ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಜಯೋತ್ಸವ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ವಿಧಾನಪರಿಷತ್ ಸಭಾಪತಿ ಎಂ.ಕೆ.ಪ್ರಾಣೇಶ್ ಅವರ ಪರಿಷತ್ ಸದಸ್ಯತ್ವ ರದ್ದುಪಡಿಸಿ ಅಂದು ಕಾಂಗ್ರೆಸ್ ನಿಂದ ಸ್ಪರ್ಧಿಸಿ ಪರಾಜಿತರಾಗಿದ್ದ ಗಾಯತ್ರಿಶಾಂತೇಗೌಡ ಪರ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಪ್ರಜಾಪ್ರಭುತ್ವದ ಗೆಲುವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದರು.ತಾಲೂಕು ಕಾಂಗ್ರೆಸ್ ಘಟಕದಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಮಾತನಾಡಿ ವಿಧಾನಪರಿಷತ್ ಚುನಾವಣೆ ಮತ ಎಣಿಕೆ ನಡೆದಾಗ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿ ವಾಮ ಮಾರ್ಗದ ಮೂಲಕ ಗೆಲುವು ಸಾಧಿಸಿ ಗಾಯತ್ರಿ ಶಾಂತೇಗೌಡರಿಗೆ ಅಧಿಕಾರ ತಪ್ಪಿಸುವ ಕೆಲಸ ಮಾಡಿತ್ತು. ಎರಡು ವರ್ಷದ ಹಿಂದೆಯೇ ಹೈಕೋರ್ಟ್ ನಲ್ಲಿ ಮರು ಮತ ಎಣಿಕೆಗೆ ತೀರ್ಪು ಬಂದಿತ್ತು. ಇದನ್ನು ಪ್ರಶ್ನಿಸಿ ಪ್ರಾಣೇಶ್ ಅವರು ಸುಪ್ರೀಂಕೋರ್ಟ್ ಗೆ ಹೋಗಿದ್ದರು. ಮರು ಎಣಿಕೆ ನಡೆದು ತೀರ್ಪು ಕಾಯ್ದಿರಿಸಿತ್ತು. 1ವರ್ಷ 6 ತಿಂಗಳ ನಂತರ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ . ಗಾಯತ್ರಿ ಶಾಂತೇಗೌಡ ಅವರ ಪರ ನೀಡಿರುವ ತೀರ್ಪು ಐತಿಹಾಸಿಕ ತೀರ್ಪಾಗಿದ್ದು ನಾಮನಿರ್ದೇಶನ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂಬ ಸಂದೇಶ ಇಡೀ ದೇಶಕ್ಕೆ ನೀಡಿದಂತಾಗಿದೆ. ಗಾಯತ್ರಿ ಶಾಂತೇ ಗೌಡರು ಕಾಂಗ್ರೆಸ್ ಕಾರ್ಯಕರ್ತರ ಧ್ವನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ ಎಂದರು. ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ ಬಿಜೆಪಿಯವರು ವಾಮಮಾರ್ಗದಿಂದ ಚುನಾವಣೆ ಗೆಲ್ಲುತ್ತಾರೆ ಎಂಬುದಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಾಣೇಶ್ ಅವರ ವಿರುದ್ಧ ಬಂದಿರುವ ತೀರ್ಪು ಸಾಕ್ಷಿ ಎಂದರು.

ಪಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿ ಸುಪ್ರೀಂಕೋರ್ಟ್ ನಲ್ಲಿ ಗಾಯತ್ರಿ ಶಾಂತೇಗೌಡ ಪರ ಬಂದಿರುವ ತೀರ್ಪು ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಕ್ಷಣ. ಪ್ರಜಾಪ್ರಭುತ್ವ ಸಂವಿಧಾನಕ್ಕೆ ದೊರೆತ ಗೆಲುವಾಗಿದೆ ಎಂದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಎಂ.ಮನು,ಜಿಲ್ಲಾಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀಜಿತ್ ಗೌಡ ಮಾತನಾಡಿದರು. ವಿಜಯೋತ್ಸವದಲ್ಲಿ ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್, ಮುಖಂಡರಾದ ಸುನೀಲ್ ಕುಮಾರ್, ಸಾಜು, ಬೆನ್ನಿ, ಎನ್.ಪಿ.ರಮೇಶ್, ಎನ್.ಪಿ. ರವಿ, ಕೆ.ಎಂ.ಸುಂದರೇಶ್, ಉಪೇಂದ್ರ, ಎಂ.ಆರ್. ರವಿಶಂಕರ್, ಜುಬೇದಾ, ಸೈಯದ್ ವಸೀಂ, ಮಂಜಪ್ಪಗೌಡ, ಅನಿದ್, ರತನ್ ಗೌಡ, ಜಾನ್ ಪೌಲ್, ಮಂಜಪ್ಪಗೌಡ, ಮಾಳೂರು ದಿಣ್ಣೆ ರಮೇಶ್, ವಿಜಯ್, ನಿಥಿನ್, ರಮೇಶ್, ಅಜಂತ ಮತ್ತಿತರರಿದ್ದರು.