ಹವ್ಯಾಸಿ ಕಲಾವಿದರ ಕಾರ್ಯ ಶ್ಲಾಘನೀಯ

| Published : Dec 09 2024, 12:46 AM IST

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ವೃತ್ತಿ ರಂಗಭೂಮಿ ತಂಡಗಳು ಹೆಚ್ವಿನ ತೊಂದರೆ

ಮುಂಡರಗಿ: ಕಳೆದ 34 ವರ್ಷಗಳಿಂದ ಮುಂಡರಗಿ ಹವ್ಯಾಸಿ ಕಲಾ ತಂಡವು ಪಟ್ಟಣದ ಸರ್ಕಾರಿ ಶಾಲೆಗಳ ಹೆಚ್ಚುವರಿ ಶಾಲಾ ಕೊಠಡಿ,ಕಂಪೌಂಡ್ ನಿರ್ಮಾಣ ಹಾಗೂ ನಾಟಕ ಕಲಾವಿದರಿಗೆ ಧನಸಹಾಯ ಮಾಡುವುದು ಸೇರಿದಂತೆ ರಕ್ತರಾತ್ರಿ ನಾಟಕ ಅಭಿನಯಿಸುತ್ತಿರುವ ಕಲಾವಿದರ ಕಾರ್ಯ ಶ್ಲಾಘನೀಯ ಎಂದು ಕಾಂಗ್ರೆಸ್ ಯುವ ಮುಖಂಡ ಮಿಥುನಗೌಡ ಪಾಟೀಲ ಹೇಳಿದರು.

ಅವರು ಶನಿವಾರ ಸಂಜೆ ಪಟ್ಟಣದಲ್ಲಿ ಚಿತ್ತರಗಿ ಕುಮಾರ ವಿಜಯ ನಾಟ್ಯ ಸಂಘವು ಇತ್ತೀಚೆಗೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಹಾನಿ ಅನುಭವಿಸಿದ ಹಿನ್ನೆಲೆಯಲ್ಲಿ ಸಂಘದ ನೆರವಿಗಾಗಿ ಸ್ಥಳೀಯ ಹವ್ಯಾಸಿ ಕಲಾವೃಂದದ ಕಲಾವಿದರು ಅಭಿನಯಿಸಿದ ರಕ್ತರಾತ್ರಿ ನಾಟಕ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ವೃತ್ತಿ ರಂಗಭೂಮಿ ತಂಡಗಳು ಹೆಚ್ವಿನ ತೊಂದರೆಯಲ್ಲಿದ್ದು, ಆರ್ಥಿಕವಾಗಿ ನಷ್ಟ ಅನುಭವಿಸುತ್ತಿವೆ. ಬನಶಂಕರಿ, ಮೈಲಾರ, ಕೊಪ್ಪಳ, ಕುಕನೂರು, ಗೊಡಚಿ, ಶಿರಸಿ ಜಾತ್ರೆ ಸೇರಿದಂತೆ ವಿವಿಧೆಡೆ ತೆರಳಿ ನಾಟಕ ಪ್ರದರ್ಶಿಸುತ್ತಾ ಏಳುಬೀಳುಗಳ ಮಧ್ಯ ರಂಗಭೂಮಿಯ ಕಲೆ ಜೀವಂತವಾಗಿರಿಸಿಕೊಂಡು ಬಂದಿದ್ದು, ಅಲ್ಲಲ್ಲಿ ಇಂತಹ ಕಂಪನಿಗಳಿಗೆ ಹಾನಿಯಾದ ಇಲ್ಲಿನ ಹವ್ಯಾಸಿ ತಂಡ ಅವರಿಗೆ ನಾಟಕ ಪ್ರದರ್ಶನ ಮಾಡಿ ನೆರವಿನ ಹಸ್ತ ಚಾಚುತ್ತಾ ಬಂದಿದ್ದಾರೆ ಎಂದರು.

ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಈ ಕಲಾತಂಡ ವಿಶಿಷ್ಟವಾಗಿದೆ, ಇದರಲ್ಲಿ ತಾಲೂಕು ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ವಿಶ್ರಾಂತ ಅಭಿಯಂತರರು, ವಿಶ್ರಾಂತ ಪ್ರಾಧ್ಯಾಪಕರು, ಹಾಲಿ ಶಿಕ್ಷಕರು ಎಲ್ಲರೂ ಸೇರಿ ಅಭಿನಯಿಸುತ್ತಿರುವುದು ವಿಶೇಷ. ನಾಟಕ ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಯುವಕರಿಗೆ ಈ ನಾಟಕ ಕಲೆ ಪ್ರೇರಣೆಯಾಗಲಿ ಎಂದರು.

ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಬಿಜೆಪಿ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಮಾತನಾಡಿ, ನಾಟಕ‌ ಎನ್ನುವುದು ಜೀವಂತ ಕಲೆ. ಇದು ಇರುವವರನ್ನು ಇರುವ ಹಾಗೆ ತೋರಿಸಿ, ನಮ್ಮ ಸಂಸ್ಕೃತಿ, ಆಚಾರ, ವಿಚಾರ ತಿಳಿಸುತ್ತದೆ. ಇಂತಹ ಜೀವಂತ ಕಲೆ ಉಳಿಸಿ ಬೆಳೆಸುವುದು ಅತ್ಯಂತ ಅವಶ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರವೀಂದ್ರ ಉಪ್ಪಿನಬೆಟಗೇರಿ, ಡಿ.ಡಿ. ಮೋರನಾಳ, ಎ.ಕೆ. ಬೆಲ್ಲದ, ಎಸ್.ಡಿ. ಮಕಾಂದಾರ, ರುದ್ರಗೌಡ ಪಾಟೀಲ, ಮದರಸಾಬ್ ಸಿಂಗನಮಲ್ಲಿ, ಲೋಕೇಶ ಟೇಕಲ್, ಗುರುನಾಥ ದಾನಪ್ಪನವರ, ಮಂಜುನಾಥ ಮುಂಡವಾಡ, ಶಿವಪ್ರಕಾಶ ಮಹಾಜನಶೆಟ್ಟರ್‌, ನಿಂಗಪ್ಪ ಹೊನ್ನಾಯಕನಹಳ್ಳಿ, ಮೈಲಾರಪ್ಪ ಉದಂಡಿ, ಬಿ.ಎಸ್. ಮೇಟಿ, ವೀರನಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೊಟ್ರೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಂಜುನಾಥ ಇಟಗಿ ನಿರೂಪಿಸಿ, ಸಂಘದ ಮಾಲೀಕ ಮಂಜುನಾಥ ಜಾಲಿಹಾಳ ವಂದಿಸಿದರು.