ಡಿಸಿಎಂಸಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ನೆರವು । ಚುನಾವಣಾ ಸಾಕ್ಷರತಾ ಕ್ಲಬ್ ಉದ್ಘಾಟನೆ

ಕನ್ನಡಪ್ರಭ ವಾರ್ತೆ ,ನರಸಿಂಹರಾಜಪುರ

ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಟಿ. ರಘುನಾಥ್‌ಗೌಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಬುಧವಾರ ಪಟ್ಟಣದ ಡಿಸಿಎಂಸಿಯ ಸಿಬಿಎಸ್‌ಸಿ ಪ್ರೌಢ ಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಡಿಸಿಎಂಸಿ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ಕಾನೂನು ಅರಿವು, ನೆರವು ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ ಮಕ್ಕಳು ಚುನಾವಣೆ, ಮತದಾನದ ಬಗ್ಗೆ ಅರಿವಿರಬೇಕು. 18 ವರ್ಷ ತುಂಬಿದವರೆಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು. ಮತದಾನ ಮಾಡುವುದು ನಿಮ್ಮೆಲ್ಲರ ಆದ್ಯ ಕರ್ತವ್ಯ. ಶಿಕ್ಷಣದ ಜೊತೆಯಲ್ಲಿ ಸಮಾಜದ ಆಗು ಹೋಗು ಗಳ ಬಗ್ಗೆ ಅರಿವಿರಬೇಕು. ನನಗೆ ಕಾನೂನಿನ ಅರಿವಿಲ್ಲ ಎಂದು ತಪ್ಪು ಮಾಡುವುದು ಸರಿಯಲ್ಲ ಎಂದರು. ಪ್ರಾಂಶುಪಾಲೆ ಪದ್ಮ ರಮೇಶ್ ಇವಿಎಂ ಯಂತ್ರ ಬಳಸಿ ಮತದಾನ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿ, ಮತದಾನ ನಮಗೆಲ್ಲರಿಗೂ ದೊರೆತ ಒಂದು ಪುಣ್ಯದ ಹಕ್ಕು. ಈ ಹಕ್ಕು ಚಲಾಯಿಸುವುದು ನಿಮ್ಮೆಲ್ಲರ ಕರ್ತವ್ಯ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಕೆ.ಜಯಪ್ರಕಾಶ್ ಮಾದರಿ ನೀತಿ ಸಂಹಿತೆ ಬಗ್ಗೆ ಮಾಹಿತಿ ನೀಡಿದರು. ವಕೀಲ ಕಾರ್ತಿಕೇಯನ್ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಪೊಲೀಸ್ ಇಲಾಖೆ ನಾಗರಾಜ್ ಮೋಟಾರ್ ವಾಹನದ ಕಾಯ್ದೆ ಬಗ್ಗೆ ಮಾತನಾಡಿದರು. ಶಾಲೆ ಹೆಡ್ ಗರ್ಲ್ ಆಗಿ ಅಕ್ಷ ಬೆನ್ನಿ ಮತ್ತು ಹೆಡ್ ಬಾಯ್ ಆಗಿ ಕು.ಸಾಯಿ ವಿದ್ವಾನ್ ಚುನಾವಣೆಯಲ್ಲಿ ಆಯ್ಕೆ ಯಾಗಿದರು. ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ವಿತರಿಸಲಾಯಿತು. ಶಿಕ್ಷಕ ಗಿರೀಶ್ ಪ್ರಮಾಣ ವಚನ ಬೋಧಿಸಿದರು. ಪ್ರಶಾಂತ್ ಸ್ವಾಗತಿಸಿದರು. ದಸ್ತಗಿರಿ ಕಾರ್ಯಕ್ರಮ ನಿರೂಪಿಸಿದರು. ಲಿಂಷಾ ವಂದಿಸಿದರು.