ಚಿಕ್ಕನಾಯಕನಹಳ್ಳಿ ತಾಲೂಕು ಬೋರನಕಣಿವೆ ಸಾಯಿ ಮಂದಿರಕ್ಕೆ ಭೇಟಿ

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಈ ಜಗತ್ತಿನಲ್ಲಿ ಶಿವನೇ ಆದಿ, ಶಿವನೇ ಅಂತ್ಯ. ಯಾರು ಆ ಪರಶಿವನಿಗೆ ಸಂಪೂರ್ಣ ಶರಣಾಗುತ್ತಾರೋ, ಅವರು ಜೀವನದಲ್ಲಿ ಯಾವುದಕ್ಕೂ ಹೆದರಬೇಕಾಗಿಲ್ಲ. ಮಹಾಭಾರತ ಯುದ್ಧದಲ್ಲಿ ಅರ್ಜುನನನ್ನು ರಥದಲ್ಲಿ ಕೂರಿಸಿ ಕೃಷ್ಣ ಹೇಗೆ ಗೆಲ್ಲಿಸಿದನೋ ಹಾಗೆ ಭಗವಂತ ನಮ್ಮನ್ನು ಜೀವನದ ಯುದ್ಧದಲ್ಲಿ ಗೆಲ್ಲಿಸುತ್ತಾನೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ನಟ ಜಗ್ಗೇಶ್‌ ನುಡಿದರು.

ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಬೋರನಕಣಿವೆಯ ಸಾಯಿ ಮಂದಿರಕ್ಕೆ ಗುರುವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಅವರು, ಭಕ್ತಿ ಎಂಬುದು ಬಹಳ ಅದ್ಭುತ. ಎಲ್ಲಿ ಭಕ್ತಿ ಇರುತ್ತದೆಯೋ, ಅಲ್ಲಿ ಭಯ ಮತ್ತು ಶ್ರದ್ಧೆ ಮೂಡುತ್ತದೆ. ಶ್ರದ್ಧೆ ಬಂದಾಗ ಗುರಿ ಕಾಣಿಸುತ್ತದೆ. ನಾವು ಅಹಂಕಾರ ತೊರೆದು ಎಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಮೇಲ್ಗಡೆ ಎಲ್ಲಾ ಪೂಜೆ ಮಾಡಿ, ಒಳಗಡೆ ಕೆಟ್ಟಆಲೋಚನೆಗಳನ್ನು ಇಟ್ಟುಕೊಂಡರೆ ನಮ್ಮನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ. ಯಾರೋ ಬಂದು ನಮ್ಮನ್ನು ಹಾಳು ಮಾಡಬೇಕಾಗಿಲ್ಲ. ಅದೇ ನಾವು ಒಳ-ಹೊರಗೂ ಶುದ್ಧರಾಗಿದ್ದರೆ ಕೃಷ್ಣ ಅರ್ಜುನನಿಗೆ ಸಾರಥಿಯಾಗಿ ಯುದ್ಧ ಗೆಲ್ಲಿಸಿದಂತೆ ಭಗವಂತ ನಮ್ಮ ಬೆನ್ನಿಗೆ ನಿಂತು ಗೆಲ್ಲಿಸುತ್ತಾನೆ ಎಂದು ವಿವರಿಸಿದರು.


ನಾವೆಲ್ಲಾ ಆಧುನಿಕತೆಗೆ ಮರುಳಾಗಿದ್ದೇವೆ. 24 ಗಂಟೆಯೂ ಮೊಬೈಲ್‌ ಎಂಬ ಕಾಯಿಲೆಗೆ ಸಿಲುಕಿಕೊಂಡಿದ್ದೇವೆ. ಅದರಲ್ಲಿ ಬರುವುದೇ ನಿಜವಾದ ಜಗತ್ತು ಎಂದು ಭ್ರಮಿಸುತ್ತಿದ್ದೇವೆ. ಆದರೆ ಅದು ಸತ್ಯವಲ್ಲ ಎಂದು ಎಚ್ಚರಿಸಿದರು.

ನಾನು ಚಿತ್ರರಂಗಕ್ಕೆ ಪ್ರವೇಶಿಸಲು ಹೋದಾಗ ಎದುರಿಸಿದ ಅವಮಾನ ಅಷ್ಟಿಷ್ಟಲ್ಲ. ನಿರ್ದೇಶಕರೊಬ್ಬರು ನನ್ನನ್ನು ನೋಡಿ ಯಾರೋ ಇವನು ಚಪ್ಪರ್‌ ತರಹ ಇದ್ದಾನೆ, ಆಚೆ ಕಳುಹಿಸಿ ಎಂದು ಅಪಮಾನಿಸಿ ಕಳುಹಿಸಿದ್ದರು. ಅಂದು ಕಣ್ಣೀರು ಹಾಕುತ್ತಾ ರಸ್ತೆಯಲ್ಲಿ ನಡೆದು ಬರುವಾಗ ಜ್ಯೋತಿಷಿ ಮೋಯಿ ತೇ ರಾವ್‌ ಅವರ ಬೋರ್ಡ್‌ ನೋಡಿ ಒಳಗೆ ಹೋದೆ. ಅವರು ನನ್ನ ಮುಖ ನೋಡಿ, ನೀನು ಇಷ್ಟಪಟ್ಟಹುಡುಗಿ ಮತ್ತು ವೃತ್ತಿ ಎರಡೂ ನಿನಗೆ ಸಿಗುತ್ತದೆ. ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳು ನಿನಗಾಗಿ ಕಾಯುತ್ತಿದ್ದಾರೆ, ಹೋಗು ಎಂದು ಕಳುಹಿಸಿಕೊಟ್ಟರು. ಅದರಂತೆ ಮಂತ್ರಾಲಯದಲ್ಲಿ ಸಂಕಲ್ಪ ಸೇವೆ ಮಾಡಿದಾಗ ರಾಯರು ಸ್ವತಃ ಪವಾಡದ ಮೂಲಕ ತಮಗೆ ಒಲಿದಿದ್ದನ್ನು ಜಗ್ಗೇಶ್‌ ಭಾವುಕರಾಗಿ ಸ್ಮರಿಸಿದರು.