ಹಲವೆಡೆ ಮತ್ತೆ ಗುಡ್ಡ ಕುಸಿತ: ಸಂಚಾರಕ್ಕೆ ವ್ಯತ್ಯಯ

| Published : Jul 20 2024, 12:51 AM IST

ಹಲವೆಡೆ ಮತ್ತೆ ಗುಡ್ಡ ಕುಸಿತ: ಸಂಚಾರಕ್ಕೆ ವ್ಯತ್ಯಯ
Share this Article
  • FB
  • TW
  • Linkdin
  • Email

ಸಾರಾಂಶ

ಕುಮಟಾ- ಸಿದ್ದಾಪುರ ರಸ್ತೆಯಲ್ಲಿ ಉಳ್ಳೂರುಮಠ ಗುಡ್ಡ ಶುಕ್ರವಾರ ಕುಸಿದಿದೆ. ಇದರಿಂದ ಕುಮಟಾ- ಸಿದ್ದಾಪುರ ನಡುವೆ ಸಂಚಾರ ಸ್ಥಗಿತಗೊಂಡಿದೆ.

ಕಾರವಾರ: ಕುಮಟಾ- ಶಿರಸಿ ಹೆದ್ದಾರಿಯ ರಾಗಿಹೊಸಳ್ಳಿ ಬಳಿ ಗುಡ್ಡ ಕುಸಿದಿದ್ದು, ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಕಾರ್ಯ ಬಹುತೇಕ ಮುಕ್ತಾಯದ ಹಂತದಲ್ಲಿರುವಾಗಲೆ ಮತ್ತೆ ಗುಡ್ಡ ಕುಸಿದಿದ್ದು, ಆ ಮಣ್ಣು ಕಲ್ಲುಗಳನ್ನು ತೆಗೆದ ಮೇಲಷ್ಟೇ ಸಂಚಾರಕ್ಕೆ ಮುಕ್ತವಾಗಲಿದೆ. ಕಾರವಾರ- ಇಳಕಲ್ ಹೆದ್ದಾರಿಯಲ್ಲಿ ಕಡವಾಡ- ಮಂದ್ರಾಳಿ ಬಳಿ ಗುಡ್ಡ ಕುಸಿದಿದ್ದು, ತೆರವು ಕಾರ್ಯಾಚರಣೆ ಇನ್ನೂ ಪೂರ್ಣವಾಗಿಲ್ಲ. ಸಂಚಾರವನ್ನು ಜು. 20ರ ತನಕ ನಿಷೇಧಿಸಲಾಗಿದೆ. ಕುಮಟಾ- ಸಿದ್ದಾಪುರ ರಸ್ತೆಯಲ್ಲಿ ಉಳ್ಳೂರುಮಠ ಗುಡ್ಡ ಶುಕ್ರವಾರ ಕುಸಿದಿದೆ. ಇದರಿಂದ ಕುಮಟಾ- ಸಿದ್ದಾಪುರ ನಡುವೆ ಸಂಚಾರ ಸ್ಥಗಿತಗೊಂಡಿದೆ. ಗೋವಾ- ಮಂಗಳೂರು ಚತುಷ್ಪಥ ಹೆದ್ದಾರಿಯಲ್ಲಿ ಕುಮಟಾ ತಾಲೂಕಿನ ಬರ್ಗಿ ಬಳಿ ಗುರುವಾರ ಗುಡ್ಡ ಕುಸಿದು ಸಂಚಾರ ಸ್ಥಗಿತವಾಗಿತ್ತು. ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಂಜೆ ಮತ್ತೆ ಗುಡ್ಡ ಕುಸಿದಿದ್ದು ತೆರವು ಕಾರ್ಯ ನಡೆಯುತ್ತಿದೆ. ಗೋಕರ್ಣ ಸಮೀಪದ ದೇವರಭಾವಿ ಬಳಿಯ ಗುಡ್ಡ 200 ಮೀಟರಿಗೂ ಹೆಚ್ಚು ಅಗಲದಲ್ಲಿ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಆತಂಕವಿದೆ. ಶುಕ್ರವಾರ ಮತ್ತೆ ಮಳೆ ಜೋರಾಗಿದೆ. ದಟ್ಟವಾದ ಮೋಡ ಕವಿದ ವಾತಾವರಣದೊಂದಿಗೆ ಆಗಾಗ ಸುರಿಯುವ ಭಾರಿ ಮಳೆ ಮತ್ತೆ ಪ್ರವಾಹದ ಆತಂಕವನ್ನು ತಂದೊಡ್ಡಿದೆ. ಕುಮಟಾದ ಚಂಡಿಕಾ ನದಿ ಉಪ್ಪಿನಪಟ್ಟಣ ಸೇತುವೆ ಮೇಲೆ ಪ್ರವಹಿಸುತ್ತಿದೆ. ಕತಗಾಲ ಬಳಿ ಕುಮಟಾ- ಶಿರಸಿ ಹೆದ್ದಾರಿಯ ಮೇಲೂ ನುಗ್ಗಿದೆ.

ಅಘನಾಶಿಸಿ ಗಂಗಾವಳಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಕುಮಟಾ, ಹೊನ್ನಾವರ, ಅಂಕೋಲಾ, ಕಾರವಾರದಲ್ಲಿ ಭಾರೀ ಮಳೆಯಾಗುತ್ತಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ, ಮುಂಡಗೋಡ, ಹಳಿಯಾಳ ಹಾಗೂ ದಾಂಡೇಲಿಯಲ್ಲೂ ಮಳೆ ತೀವ್ರವಾಗಿದೆ.

ಖಾಲಿಯಾಯ್ತು ಟ್ಯಾಂಕರ್:ಶಿರೂರು ಗುಡ್ಡ ಕುಸಿತದ ರಭಸಕ್ಕೆ ನದಿಗೆ ಬಿದ್ದು ತೇಲುತ್ತಿರುವ ಟ್ಯಾಂಕರ್‌ನಿಂದ ಅನಿಲವನ್ನು ನೀರಿಗೆ ಬಿಡುವ ಕಾರ್ಯಾಚರಣೆ ಶುಕ್ರವಾರ ಮುಕ್ತಾಯವಾಗಿದೆ. ಎಂಆರ್‌ಪಿಎಲ್, ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ನೇವಿಯ ತಜ್ಞರ ತಂಡ ಕಾರ್ಯಾಚರಣೆ ನಡೆಸಿತು. ನದಿಯ ನಡುವೆ ಇದ್ದ ಟ್ಯಾಂಕರ್‌ ಅನ್ನು ಕ್ರೇನ್ ಬಳಸಿ ತೀರಕ್ಕೆ ಎಳೆತಂದು ಗ್ಯಾಸ್ಅನ್ನು ನೀರಿಗೆ ಹಂತ- ಹಂತವಾಗಿ ಬಿಡಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಸಮೀಪದ ಸಗಡಗೇರಿ ಊರಿಗೆ ಊರನ್ನೇ ಖಾಲಿ ಮಾಡಿ ಜನರಿಗೆ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಇಂದು ಎಚ್.ಡಿ. ಕುಮಾರಸ್ವಾಮಿ ಭೇಟಿ: ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಶನಿವಾರ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ನೇರವಾಗಿ ಶಿರೂರಿಗೆ ಭೇಟಿ ನೀಡುವ ಕುಮಾರಸ್ವಾಮಿ ಅಲ್ಲಿಂದ ಬೆಂಗಳೂರಿಗೆ ಮರಳಲಿದ್ದಾರೆ.