ಮಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯಿಂದ ಉಂಟಾಗಿರುವ ಹಾನಿ ಹಾಗೂ ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳ ಅಧ್ಯಯನಕ್ಕಾಗಿ ರಚಿಸಲಾದ ಜೆಡಿಎಸ್‌ ಅಧ್ಯಯನ ತಂಡದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕರು ಎಸ್.ಎಲ್. ಭೋಜೆಗೌಡ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಿಕೋಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಬೆಳಗ್ಗೆ ಜಿಲ್ಲೆಯ ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಯುವ ಘಟಕ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು ಸೇರಿದಂತೆ ಪಕ್ಷದ ಜಿಲ್ಲಾ ಪ್ರಮುಖ ಪದಾಧಿಕಾರಿಗಳೊಂದಿಗೆ ನಿಯೋಗ ಇತ್ತೀಚೆಗೆ ಭೂಕುಸಿತ ಸಂಭವಿಸಿ ಜೀವಹಾನಿ ಉಂಟಾಗಿದ್ದ ನಾಗುರಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು. ಭೂಕುಸಿತದಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳನ್ನು ಭೇಟಿ ಮಾಡಿ ಅವರ ನೋವು ಆಲಿಸಿದ ಎಸ್.ಎಲ್. ಭೋಜೆಗೌಡ ಅವರು ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ಮಾತನಾಡಿದ ಅವರು, ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ, ಪುನರ್ವಸತಿ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು.

ಬಳಿಕ ಅಧ್ಯಯನ ತಂಡ ಸೋಮೇಶ್ವರ ಬಟ್ಟಪಾಡಿ ಪ್ರದೇಶಕ್ಕೆ ಭೇಟಿ ನೀಡಿ ತೀವ್ರ ಕಡಲು ಕೊರೆತದಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ಪರಿಶೀಲಿಸಿತು. ಹಾನಿಯನ್ನು ಸ್ಥಳದಲ್ಲೇ ವೀಕ್ಷಿಸಿದ ತಂಡ ಸ್ಥಳೀಯ ಮೀನುಗಾರರು ಮತ್ತು ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿತು. ವರ್ಷದಿಂದ ವರ್ಷಕ್ಕೆ ಕಡಲುಕೊರೆತ ತೀವ್ರಗೊಳ್ಳುತ್ತಿದ್ದು, ಜನರು ಆತಂಕದಲ್ಲಿ ಜೀವನ ಸಾಗಿಸುತ್ತಿರುವ ಬಗ್ಗೆ ಸ್ಥಳೀಯರಾದ ಸೇವ್ ಬಟ್ಟಪಾಡಿ ಅಧ್ಯಕ್ಷ ಸುಕೇಶ್ ಉಚ್ಚಿಲ್ ವಿವರಿಸಿದರು.

ಸರ್ಕಾರ ಕಡಲು ಕೊರೆತ ತಡೆಗೆ ವೈಜ್ಞಾನಿಕ ಹಾಗೂ ಶಾಶ್ವತ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಭೋಜೇ ಗೌಡ ಒತ್ತಾಯಿಸಿದರು.

ಬಳಿಕ ತಂಡ ಜಿಲ್ಲಾಧಿಕಾರಿ ದರ್ಶನ್ ಅವರನ್ನು ಭೇಟಿ ನೀಡಿ, ನಾಗುರಿ ಭೂಕುಸಿತ ಹಾಗೂ ಸೋಮೇಶ್ವರ ಕಡಲುಕೊರೆತ ಸೇರಿದಂತೆ ಜಿಲ್ಲೆಯ ವಿವಿಧ ಮಳೆ ಹಾನಿ ಪ್ರದೇಶಗಳ ಕುರಿತು ಸಮಗ್ರ ಮನವಿ ಸಲ್ಲಿಸಿ, ವಿವರವಾದ ಚರ್ಚೆ ನಡೆಸಲಾಯಿತು.ಮೀನುಗಾರ ಘಟಕ ರಾಜ್ಯಧ್ಯಕ್ಷ ರತ್ನಕರ್ ಸುವರ್ಣ, ಕಾರ್ಯಾಧ್ಯಕ್ಷ ಇಕ್ಬಾಲ್‌ ಮೂಲ್ಕಿ, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಪುಷ್ಪರಾಜನ್, ಯುವ ಘಟಕ ಉತ್ತರ ಕ್ಷೇತ್ರ ಅಧ್ಯಕ್ಷ ರತೀಶ್ ಕರ್ಕೇರ,


ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಪ್ರಕಾಶ್ ಅಸೈಗೋಳಿ, ಕಾನೂನು ಘಟಕ ಅಧ್ಯಕ್ಷ ಭಾರತಿ ಪುಷ್ಪರಾಜನ್, ಜೆಡಿಎಸ್ ಮುಖಂಡರಾದ ಉಮೇಶ್ ಗೌಡ , ಸುಮಿತ್ ಸುವರ್ಣ, ಯುವ ಮುಖಂಡ ಸುಶಾಂತ್‌, ಜಾವೀದ್, ಸುಮತಿ ಹೆಗ್ಡೆ, ಪ್ರಶಾಂತ್ ಭಟ್ ಕಡಬ, ಫ್ರಾನ್ಸಿಸ್, ನಜೀರ್ ಸಾಮಾಣಿಗೆ ಮತ್ತಿತರರು ಇದ್ದರು.