ಕನ್ನಡಪ್ರಭ ವಾರ್ತೆ ಇಂಡಿ

ಬಂಥನಾಳದ ವೃಷಭಲಿಂಗೇಶ್ವರ ಸಂಸ್ಥಾನ ಮಠದ ನೂತನ ಉತ್ತರಾಧಿಕಾರಿಯಾಗಿ ಸಂಗಬಸವ ಸ್ವಾಮಿಗಳನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.

ಬಸವನಬಾಗೇವಾಡಿ ತಾಲೂಕಿನ ಯರನಾಳ ಗ್ರಾಮದ ಶ್ರೀ ಸಂಗಬಸವ ಸ್ವಾಮೀಜಿ ಮತ್ತು ಬಂಥನಾಳ ಶ್ರೀ ವೃಷಭಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಹಲವು ಮಠಾಧೀಶರು ಮತ್ತು ಸುಮಾರು 60ಕ್ಕೂ ಅಧಿಕ ಹಳ್ಳಿಗಳ ಸಾವಿರಾರು ಭಕ್ತರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಉತ್ತರಾಧಿಕಾರಿ ಗೊಂದಲದ ಮಾತೇ ಇಲ್ಲ. ಕೆಲವರು ದುರುದ್ದೇಶದಿಂದ ವಿರೋಧ ಮಾಡುತ್ತಿದ್ದು, ಭಕ್ತರು ಊಹಾಪೋಹಗಳಿಗೆ ಮನ್ನಣೆ ನೀಡಬೇಡಿ ಎಂದು ಕರವೇ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ ಮನವಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರುವ ಶ್ರಾವಣ ಮಾಸದಲ್ಲಿ ಅಧಿಕೃತವಾಗಿ ದಿನಾಂಕ ನಿಗದಿಪಡಿಸಿ ಪುರ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೂಳ್ಳಲಿದ್ದಾರೆ ಎಂದು ಹೇಳಿದರು.


ತಾಂಬಾ ಗ್ರಾಮದ ಹಿರಿಯ ಮುಖಂಡ ಜಿ.ವೈ.ಗೊರನಾಳ ಮಾತನಾಡಿ, ಮಠದ ಉತ್ತರಾಧಿಕಾರಿ ಆಯ್ಕೆ ಯಾವುದೇ ಗೊಂದಲ ಇಲ್ಲದೆ ಎಲ್ಲ ಭಕ್ತರ ಇಚ್ಛೆಯ ಮೇರೆಗೆ ನಡೆದಿದೆ ಎಂದು ಹೇಳಿದರು. ತಾಂಬಾ ಗ್ರಾಮದ ಮಾಜಿ ಗ್ರಾಪಂ ಅಧ್ಯಕ್ಷ ರಾಜು ಗಂಗನಹಳ್ಳಿ, ರಾಜು ಗುಂಜುಟಗಿ, ತಾಪಂ ಮಾಜಿ ಸದಸ್ಯ ಪ್ರಕಾಶ್ ಮುಂಜಿ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು