ಸಾರಾಂಶ
ಅರಕಲಗೂಡು ತಾಲೂಕಿನಲ್ಲಿ ವಾರದಿಂದ ಸುರಿಯುತ್ತಿರುವ ಪುನರ್ವಸು ಮಳೆಗೆ ಹಲವು ಮನೆಗಳು ಕುಸಿದು ಬಿದ್ದಿವೆ. ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಶಿಥಿಲಾವಸ್ಥೆ ತಲುಪಿದ್ದ ಮನೆಯ ಗೋಡೆಗಳು ಕುಸಿದು ಬಿದ್ದಿವೆ.
- ಬಿಡುವು ನೀಡದ ಮಳೆಗೆ ನಲುಗಿದ ಹಳೆಮನೆಗಳು । ಜೀವಭಯದಲ್ಲಿ ನಿವಾಸಿಗಳುಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನಲ್ಲಿ ವಾರದಿಂದ ಸುರಿಯುತ್ತಿರುವ ಪುನರ್ವಸು ಮಳೆಗೆ ಹಲವು ಮನೆಗಳು ಕುಸಿದು ಬಿದ್ದಿವೆ. ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಶಿಥಿಲಾವಸ್ಥೆ ತಲುಪಿದ್ದ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಹಲವು ಗ್ರಾಮಗಳಲ್ಲಿನ ಕೃಷಿ ಬೆಳೆಗಳು ಕೂಡ ಜಲಾವೃತಗೊಂಡಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಕುರಿತು ವರದಿಯಾಗಿದೆ.ಗುರುವಾರ ಮತ್ತು ಶುಕ್ರವಾರ ಇಡೀ ದಿನ ಮಳೆ ಸುರಿಯಿತು. ಇದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಬೇಲಿಕರ್ಪೂರವಳ್ಳಿ ಗ್ರಾಮದ ಚೆಲುವಯ್ಯ ಎಂಬುವರಿಗೆ ಸೇರಿದ ವಾಸದ ಮನೆಯ ಗೋಡೆ ಕುಸಿತಗೊಂಡಿದೆ. ಅದೇ ರೀತಿ ರಾಗಿ ಮರೂರು ಗ್ರಾಮದ ನಿಂಗಯ್ಯ ಎಂಬುವರಿಗೆ ಸೇರಿದ ವಾಸದ ಮನೆಯ ಒಂದು ಭಾಗದ ಮಣ್ಣಿನ ಗೋಡೆ ಮಳೆಗೆ ಕುಸಿದಿದೆ. ವಿಜಿ ಕೊಪ್ಪಲು ಗ್ರಾಮದ ಭಾಗ್ಯ ಎಂಬುವರಿಗೆ ಸೇರಿದದ ವಾಸದ ಮನೆಯ ಗೋಡೆ, ಮೇಲ್ಛಾವಣಿ ಕುಸಿತಗೊಂಡಿದೆ. ಇದರಿಂದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮನೆಗಳ ಹಾನಿಯಿಂದ ದವಸ ಧಾನ್ಯಗಳು, ಬಟ್ಟೆ, ಇತರೆ ಪರಿಕರಗಳಿಗೆ ಹಾನಿ ಉಂಟಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ, ದಾರಿಕೊಂಗಳಲೆ ಗ್ರಾಮದ ಮಹಾದೇವಪ್ಪ ಹಾಗೂ ವಡ್ಡರಹಳ್ಳಿ ಗ್ರಾಮದ ರಾಜಯ್ಯ ಎಂಬುವರಿಗೆ ಸೇರಿದ ವಾಸದ ಮನೆಗಳ ಗೋಡೆ ಮತ್ತು ಮೇಲ್ಛಾವಣಿ ಕುಸಿದಿದೆ. ವಡ್ಡರಹಳ್ಳಿ ಗ್ರಾಮದ ರಾಜಯ್ಯ ಎಂಬುವ ವಾಸದ ಮನೆ ಮಳೆಯಿಂದ ಬಿದ್ದಿದೆ. ದಾರಿಕೊಂಗಳಲೆ ಗ್ರಾಮದ ಮಹಾದೇವಪ್ಪ ಎಂಬುವರಿಗೆ ಸೇರಿದ ವಾಸದ ಮನೆಯ ಒಂದು ಭಾಗದ ಗೋಡೆ ಮಳೆಯಿಂದ ಕುಸಿದಿದೆ ಹಾಗೂ ಹೆಗ್ಗಡಿಹಳ್ಳಿಯ ಅಣ್ಣೇಗೌಡ ಎಂಬುವರಿಗೆ ಸೇರಿದ ವಾಸದ ಮನೆ ಕುಸಿದು ಬಿದ್ದಿದ್ದು, ನೆಲೆಯಿಲ್ಲದೇ ಮನೆ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.ತಹಸೀಲ್ದಾರ್ ಭೇಟಿ: ರಾಮನಾಥಪುರ ಹೋಬಳಿಯಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವ ಕಾರಣ ಹಾಗೂ ಕಾವೇರಿ ನದಿಯಲ್ಲಿ ಅತಿ ಹೆಚ್ಚು ನೀರು ಹರಿಯುತ್ತಿರುವುದರಿಂದ ನದಿ ದಡದಲ್ಲಿ ವಾಸಿಸುವ ರಾಮನಾಥಪುರ ಗ್ರಾಮದ ಜನರ ಮನೆಗಳಿಗೆ ತಾಲೂಕು ದಂಡಾಧಿಕಾರಿಗಳು ಹಾಗೂ ತಹಸೀಲ್ದಾರರಾದ ಬಸವ ರಡ್ದೆಪ್ಪ ರೋಣದರವರು ಭೇಟಿ ಮಾಡಿ ಅಲ್ಲಿನ ನಿವಾಸಿಗಳಿಗೆ ಮಳೆ ಹಚ್ಚಿದ್ದು ಹಾಗೂ ಕಾವೇರಿ ನದಿ ಪ್ರವಾಹ ಅತಿ ಹೆಚ್ಚು ಬರುವುದರಿಂದ ಮುಂಜಾಗ್ರತೆಯಾಗಿ ಸ್ಥಳಾಂತರವಾಗುವಂತೆ ತಿಳಿಸಿದರು ಹಾಗೂ ಇದೇ ರೀತಿ ಮಳೆ ಮುಂದುವರಿದು ಕಾವೇರಿ ನದಿ ನೀರು ಹೆಚ್ಚಾದಲ್ಲಿ ಇಲ್ಲಿನ ಜನರ ಸುರಕ್ಷತೆಗಾಗಿ ಕಾಳಜಿ ಕೇಂದ್ರ ತೆರೆದು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು. ಮಳೆಯಿಂದ ಈಗಾಗಲೇ ತಾಲೂಕಿನ ಕೆಲವು ಗ್ರಾಮಗಳ ವಾಸದ ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ. ಮಳೆಯಿಂದ ಮನೆಗಳಿಗೆ ಹಾನಿ ಉಂಟಾಗಿದ್ದರೇ ಗ್ರಾಮ ಲೆಕ್ಕಿಗರ ಮೂಲಕ ಕಚೇರಿಗೆ ಅರ್ಜಿ ಸಲ್ಲಿಸಬೇಕಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ತಾಲೂಕು ಶಿರಸ್ತೇದಾರರಾದ ಸಿ. ಸ್ವಾಮಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಕುಮಾರಸ್ವಾಮಿ, ರಾಜಸ್ವ ನಿರೀಕ್ಷಕರಾದ ಭಾಸ್ಕರ್, ಗ್ರಾಮ ಆಡಳಿತ ಅಧಿಕಾರಿಗಳಾದ ಧರ್ಮೇಶ್ ಹಾಗೂ ಗ್ರಾಮಸ್ಥರು ಹಾಗೂ ಕಂದಾಯ ಇಲಾಖೆ ಮತ್ತು ಪಂಚಾಯತಿ ಇಲಾಖೆ ಸಿಬ್ಬಂದಿ ಹಾಜರಿದ್ದರು.