ಆತ್ಮಭೂಷಣ್‌ ಮಂಗಳೂರು:

ಮುಂಗಾರು ಹಂಗಾಮಿನಲ್ಲಿ ಬೇಸಾಯ ಚುರುಕುಗೊಳ್ಳಬೇಕಿದ್ದರೂ ಮಳೆಯ ತೀವ್ರ ಕೊರತೆಯಿಂದಾಗಿ ಈಗ ದ.ಕ. ಜಿಲ್ಲೆಯಲ್ಲಿ ಭತ್ತದ ಗದ್ದೆಗಳು ಭಣಗುಡುವ ಪರಿಸ್ಥಿತಿ ಎದುರಾಗಿದೆ. ಈ ಬಾರಿ ಶೇ.60ಕ್ಕಿಂತ ಕಡಿಮೆ ಮಳೆಯಾಗಿದ್ದು, ಶೇ.25ರಷ್ಟೂ ಗದ್ದೆ ಉಳುಮೆ ಆಗಿಲ್ಲ. ಹೀಗಾಗಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವ ಹಂತಕ್ಕೆ ತಲುಪಿದೆ.

ಸಾಮಾನ್ಯವಾಗಿ ಜೂನ್‌ ತಿಂಗಳಲ್ಲಿ ಉಳುಮೆ ಶುರುವಾಗಿ ಜುಲೈನಲ್ಲಿ ನಾಟಿ ಕಾರ್ಯ ಆರಂಭವಾಗುತ್ತದೆ. ಆಗಸ್ಟ್‌ ಕೊನೆ, ಸೆಪ್ಟೆಂಬರ್‌ನಲ್ಲಿ ಫಸಲು ಕೊಯ್ಲಿನ ಸಮಯ. ಈ ಬಾರಿ ಇನ್ನೂ ಉಳುಮೆಯೇ ಸರಿಯಾಗಿ ನಡೆಯುತ್ತಿಲ್ಲ. ಧಾರಾಕಾರ ಮಳೆಯ ಕೊರತೆ ವಿಪರೀತ ತಟ್ಟಿದ್ದು, ಇದರಿಂದಾಗಿ ರೈತರು ಬೇಸಾಯ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮೂರು ತಾಲೂಕುಗಳಲ್ಲಿ ಉಳುಮೆ ಗದ್ದೆ ಹೆಚ್ಚು: ದ.ಕ. ಜಿಲ್ಲೆಯ ಬಂಟ್ವಾಳ, ಮಂಗಳೂರು, ಮೂಲ್ಕಿ ಹಾಗೂ ಮೂಡುಬಿದಿರೆ ತಾಲೂಕುಗಳಲ್ಲಿ ಅತೀ ಹೆಚ್ಚು ಉಳುಮೆ ಗದ್ದೆಗಳು ಇವೆ. ಇಲ್ಲಿ ಪ್ರತಿ ವರ್ಷ ಮುಂಗಾರು ಹಂಗಾಮಿಗೆ ಏಣೇಲು ಅಂದರೆ ಪ್ರಥಮ ಬೇಸಾಯ ಮಾಡುತ್ತಾರೆ. ಸಾಮಾನ್ಯವಾಗಿ ರೈತರು ಮಳೆ ನೀರನ್ನೇ ಆಶ್ರಯಿಸಿ ಗದ್ದೆ ಬೇಸಾಯಕ್ಕೆ ಇಳಿಯುತ್ತಾರೆ. ಆದರೆ ಈಗ ಮಳೆ ಕೈಕೊಟ್ಟಿರುವುದರಿಂದ ಮುಂದೆ ಏನು ಎಂಬ ಪ್ರಶ್ನೆ ರೈತರಲ್ಲಿ ಮನೆಮಾಡಿದೆ.

ಮಳೆಯ ತೀವ್ರ ಕೊರತೆ: ಈಗ ಜೂನ್‌ ಬಳಿಕ ಜುಲೈ ತಿಂಗಳ ಪ್ರಥಮ ವಾರ ಕಳೆದಿದೆ. ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಜೂನ್‌ನಲ್ಲಿ ತೀರ ಕಡಿಮೆಯಾಗಿದ್ದ ಮಳೆ ಜುಲೈನಲ್ಲಿ ಒಂದಷ್ಟು ಸುರಿದಿದೆ. ಆದರೆ ಇದು ಭತ್ತದ ಬೇಸಾಯಕ್ಕೆ ಸಾಲುವುದಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ಹೊಲವನ್ನೇ ನಂಬಿ ಬದುಕುವ ರೈತರೂ ಮುಂದಿನ ಜೀವನೋಪಾಯದ ಬಗ್ಗೆ ಚಿಂತಿತರಾಗಿದ್ದಾರೆ. ಬೇಸಾಯಗಾರರ ಪ್ರಕಾರ ಶೇ.60ರಷ್ಟು ಮಳೆ ಬಂದಿಲ್ಲ. ಈವರೆಗೆ ಶೇ.25ರಷ್ಟು ಮಾತ್ರ ಉಳುಮೆ ಆಗಿದ್ದು, ಉಳಿದ ಶೇ.75ರಷ್ಟು ಗದ್ದೆಗಳು ಹಾಗೆಯೇ ಹಡಿಲು ಬೀಳುವ ಪರಿಸ್ಥಿತಿಯಲ್ಲಿ ಇವೆ. ಹೀಗಾದರೆ ಮುಂದೆ ಯಾವುದನ್ನು ನಂಬಿ ಬದುಕಬೇಕು ಎಂದು ಬೇಸಾಯಗಾರರು ಪ್ರಶ್ನಿಸುವಂತಾಗಿದೆ.


ಬೇಸಾಯಗಾರರ ಪೈಕಿ ಸ್ವಂತ ತೆರೆದ ಬಾವಿ, ಕೆರೆ, ಕೊಳವೆ ಬಾವಿ ಇದ್ದವರು ಅದರಿಂದಲೇ ಗದ್ದೆಗೆ ನೀರು ಪೂರೈಸುತ್ತಿದ್ದಾರೆ. ಆದರೆ ಮುಂಗಾರು ಮಳೆ ನೀರಿನಷ್ಟು ಉತ್ತಮ ಬೇರೊಂದಿಲ್ಲ. ಆದರೆ ಮಳೆಯೇ ಇಲ್ಲದಿದ್ದರೆ ಏನು ಮಾಡಲು ಸಾಧ್ಯ ಎನ್ನುತ್ತಾರೆ ರೈತರು.

‘ದ.ಕ. ಬರ ಪೀಡಿತ’ ಘೋಷಣೆ ಸಾಧ್ಯವೇ?: ದ.ಕ. ಜಿಲ್ಲೆಯಲ್ಲಿ ರೈತರ ಪ್ರಕಾರ ಶೇ. 60 ರಷ್ಟು ಮಳೆಯಾಗಿಲ್ಲ. ಹೀಗಾದಲ್ಲಿ ಕೃಷಿ ಇಲಾಖೆ ಮಾನದಂಡ ಪ್ರಕಾರ ಅಂತಹ ಪ್ರದೇಶವನ್ನು ಬರಪೀಡಿತ ಎಂದು ಘೋಷಿಸಬೇಕು. ಈ ಬಗ್ಗೆ ರೈತ ಸಂಘಟನೆ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್‌ ಫರೀದ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಅಧಿಕಾರಿಗಳಿಂದಲೂ ಭರವಸೆ ದೊರೆತಿದೆ. ಬರ ಪೀಡಿತ ಜಿಲ್ಲೆ ಎಂದು ಘೋಷಿಸಿದರೆ, ರೈತರಿಗೆ ಸರ್ಕಾರದಿಂದ ವಿವಿಧ ಸವಲತ್ತುಗಳ ನೆರವು ಲಭಿಸಲು ಸಾಧ್ಯ.

ದ.ಕ. ಮತ್ತು ಉಡುಪಿ ಉಭಯ ಜಿಲ್ಲೆಗಳು ಅಪರೂಪಕ್ಕೆ ಬರಗಾಲ ಎದುರಿಸುತ್ತಿರುವ ಸನ್ನಿವೇಶನ ನಿರ್ಮಾಣವಾಗಿದೆ. ಶೇ.60ಕ್ಕಿಂತ ಕಡಿಮೆ ಮಳೆಯಾದಲ್ಲಿ ಸರ್ಕಾರ ಮಾರ್ಗಸೂಚಿಯಂತೆ ಪರಿಹಾರ ಕ್ರಮ ಕೈಗೊಳ್ಳಬೇಕು. ರೈತರು ಈಗಾಗಲೇ ಪಡೆದಿರುವ ಸಾಲನ್ನು ವಸೂಲಿ ಮಾಡಬಾರದು. ಸಾಲ ಮನ್ನಾಗೆ ಮುಖ್ಯಮಂತ್ರಿಗಳನ್ನು ಆಗ್ರಹಿಸಬೇಕು.

-ಮನೋಹರ ಶೆಟ್ಟಿ, ರಾಜ್ಯ ಕಾರ್ಯದರ್ಶಿ ರೈತ ಸಂಘ-ಹಸಿರು ಸೇನೆ, ಕರ್ನಾಟಕ ಭತ್ತದ ಕೃಷಿಗೆ ಬೇಕಾಗುವ ಟ್ರ್ಯಾಕ್ಟರ್‌, ನಾಟಿ ಯಂತ್ರ, ಕಟ್ಟಿಂಗ್‌ ಮೆಷಿನ್‌ಗೆ ಈ ಬಾರಿ ಬೇಡಿಕೆ ತುಂಬಾ ಕಡಿಮೆಯಾಗಿದೆ. ಶೇ.45ರಷ್ಟು ಗದ್ದೆಗಳಲ್ಲಿ ಮಾತ್ರ ಬೇಸಾಯ ಮಾಡಿದ್ದಾರೆ. ಮಳೆ ನೀರಿನ ಕೊರತೆ ಕಾರಣ ಎಲ್ಲ ಕಡೆಗಳಲ್ಲಿ ಉಳುಮೆ ಸಾಧ್ಯವಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.25ರಷ್ಟು ಮಾತ್ರ ಉಳುಮೆ ಆಗಿದೆ. ಯಂತ್ರೋಪಕರಣಗಳನ್ನು ಸಾಲ ಮಾಡಿ ಖರೀದಿಸಿದ್ದು, ಅವುಗಳ ಕಂತು ಪಾವತಿ ಹೇಗೆ ಎಂಬುದೇ ಅರ್ಥವಾಗುತ್ತಿಲ್ಲ.

-ಪಶುಪತಿ, ಮಾಲೀಕರು, ಮೇತಿಕೇದು ಕೃಷಿ ಯಂತ್ರ ಕೇಂದ್ರ ಬಂಟ್ವಾಳ

ಜೂನ್‌ ತಿಂಗಳಲ್ಲಿ ಮಳೆಯ ಕೊರತೆ ಇದೆ. ಜುಲೈನಲ್ಲಿ ಮಳೆ ಪ್ರಮಾಣ ನೋಡಿಕೊಂಡು ಆಗಸ್ಟ್‌ನಲ್ಲಿ ಬರಪೀಡಿತ ಪ್ರದೇಶಗಳ ಗುರುತಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ. ದ.ಕ. ಜಿಲ್ಲೆಯಲ್ಲಿ ಈ ಬಾರಿ 10 ಸಾವಿರ ಹೆಕ್ಟೇರ್‌ ಭತ್ತದ ಬೇಸಾಯದ ಗುರಿ ಇರಿಸಿಕೊಳ್ಳಲಾಗಿದ್ದು, ಜುಲೈ 10ರ ವರೆಗೆ ಕೇವಲ 987 ಹೆಕ್ಟೇರ್‌ನಲ್ಲಿ ಬೇಸಾಯ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,530 ಹೆಕ್ಟೇರ್‌ನಲ್ಲಿ ಬೇಸಾಯ ಮಾಡಲಾಗಿತ್ತು. ಶೇ.60ರಷ್ಟು ಮಳೆ ಕೊರತೆ ಸೇರಿದಂತೆ ನಾಲ್ಕೈದು ಮಾನದಂಡಗಳ ಮೂಲಕ ಬರಪೀಡಿತ ಪ್ರದೇಶವನ್ನು ಘೋಷಿಸಲಾಗುತ್ತದೆ.

-ಹೊನ್ನಪ್ಪ ಗೌಡ, ಜಂಟಿ ಕೃಷಿ ನಿರ್ದೇಶಕರು ಮಂಗಳೂರು