----ಕನ್ನಡಪ್ರಭ ವಾರ್ತೆ ಮೈಸೂರುಮೊದಲ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಭಕ್ತರ ದಂಡು ನೆರೆದಿತ್ತು.ಚಾಮುಂಡಿಬೆಟ್ಟಕ್ಕೆ ಮುಂಜಾನೆಯಿಂದಲೇ ಮೆಟ್ಟಿಲು, ಬಸ್ ಗಳ ಮೂಲಕ ದಾವಿಸಿ ಬಂದ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ವಿವಿಧ ಜಿಲ್ಲೆ, ಹೊರ ರಾಜ್ಯದಿಂದ ಆಗಮಿಸಿದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ವಿಶೇಷವಾಗಿ ಅಲಂಕೃತಗೊಂಡಿದ್ದ ತಾಯಿ ಚಾಮುಂಡೇಶ್ವರಿಯನ್ನು ಕಂಡು ಧನ್ಯರಾದರು. ಜೈ ಚಾಮುಂಡೇಶ್ವರಿ, ಜೈ ಶಕ್ತಿದೇವಿ ಎಂಬ ಜಯಘೋಷಗಳನ್ನು ಕೂಗುತ್ತ ಭಕ್ತಿಭಾವ ಮೆರೆದರು. ಲಕ್ಷ್ಮೀ ಅಲಂಕಾರಮೊದಲ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ವಿಶೇಷ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದಳು. ದೇವಸ್ಥಾನದ ಆವರಣ ಬಗೆ ಬಗೆಯ ಫಲಪುಷ್ಪಗಳಿಂದ ಅಲಂಕೃತಗೊಂಡಿತ್ತು. ಕೆಂಪು, ನೀಲಿ, ಬಿಳಿ, ಹಳದಿ ಬಣ್ಣದ ಸೇವಂತಿಗೆ ಹೂ, ಗುಲಾಬಿ ಹೂ, ಚೆಂಡು ಹೂ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ದೇವಸ್ಥಾನದ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಹೂವಿನಲ್ಲೇ ಶ್ರೀ ಚಾಮುಂಡೇಶ್ವರಿ ಅಮ್ಮ ಎಂದು ಬರೆಯಲಾಗಿತ್ತು.ಭಕ್ತರು ಮಾತ್ರವಲ್ಲದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ, ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಚ್.ಡಿ. ರೇವಣ್ಣ, ರಮೇಶ್ ಬಂಡಿಸಿದ್ದೇಗೌಡ, ಕೆ. ಹರೀಶ್ ಗೌಡ, ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ, ನಟಿ ಮಾಳವಿಕಾ ಅವಿನಾಶ್ ಸೇರಿದಂತೆ ಹಲವು ಗಣ್ಯರು ಚಾಮುಂಡೇಶ್ವರಿ ದರ್ಶನ ಪಡೆದರು. ಭಕ್ತರ ದಂಡುಮೊದಲ ಆಷಾಢ ಶುಕ್ರವಾರವೇ ಬೆಟ್ಟಕ್ಕೆ ಹೆಚ್ಚು ಭಕ್ತರು ಆಗಮಿಸಿದ್ದರು. ದೇವಿಯ ದರ್ಶನಕ್ಕೆ ಮಧ್ಯರಾತ್ರಿಯಿಂದಲೇ ದಾವಿಸಿ ಬಂದ ಭಕ್ತರಿಗೆ ಅಚ್ಚುಕಟ್ಟಾಗಿ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಉಚಿತ ದರ್ಶನಕ್ಕೆ ಮಲ್ಟಿಲೆವೆಲ್ ಪಾರ್ಕಿಂಗ್ ಬಳಿಯಿಂದಲೇ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. 2 ಸಾವಿರ ರೂ. ಟಿಕೆಟ್ ಪಡೆದು ಬಂದವರು, ವಿಐಪಿಗಳಿಗೆ ಮಹಿಷಾಸುರ ಪ್ರತಿಮೆ ಬಳಿಯಿಂದ ಸರತಿ ಸಾಲಿತ್ತು. ಮೆಟ್ಟಿಲು ಹತ್ತಿ ಬಂದವರಿಗೂ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಯಾವುದೇ ರೀತಿಯ ಗೊಂದಲ, ನೂಕು ನುಗ್ಗಲಿಗೆ ಆಸ್ಪದವಿರಲಿಲ್ಲ. ಎತ್ತರದ ಬ್ಯಾರಿಕೇಡ್ ಗಳನ್ನು ಹಾಕಿದ್ದರಿಂದ ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಜಿಗಿಯಲು ಅವಕಾಶವಿರಲಿಲ್ಲ. ಅಲ್ಲದೆ ಕಳೆದ ಬಾರಿಯಂತೆ ಈ ಬಾರಿಯೂ ದೇವಸ್ಥಾನದವರೆಗೆ ವಾಹನಗಳ ಪ್ರವೇಶ ನಿರ್ಬಂಧಿಸಿದ್ದರಿಂದ ಯಾವುದೇ ತೊಂದರೆಯಾಗಲಿಲ್ಲ. ಆದರೆ, ಎಲ್ಲಾ ಸಾಲಿನವರು ದೇಗುಲದ ನವರಂಗ ಪ್ರವೇಶಿಸುವ ವೇಳೆ ಒಂದಾದಾಗ ನೂಕುನುಗ್ಗಲು ಉಂಟಾಯಿತು. ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ದೇವಿಗೆ ವಿಶೇಷ ಪೂಜೆಶಕ್ತಿದೇವತೆ ತಾಯಿ ಚಾಮುಂಡೇಶ್ವರಿಗೆ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಅರ್ಚಕರು ಮುಂಜಾನೆ 3.30 ರಿಂದಲೇ ವಿವಿಧ ಪೂಜಾ ಕೈಂಕರ್ಯಗಳನ್ನು ಆರಂಭಿಸಿದರು. ಮುಂಜಾನೆ 3 ಗಂಟೆಯಿಂದಲೇ ದೇವಾಲಯ ಸಮೀಪವಿರುವ ದೇವಿ ಕೆರೆಯಿಂದ ಜಲವನ್ನು ತಂದು ಚಾಮುಂಡೇಶ್ವರಿ ದೇವಿಗೆ ಮಹನ್ಯಾಸಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕದ ನಂತರ ವಿಶೇಷ ಅಲಂಕಾರ, ಕುಂಕುಮಾರ್ಚನೆ ಹಾಗೂ ಸಹಸ್ರನಾಮಾರ್ಚನೆ ಮಾಡಿ ಷೋಡಶೋಪಚಾರ ಪೂಜೆ ನೆರವೇರಿಸಲಾಯಿತು. ಅಲ್ಲದೆ, ಬೆಳಗ್ಗೆ 9.30ಕ್ಕೆ ದೇವಿಗೆ ಮಹಾ ಮಂಗಳಾರತಿ, ಸಂಜೆ 6 ರಿಂದ 7.30 ರವರೆಗೆ ಅಭಿಷೇಕ ನಡೆಯಿತು. ಬೆಳಗ್ಗೆ 5.30 ರಿಂದ ರಾತ್ರಿ 10 ರವರೆಗೂ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಸ್ ಸೌಲಭ್ಯಜಿಲ್ಲೆ ಸೇರಿದಂತೆ ಬೆಂಗಳೂರು, ಮಂಡ್ಯ, ಹಾಸನ, ತಮಿಳುನಾಡು, ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ತಮ್ಮ ವಾಹನಗಳನ್ನು ಲಲಿತಮಹಲ್ ಬಳಿ ನಿಲ್ಲಿಸಿ ಸಾರಿಗೆ ಬಸ್ ನಲ್ಲಿ ಬೆಟ್ಟಕ್ಕೆ ಬಂದು ದರ್ಶನ ಪಡೆದರು. ಇದಕ್ಕಾಗಿ ರೂಟ್ ಬಸ್ ಗಳೊಂದಿಗೆ 70 ಬಸ್ ಗಳ ವ್ಯವಸ್ಥೆ ಮಾಡಲಾಗಿತ್ತು. ಉಚಿತ ದರ್ಶನಕ್ಕೆ ಸಾಮಾನ್ಯ ಬಸ್ ಗಳಾದರೆ, 2 ಸಾವಿರ ರೂ ಟಿಕೆಟ್ ತೆಗೆದುಕೊಂಡ ಭಕ್ತರಿಗೆ ವೋಲ್ವೊ, ಐರಾವತ ಬಸ್ ವ್ಯವಸ್ಥೆ ಇತ್ತು. ಜೊತೆಗೆ 500 ಎಂಎಲ್ ನೀರಿನ ಬಾಟಲ್, ಚಾಮುಂಡಿ ತಾಯಿ ವಿಗ್ರಹ, ಕುಂಕುಮ, ಲಡ್ಡು ಒಳಗೊಂಡ ಬ್ಯಾಗ್ ನೀಡಲಾಯಿತು.ಮೆಟ್ಟಿಲು ಹತ್ತಿ ಬಂದವರಿಗೆ ಬಾದಾಮಿ ಹಾಲು, ಬಿಸ್ಕೆಟ್, ಮುತ್ತೈದೆಯರಿಗೆ ಪ್ರಾಧಿಕಾರದಿಂದ ಉಚಿತವಾಗಿ ಮಡಿಲಕ್ಕಿ, ಕುಂಕುಮ ವಿತರಿಸಲಾಯಿತು. ಪ್ರಸಾದ ವಿತರಣೆಈ ಬಾರಿ ಮಲ್ಟಿ ಲೆವೆಲ್ ಪಾರ್ಕಿಂಗ್ ಸ್ಥಳದಲ್ಲಿ ಚಾಮುಂಡೇಶ್ವರಿ ಸೇವಾ ಸಮಿತಿಯಿಂದ 20 ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ತಿಂಡಿಗೆ ಕೇಸರಿ ಬಾತ್, ಉಪ್ಪಿಟ್ಟು, ಪೊಂಗಲ್, ಮಧ್ಯಾಹ್ನದ ಊಟಕ್ಕೆ ಪಲ್ಯ, ಕೋಸಂಬರಿ, ರೈಸ್ ಬಾತ್, ಅನ್ನ ಸಾಂಬಾರ್, ಲಾಡು ವಿತರಿಸಲಾಯಿತು. ಭಕ್ತರಿಗೆ ನೀಡಲೆಂದೆ 35 ಸಾವಿರ ಲಾಡು ತಯಾರಿಸಲಾಗಿತ್ತು.----ಕೋಟ್...ಆಷಾಢ ಮಾಸದಲ್ಲಿ ಶಕ್ತಿ ದೇವತೆಗಳ ಆರಾಧನೆ ಮಾಡಲಾಗುತ್ತದೆ. ನಾಡಿನ ಒಳಿತಿಗಾಗಿ ತಾಯಿ ಬಳಿ ಪ್ರಾರ್ಥನೆ ಮಾಡಲಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ಸಮೃದ್ಧಿ ಹೊಂದಲಿ ಎಂದು ಪ್ರಾರ್ಥಿಸಲಾಗಿದೆ.- ಶಶಿಶೇಖರ್ ದೀಕ್ಷಿತ್, ಪ್ರಧಾನ ಅರ್ಚಕರು, ಚಾಮುಂಡೇಶ್ವರಿ ದೇವಸ್ಥಾನ----ಬಾಕ್ಸ್... ಬಸ್ ನಲ್ಲಿ ಬಂದ ಸಚಿವ ಯತೀಂದ್ರನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಮ್ಮ ಸರ್ಕಾರಿ ಕಾರನ್ನು ಬಿಟ್ಟು ಕೆಎಸ್ಆರ್ ಟಿಸಿ ಬಸ್ ನಲ್ಲಿ ಚಾಮುಂಡಿಬೆಟ್ಟಕ್ಕೆ ಆಗಮಿಸಿದರು. ವಿಐಪಿಗಳಿಗೆ ಬೆಳಗ್ಗೆ 5.30 ರಿಂದ 9.30 ರವರೆಗೆ ಸಮಯ ನಿಗದಿ ಮಾಡಿದ್ದರಿಂದ ದೇವಸ್ಥಾನಕ್ಕೆ ತೆರಳದೆ ಮಾದರಿ ನಡೆ ಅನುಸರಿಸಿದರು.ನಾವೇ ನಿಯಮ ಮಾಡಿ ಅದನ್ನು ಉಲ್ಲಂಘಿಸುವುದು ಸರಿಯಲ್ಲ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿತ್ತು. ಹೀಗಾಗಿ, ದರ್ಶನ ಮಾಡಲಿಲ್ಲ. ಬೇರೆ ಗಣ್ಯರೂ ಶುಕ್ರವಾರ, ಶನಿವಾರ, ಭಾನುವಾರ ಬೆಳಗ್ಗೆ 10 ಗಂಟೆಯೊಳಗೆ ಬನ್ನಿ. ಇದರಿಂದ ಜನ ಸಾಮಾನ್ಯರಿಗೂ ಒಳ್ಳೆಯದಾಗುತ್ತದೆ ಎಂದು ಡಾ. ಯತೀಂದ್ರ ಮನವಿ ಮಾಡಿದರು.---- 2 ಸಾವಿರ ಟಿಕೆಟ್- ತಪ್ಪದ ತೊಂದರೆ2 ಸಾವಿರ ರೂ. ನೀಡಿ ವಿಶೇಷ ದರ್ಶನಕ್ಕೆ ಟಿಕೆಟ್ ಪಡೆದು ಬಂದ ಭಕ್ತಾದಿಗಳು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಸಹ ಜರುಗಿತು.ಬೆಟ್ಟದ ತಪ್ಪಲಿನಲ್ಲಿ ಬಸ್ ಹತ್ತುವಾಗ ತುಂಬಾ ತೊಂದರೆಯಾಯಿತು. ಭಾರೀ ನೂಕುನುಗ್ಗಲು ಇದ್ದುದರಿಂದ ಬಸ್ ಹತ್ತಲು ಕಷ್ಟ ಪಡಬೇಕಾಯಿತು. ನಮಗಿಂತ ಧರ್ಮ ದರ್ಶನಕ್ಕೆ ಬಂದವರೇ ಸುಲಭವಾಗಿ ಬಸ್ ಹತ್ತಿ ಬಂದರು. 2 ಸಾವಿರ ಕೊಟ್ಟು ಬಂದರೂ ಪ್ರಯೋಜನವಿಲ್ಲ ಎಂದು ಕೆಲವು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.---- ವಿಜಯಲಕ್ಷ್ಮಿ ದರ್ಶನ್ ಭೇಟಿನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು, ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈಗಾಗಲೇ ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಹೀಗಾಗಿ, ವಿಜಯಲಕ್ಷ್ಮಿ ಅವರು, ಸಂಕಷ್ಟ ಪರಿಹಾರಕ್ಕಾಗಿ ತಾಯಿ ಚಾಮುಂಡೇಶ್ವರಿಯ ಮೊರೆಯಿಟ್ಟರು.ನಟ ದರ್ಶನ್ ಆಷಾಢ ಶುಕ್ರವಾರಗಳಂದು ಪ್ರತಿ ವರ್ಷ ಕುಟುಂಬ ಸಮೇತ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮಿ ಚಾಮುಂಡೇಶ್ವರಿ ದರ್ಶನ ಪಡೆದರು. ಈ ವೇಳೆ ದರ್ಶನ್ ಅಕ್ಕನ ಮಗ ಚಂದನ್ ಇದ್ದರು.
ಮೊದಲ ಆಷಾಢ ಶುಕ್ರವಾರಕ್ಕೆ ಭಕ್ತರ ದಂಡು
ಮುಂಜಾನೆಯಿಂದಲೇ ಮೆಟ್ಟಿಲು, ಬಸ್ ಗಳ ಮೂಲಕ ದಾವಿಸಿ ಬಂದ ಭಕ್ತರು
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.