ಸಣ್ಣ ಪುಟ್ಟ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಬಾರದು ಎಂಬ ಕಾರಣಕ್ಕೆ ಟೆಂಡರ್‌ನಲ್ಲಿಲ್ಲದ ನಿಯಮಗಳನ್ನು ಅಧಿಕಾರಿಗಳ ಮೂಲಕ ಸೇರಿಸುತ್ತಿದ್ದಾರೆ. ಕಡಿಮೆ ಮೊತ್ತಕ್ಕೆ ಟೆಂಡರ್ ಬಿಡ್ ಮಾಡಿರುವವರನ್ನು ಹೊರತುಪಡಿಸಿ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದವರಿಗೆ ಕಾಮಗಾರಿ ನೀಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ₹೫ ರಿಂದ ₹೬ ಕೋಟಿಯಷ್ಟು ನಷ್ಟವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಬಾವುಟ ಕಟ್ಟಿ, ಶಾಸಕರ ಪರವಾಗಿ ಹಗಲು-ರಾತ್ರಿ ಎನ್ನದೆ ಪ್ರಚಾರ ನಡೆಸಿದವರಿಗೆ ಕಾಮಗಾರಿಗಳನ್ನು ಕೊಡದೆ ತಮ್ಮ ಸಹೋದರ, ತಮ್ಮ ಆಪ್ತರಿಗೆ ಕಾಮಗಾರಿಗಳನ್ನು ನೀಡುತ್ತಿರುವುದಾಗಿ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವಷ್ಟು ಪ್ರಬುದ್ಧತೆ ಶಾಸಕ ರವಿಕುಮಾರ್ ಅವರಿಗಿಲ್ಲ. ಕುಮಾರಸ್ವಾಮಿ ರಾಜಕೀಯ ಅನುಭವದಷ್ಟು ವಯಸ್ಸಾಗಿಲ್ಲ. ದೊಡ್ಡವರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಲಿ ಎಂದು ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರು ಟೀಕಿಸಿದರು.ಬಿಡದಿ ಟೌನ್‌ಶಿಪ್ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡುವೆ ಪರ- ವಿರೋಧ ಚರ್ಚೆ ನಡೆಯುತ್ತಿದೆ. ಇಬ್ಬರೂ ರೈತರ ವಿಚಾರವಾಗಿ ಚರ್ಚಿಸಿ ನಿರ್ಧಾರ ಮಾಡುತ್ತಾರೆ. ಇದರ ನಡುವೆ ಶಾಸಕ ರವಿಕುಮಾರ್ ಅವರು ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಮೆಚ್ಚಿಸಿಕೊಳ್ಳಲು ಕುಮಾರಸ್ವಾಮಿ ಅವರನ್ನು ಸೈಕೋ ಎಂದು ವೈಯಕ್ತಿಕವಾಗಿ ನಿಂದಿಸಿರುವುದು ಶೋಭೆ ತರುವುದಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂಷಿಸಿದರು.
ರಾಜಕೀಯವಾಗಿ ವಿರೋಧ- ಟೀಕೆಗಳನ್ನು ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕುಮಾರಸ್ವಾಮಿ ಅವರನ್ನು ವೈಯಕ್ತಿಕ ನಿಂದನೆ ಮಾಡುವಷ್ಟು ಶಾಸಕರು ದೊಡ್ಡವರಲ್ಲ. ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಅವರಿಗೆ ಆಡಳಿತಜ್ಞಾನವಿದೆ. ಸರಿ- ತಪ್ಪುಗಳನ್ನು ವಿಮರ್ಶೆ ಮಾಡುವ ಸಾಮರ್ಥ್ಯವಿದೆ. ಇದೇ ಮೊದಲ ಬಾರಿಗೆ ರವಿಕುಮಾರ್ ಶಾಸಕರಾಗಿದ್ದು, ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ಟೀಕಿಸಿದರೆ ದೊಡ್ಡ ನಾಯಕನಾಗಿ ಬೆಳೆಯಬಹುದು ಎಂದುಕೊಂಡಿದ್ದರೆ ಅದು ಕೇವಲ ಭ್ರಮೆ. ಶಾಸಕರಾಗಿ ಕೆಲಸ ಮಾಡಿ ಡಿ.ಕೆ.ಶಿವಕುಮಾರ್ ಅವರನ್ನು ಮೆಚ್ಚಿಸಿ. ಕುಮಾರಸ್ವಾಮಿ ಅವರನ್ನು ಬೈದು ಡಿ.ಕೆ.ಶಿವಕುಮಾರ್ ಬಳಿ ಶಹಬ್ಬಾಸ್‌ಗಿರಿ ಪಡೆಯಬಹುದೆಂಬ ಚಪಲ ಬಹುಶಃ ಶಾಸಕರಿಗಿರಬಹುದು ಎಂದು ಕುಟುಕಿದರು.ನಾನು ಯಾವುದೇ ತೊಂದರೆ ಕೊಡುತ್ತಿಲ್ಲ:
ನಾನು ಶಾಸಕರಿಗೆ ಯಾವುದೇ ರೀತಿಯಲ್ಲೂ ತೊಂದರೆ ಕೊಡುತ್ತಿಲ್ಲ. ಇನ್ನೂ ಅವರೇ ನನಗೆ ತೊಂದರೆ ಕೊಡುತ್ತಿದ್ದಾರೆ. ಎಂ.ಶ್ರೀನಿವಾಸ್ ಶಾಸಕರಾಗಿದ್ದ ಸಮಯದಲ್ಲಿ ಕೀಲಾರದಿಂದ ಸೊಳ್ಳೇಪುರದ ಮೂಲಕ ಕಚ್ಚೀಗೆರೆ, ಹನಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ₹೧೧ ಕೋಟಿಗೆ ನನಗೆ ಟೆಂಡರ್ ಆಗಿತ್ತು. ರವಿಕುಮಾರ್ ಶಾಸಕರಾದ ಬಳಿಕ ಅದನ್ನು ರದ್ದುಗೊಳಿಸಿ ಅದನ್ನು ಮೂರು ಭಾಗ ಮಾಡಿದರು. ಇನ್ನು ಜೆಡಿಎಸ್ ಪಕ್ಷದವರು ಟೆಂಡರ್‌ನಲ್ಲಿ ಭಾಗವಹಿಸಿದ್ದರೆ ಅದನ್ನು ೬ ರಿಂದ ೮ ತಿಂಗಳಾದರೂ ತೆರೆಯುವುದೇ ಇಲ್ಲ. ವಿನಾಕಾರಣ ವಿಳಂಬ ಮಾಡಿ ಜೆಡಿಎಸ್‌ನವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಟೀಕಿಸಿದರು.ಕಾಣಿಕೆ ಕೊಟ್ಟರೂ ಪೂಜೆಗೆ ಬರುತ್ತಿಲ್ಲ:
ಶಾಸಕರ ಆಪ್ತರು ಟೆಂಡರ್‌ನಲ್ಲಿ ಭಾಗವಹಿಸಿದ್ದರೆ ಎರಡೇ ದಿನಕ್ಕೆ ಅವರ ಟೆಂಡರ್ ಓಪನ್ ಆಗುತ್ತದೆ. ನಾನು ಕಳೆದ ಮೂರು ವರ್ಷದಲ್ಲಿ ₹೭ ಕೋಟಿಯಷ್ಟು ಕೆಲಸವನ್ನು ಮಾತ್ರ ಮಾಡಿದ್ದೇನೆ. ಡಣಾಯಕನಪುರ ರಸ್ತೆಗೆ ವರ್ಕ್ ಆರ್ಡರ್ ಆಗಿ ಆರು ತಿಂಗಳಾಗಿತ್ತು. ಈಗ ಅದಕ್ಕೆ ಚಾಲನೆ ಕೊಟ್ಟಿದ್ದಾರೆ. ಶಾಸಕರಿಗೆ ತಲುಪಿಸಬೇಕಾದ ಕಾಣಿಕೆಯನ್ನು ಅವರ ಬೆಂಬಲಿಗರ ಮೂಲಕ ತಲುಪಿಸಿದ್ದರೂ ಕೆಲವೊಂದಕ್ಕೆ ಇದುವರೆಗೂ ಪೂಜೆಯನ್ನೇ ಮಾಡಿಲ್ಲ ಎಂದು ದೂಷಿಸಿದರು.ಸಣ್ಣ ಪುಟ್ಟ ಗುತ್ತಿಗೆದಾರರಿಗೆ ಸಿಗದ ಕೆಲಸ:
ಸಣ್ಣ ಪುಟ್ಟ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಬಾರದು ಎಂಬ ಕಾರಣಕ್ಕೆ ಟೆಂಡರ್‌ನಲ್ಲಿಲ್ಲದ ನಿಯಮಗಳನ್ನು ಅಧಿಕಾರಿಗಳ ಮೂಲಕ ಸೇರಿಸುತ್ತಿದ್ದಾರೆ. ಕಡಿಮೆ ಮೊತ್ತಕ್ಕೆ ಟೆಂಡರ್ ಬಿಡ್ ಮಾಡಿರುವವರನ್ನು ಹೊರತುಪಡಿಸಿ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದವರಿಗೆ ಕಾಮಗಾರಿ ನೀಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ₹೫ ರಿಂದ ₹೬ ಕೋಟಿಯಷ್ಟು ನಷ್ಟವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಬಾವುಟ ಕಟ್ಟಿ, ಶಾಸಕರ ಪರವಾಗಿ ಹಗಲು-ರಾತ್ರಿ ಎನ್ನದೆ ಪ್ರಚಾರ ನಡೆಸಿದವರಿಗೆ ಕಾಮಗಾರಿಗಳನ್ನು ಕೊಡದೆ ತಮ್ಮ ಸಹೋದರ, ತಮ್ಮ ಆಪ್ತರಿಗೆ ಕಾಮಗಾರಿಗಳನ್ನು ನೀಡುತ್ತಿರುವುದಾಗಿ ಆರೋಪಿಸಿದರು.ನಾನು ಮೂರು ವರ್ಷಗಳ ಕಾಲ ಅಭಿವೃದ್ಧಿ ಕೆಲಸ ಮಾಡಲಿ ಎನ್ನುವುದಕ್ಕೋಸ್ಕರ ಸುಮ್ಮನಿದ್ದೆ. ಮೊದಲಿನಿಂದಲೂ ನನಗೆ ಟೆಂಡರ್ ಕೆಲಸ ಕೊಟ್ಟಿದ್ದೇನೆ. ಅವರೇ ಸಮಯಕ್ಕೆ ಮಾಡುತ್ತಿಲ್ಲ. ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಟೀಕಿಸುತ್ತಿದ್ದರು. ನನಗೆ ಟೆಂಡರ್ ಕೊಡುವುದಕ್ಕೆ ಶಾಸಕರು ಯಾರು. ಬಿಡ್‌ನಲ್ಲಿ ಭಾಗವಹಿಸುತ್ತೇನೆ. ಕಡಿಮೆ ಬಿಡ್ ಮಾಡಿದರೆ ಸಿಗುತ್ತದೆ. ಇಲ್ಲವಾದರೆ ಇಲ್ಲ. ನಾನು ಯಾರಿಗೂ ತೊಂದರೆ ಕೊಡುವ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಾತನೂರು ಜಯರಾಂ, ಮಹೇಶ ಇತರರಿದ್ದರು.