು ಬೇರೆ ಕಡೆ ವರ್ಗಾವಣೆ ಮಾಡಿ. ಕಳೆದ ಎರಡೂ ವರ್ಷಗಳಿಂದಲೂ ನಗರದಲ್ಲಿ ಯುಜಿಡಿ ಮಿಶ್ರಿತ ಕಲುಷಿತ ನೀರನ್ನು ಜನರು ಕುಡಿಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜನರು ಸಮಸ್ಯೆಗಳ ನಡುವೆ ಬದುಕುವಂತಾಗಿದೆ ಎಂದು ಪೌರಾಯಕ್ತರ ವಿರುದ್ದ ಹರಿಹಾಯ್ದರು. ಶಾಸಕ ಕೆ. ಷಡಕ್ಷರಿ ಮಾತನಾಡಿ, ಸಭೆಗೆ ಶಿಸ್ತು ಮತ್ತು ಜನಪ್ರತಿನಿಧಿಗಳಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಿ. ನಗರ ವ್ಯಾಪ್ತಿಯಲ್ಲಿ ಏನೇ ಸಮಸ್ಯೆಗಳು ಬಂದರೂ ಬಗೆಹರಿಸಬೇಕು. ಬೇಕಾಬಿಟ್ಟಿಯಾಗಿ ವರ್ತಿಸಿದರೆ ನಾನು ಸಹಿಸುವುದಿಲ್ಲ ಎಂದು ಪೌಯುಕ್ತರಿಗೆ ಎಚ್ಚರಿಸಿದರು.

ನಗರಕ್ಕೆ ಕುಡಿಯುವ ನೀರುವ ಪೂರೈಸುವ ಈಚನೂರು ಕೆರೆ ಸ್ಥಳ ಪರಿಶೀಲಿಸಿದ್ದು ಬಂಡ್ ನಿರ್ಮಿಸಲಾಗಿದೆ. ಆದರೆ ಮಳೆ ಬಂದ ಕಾರಣ ನೀರಿಗೆ ಕಲುಷಿತ ಮಿಶ್ರಣವಾಗುತ್ತಿದೆ. ಶಾಶ್ವತ ಪರಿಹಾರ ಮಾಡಲು ಹಣದ ಅವಶ್ಯಕತೆ ಇದ್ದು ಇದಕ್ಕೆ ಟೆಂಡರ್‌ ಆಗಿದ್ದು ಕೂಡಲೇ ಪರಿಹರಿಸಲಾಗುವುದು.

ನಗರದಲ್ಲಿ ನೀರಿನ ಅಭಾವ ತಪ್ಪಿಸಲು ೧೬ಕ್ಕೂ ಹೆಚ್ಚು ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. ಜನರಿಗೆ ಬೇಕಾದ ಮೂಲಭೂತ ಸೌಕರ್ಯ ಕಲ್ಪಿಸುವುದು ನನ್ನ ಜವಾಬ್ದಾರಿ. ನಗರ ವಿಶಾಲವಾಗಿ ಬೆಳೆಯುತ್ತಿದ್ದು ಅಷ್ಟೇ ಜನಸಂಖ್ಯೆಯೂ ಹೆಚ್ಚಿರುವ ಕಾರಣ ಎಲ್ಲಾ ಕೆಲಸಗಳನ್ನು ಒಂದೇ ಬಾರಿ ಮಾಡಲು ಸಾಧ್ಯವಿಲ್ಲ ಕಾಲಾವಕಾಶ ಬೇಕಿದೆ ಎಂದರು. ನಗರಸಭೆ ಸದಸ್ಯ ಕೋಟೆಪ್ರಭು ಮಾತನಾಡಿ, ಇ-ಖಾತೆ ಸೇರಿದಂತೆ ಏನೇ ಯಾವುದೇ ಕೆಲಸ ಮಾಡಿಸಿಕೊಳ್ಳಬೇಕಾದರೆ ಮೊದಲು ಪೌರಾಯುಕ್ತರಿಗೆ ಇಂತಿಷ್ಟು ಹಣ ಕೊಡಬೇಕು. ನಗರಸಭೆ ಸದಸ್ಯರು ವಾರ್ಡ್‌ನ ಯಾವುದೇ ಸಮಸ್ಯೆಗಳನ್ನು ತಂದರೂ ಕಾಲಕಸದಂತೆ ನೋಡುತ್ತಾರೆ. ಕುಡಿಯುವ ನೀರು, ರಸ್ತೆ, ವಿದ್ಯುತ್ ದೀಪ ಪ್ರತಿಯೊಂದು ವಾರ್ಡ್‌ನಲ್ಲೂ ಸಮಸ್ಯೆಗಳಿವೆ.ಯಾವುದೇ ಸಮಸ್ಯೆಗೆ ಇವರು ಸ್ಪಂದಿಸುತ್ತಿಲ್ಲ ಎಂದರು. ಸದಸ್ಯರಾದ ರಾಮಮೋಹನ್ ಮತ್ತು ಸೊಪ್ಪುಗಣೇಶ್ ಮಾತನಾಡಿ, ಸಭೆಯಲ್ಲಿ ಇಷ್ಟೆಲ್ಲ ಗಲಾಟೆ, ಗದ್ದಲವಾಗಲೂ ಪೌರಾಯುಕ್ತರೇ ಕಾರಣ, ಸರಿಯಾದ ಸಮಯಕ್ಕೆ ಸಭೆ ಕರೆದು ಸದಸ್ಯರ ಸಮಸ್ಯೆಗಳನ್ನು ಸ್ವೀಕರಿಸಿದ್ದರೇ ಗಲಾಟೆ ನಡೆಯುತ್ತಿರಲಿಲ್ಲ. ಗುತ್ತಿಗೆದಾರರನ್ನೇ ಒಂದು ರೀತಿ, ಸದಸ್ಯರನ್ನೇ ಒಂದು ರೀತಿ ನೋಡುತ್ತಾರೆ. ಬೇಸಿಗೆ ಸಮಯದಲ್ಲಿ ಸಮರ್ಪಕ ನೀರು ಕೊಡಲಿಲ್ಲ. ಶಾಸಕರು ಇವರನ್ನು ಹಿಡಿತದಲ್ಲಿಟ್ಟು ಕೊಳ್ಳಬೇಕಿದೆ. ಹೈಮಾಸ್ಟ್‌ ದೀಪಗಳು ಕೆಟ್ಟು ನಿಂತಿವೆ. ರಸ್ತೆಗಳು, ಚರಂಡಿಗಳ ಸ್ವಚ್ಛತೆ ಇಲ್ಲ ಕೂಡಲೇ ಕ್ರಮವಹಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉಚಿತ ಕುಡಿಯುವ ನೀರು ಹಾಗೂ ಯುಜಿಡಿ ಲಿಂಕ್ ಕಲ್ಪಿಸಬೇಕೆಂದು ಸೊಪ್ಪು ಗಣೇಶ್ ಒತ್ತಾಯಿಸಿದರು.ಸಭೆಯಲ್ಲಿ ನಗರಸಭೆ ಅಧ್ಯಕ್ಷ ಯಮುನಾ, ಉಪಾಧ್ಯಕ್ಷೆ ಮೇಘಶ್ರೀ ಭೂಷಣ್, ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಸೇರಿದಂತೆ ಎಲ್ಲಾ ಸದಸ್ಯರುಗಳಿದ್ದರು.

ಸಾಮಾನ್ಯ ಸಭೆಯಲ್ಲಿ ಸಮಸ್ಯೆಗೆ

ಪರಿಹಾರ ಕಂಡುಕೊಳ್ಳುವಲ್ಲಿ ವಿಫಲ

ಸಭೆಯಲ್ಲಿ ಸಮಸ್ಯೆಗಳಿಗಿಂತ ಸದಸ್ಯರ ಹಾಗೂ ಪೌರಾಯುಕ್ತ ನಡುವಿನ ಗಲಾಟೆ, ಗದ್ದಲವೇ ಹೆಚ್ಚಾಗಿತ್ತು. ಪೌರಾಯುಕ್ತರ ಬೇಜಾಬ್ದಾರಿ ನಡೆಗೆ ಅಸಹಾಯಕತೆಯಿಂದಲೇ ಸದಸ್ಯರಗಳು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ಗಲಾಟೆಯನ್ನು ಶಮನ ಮಾಡಲು ಯತ್ನಿಸುತ್ತಲೇ ಕೆಲ ಸದಸ್ಯರೊಂದಿಗೆ ವಾಗ್ವಾದ ನಡೆಸಿದರು. ಕಳೆದ ಒಂದೂವರೆ ವರ್ಷಗಳ ನಂತರ ಸಭೆ ಕರೆದಿದ್ದರೂ ಇಲ್ಲಿ ಸಮಸ್ಯೆಗಳಿಗೆ ಪರಿಹಾರವಾಗಲಿ ಅಥವಾ ಚರ್ಚೆಯಾಗಲಿ ನಡೆಯಲಿಲ್ಲ. ನಗರಸಭೆಗೆ ಮಹಿಳಾ ಅಧ್ಯಕ್ಷೆಯಾಗಿರುವ ಕಾರಣ ಅವರ ಮಾತನ್ನು ಯಾರು ಕೇಳಿಸಿಕೊಳ್ಳುವ ಗೋಜಿಗೂ ಹೋಗುತ್ತಿರಲಿಲ್ಲ. ಒಟ್ಟಾರೆ ಸಮಯ ಪೋಲಾಗಿದ್ದು ಬಿಟ್ಟರೆ ಸಭೆಯಲ್ಲಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಯಿತು.