ಸಾರಾಂಶ
ವಕೀಲರ ಸಂಘದ ವತಿಯಿಂದ ಆರೋಗ್ಯ ತಪಾಸಣೆಯನ್ನು ಆಯೋಜಿಸಲಾಗಿದ್ದು, ವಕೀಲರು ನಿತ್ಯ ಜೀವನದಲ್ಲಿ ಒಂದು ಗಂಟೆ ಕಾಲ ತಮ್ಮ ಆರೋಗ್ಯದ ಕಾಳಜಿಯ ಕಡೆಗೆ ಗಮನಹರಿಸಬೇಕು. ಬೆಳಗಿನ ನಡಿಗೆ, ಯೋಗ, ಧ್ಯಾನದಂತಹ ಆರೋಗ್ಯ ಸಮತೋಲನ ಕಾಪಾಡಿಕೊಳ್ಳುವ ವ್ಯಾಯಾಮಗಳತ್ತ ಗಮನಹರಿಸಬೇಕು.
ಕನ್ನಡಪ್ರಭ ವಾರ್ತೆ ಹೊಸಕೋಟೆ
ವಕೀಲರು ನಿತ್ಯ ಜೀವನದಲ್ಲಿ ತಮ್ಮ ವೃತ್ತಿಯ ಜೊತೆ ಜೊತೆಗೆ ಆರೋಗ್ಯದ ಕಡೆಗೂ ಕಾಳಜಿ ವಹಿಸಬೇಕು ಎಂದು ಹೊಸಕೋಟೆ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ಜಿ. ತಿಳಿಸಿದರು.ತಾಲೂಕು ವಕೀಲರ ಸಂಘದ ವತಿಯಿಂದ ನಗರದ ಕೋರ್ಟ್ ಆವರಣದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಮನುಷ್ಯನಿಗೆ ಆರೋಗ್ಯ ಎನ್ನುವುದು ಅತ್ಯಮೂಲ್ಯವಾಗಿದ್ದು, ನಿತ್ಯ ಜೀವನದ ಕರ್ತವ್ಯದ ನಡುವೆ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ವಹಿಸುತ್ತಿದ್ದಾನೆ. ಪ್ರಮುಖವಾಗಿ ವಕೀಲರು ಸಹ ನಿತ್ಯ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರ ಪ್ರಕರಣಗಳನ್ನು ಬಗೆಹರಿಸುವ ವಿಚಾರದಲ್ಲಿಯೇ ಹೆಚ್ಚಿನ ಆಸಕ್ತಿ ವಹಿಸಿ, ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ವಕೀಲರು ಕೂಡ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯಾಧಿಕಾರಿಗಳು ನೀಡುವ ಆರೋಗ್ಯದ ಸಲಹೆ ಸೂಚನೆಗಳನ್ನು ಸಮರ್ಪಕವಾಗಿ ಪಾಲಿಸಬೇಕು ಎಂದು ತಿಳಿಸಿದರು.ತಾಲೂಕು ವಕೀಲರ ಸಂಘದ ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ವಕೀಲರ ಸಂಘದ ವತಿಯಿಂದ ಆರೋಗ್ಯ ತಪಾಸಣೆಯನ್ನು ಆಯೋಜಿಸಲಾಗಿದ್ದು, ವಕೀಲರು ನಿತ್ಯ ಜೀವನದಲ್ಲಿ ಒಂದು ಗಂಟೆ ಕಾಲ ತಮ್ಮ ಆರೋಗ್ಯದ ಕಾಳಜಿಯ ಕಡೆಗೆ ಗಮನಹರಿಸಬೇಕು. ಬೆಳಗಿನ ನಡಿಗೆ, ಯೋಗ, ಧ್ಯಾನದಂತಹ ಆರೋಗ್ಯ ಸಮತೋಲನ ಕಾಪಾಡಿಕೊಳ್ಳುವ ವ್ಯಾಯಾಮಗಳತ್ತ ಗಮನಹರಿಸಬೇಕು ಎಂದರು.
ಹೊಸಕೋಟೆ ಜೆಎಂಎಫ್ ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಸತೀಶ್ ಕುಮಾರ್, ಅಪರ ಸಿವಿಲ್ ನ್ಯಾಯಾಧೀಶೆ ಚೈತ್ರ ವಿ.ಕುಲಕರ್ಣಿ, ವಕೀಲರ ಸಂಘದ ಉಪಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ನವೀನ್ ಕುಮಾರ್, ಜಂಟಿ ಕಾರ್ಯದರ್ಶಿ ಮುನಿರಾಜು, ಖಜಾಂಚಿ ರವಿಕುಮಾರ್ ಸೇರಿ ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.