- ಹರಿಹರದಲ್ಲಿ 30 ದಿನಗಳ ಸಂಗೀತದೊಂದಿಗೆ ಬೇಸಿಗೆ ಶಿಬಿರ ಸಮಾರೋಪ
- - -ಕನ್ನಡಪ್ರಭ ವಾರ್ತೆ ಹರಿಹರ
ಸಂಗೀತವೆಂದರೆ ಅಷ್ಟು ಸುಲಭದ ಮಾತಲ್ಲ. ಸ್ವರ, ರಾಗ, ಲಯ, ತಾಳಗಳ ಜೋಡಣೆಯಿಂದ ಹಾಡುವ ಅತ್ಯಂತ ಮಹತ್ವದ ಕಲೆಯಾಗಿದ್ದು, ಅದು ಕೇವಲ ಕಲಿಕೆಯಿಂದ ಬರುವಂಥದ್ದಲ್ಲ. ಸಾಧನೆಯ ಸಿದ್ದಿಯಿಂದ ಮಾತ್ರ ಸಂಪಾದನೆ ಆಗುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.ನಗರದ ಶ್ರೀ ಜನನಿ ಜನ್ಮದಾತ ಸಾಂಸ್ಕೃತಿಕ ಕಲಾ ಟ್ರಸ್ಟ್, ಪುಟ್ಟರಾಜ ಗವಾಯಿ ಹಿಂದೂಸ್ತಾನಿ ಸಂಗೀತ ಪಾಠ ಶಾಲೆ ಆಶ್ರಯದಲ್ಲಿ, ನಗರದ ಸಾರ್ವಜನಿಕ ಗ್ರಂಥಾಲಯ ಬಳಿ ಇರುವ ಗುಜ್ಜರ್ ಬಿಲ್ಡಿಂಗ್‌ನಲ್ಲಿ 30 ದಿನಗಳ ಕಾಲ ನಡೆದ ಸಂಗೀತದೊಂದಿಗೆ ಬೇಸಿಗೆ ಶಿಬಿರ, ಮುಕ್ತಾಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಕ್ಷೇತ್ರದಲ್ಲಿಯೇ ಹೆಸರು ಮಾಡಿದ್ದ ನಮ್ಮೂರಿನ ಮಕ್ಕಳಿಗೆ ಶ್ರೀ ಜನನಿ ಜನ್ಮದಾತ ಸಾಂಸ್ಕೃತಿಕ ಟ್ರಸ್ಟ್‌ನವರು, ನುರಿತ ಸಂಗೀತ ಶಿಕ್ಷಕರಿಂದ ಮಕ್ಕಳಿಗೆ 30 ದಿನಗಳ ಕಾಲ ಪ್ರಾರಂಭಿಕ ಸಂಗೀತ ಅಭ್ಯಾಸ, ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ, ಹಾರ್ಮೋನಿಯಂ, ತಬಲಾ, ಕಂಜ್ರ್ (ದಿಂಬ್ಡಿ) ಸೇರಿದಂತೆ ಸಂಗೀತ ಪರಿಕರಗಳ ಪರಿಚಯದೊಂದಿಗೆ, ದಾಸರ ಪದಗಳು, ವಚನಗಳು, ಭಕ್ತಿ ಗೀತೆಗಳು, ಜಾನಪದ ಗೀತೆಗಳು, ಚಲನ ಚಿತ್ರಗೀತೆಗಳ ಹಾಡುವ ತರಬೇತಿ, ಹಾಗೂ ನೃತ್ಯದ ಮಹತ್ವ, ತರಬೇತಿ ನೀಡಿರುವುದು ಸಂತಸದ ವಿಷಯವಾಗಿದೆ. ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ತಾವು ಸಹಕರಿಸುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಸಾಮಾಜಿಕ ಹೋರಾಟಗಾರ ಐರಣಿ ಹನುಮಂತಪ್ಪ, ಅಮರಾವತಿ ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಅಮರಾವತಿ ಪರಮೇಶ್ವರಪ್ಪ, ಹಿರಿಯ ಪತ್ರಕರ್ತ ಬಿ ಮುಗ್ದುಮ್ ಮಾತನಾಡಿ ಶುಭ ಹಾರೈಸಿದರು. ತರಬೇತಿ ಪಡೆದ ಮಕ್ಕಳು ವೇದಿಕೆಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿ, ದಾಸರ ಪದ, ವಚನ, ಚಿತ್ರಗೀತೆಗಳನ್ನು ಹಾಡಿ, ನೃತ್ಯದ ಮೂಲಕ ಸಭಿಕರ ಮನಸೂರೆಗೊಂಡರು.
ತರಬೇತಿ ಪಡೆದ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಯಿತು. ಸಂಗೀತ ತರಬೇತಿ ಶಿಕ್ಷಕ ಗಾನ ಕಲಾ ರತ್ನ ಪ್ರಶಸ್ತಿ ಪುರಸ್ಕೃತ ಕಾಂತರಾಜ್ ಹರಿಹರ, ಕರ್ನಾಟಕ ಕಲಾ ರತ್ನ ಪ್ರಶಸ್ತಿ ಪುರಸ್ಕೃತ ಅಣ್ಣಪ್ಪ ಅಜ್ಜೇರ, ನೃತ್ಯ ಶಿಕ್ಷಕ ಗೋವಿಂದ, ವೃತ್ತಿ ಚೈತನ್ಯ ರತ್ನ ಪ್ರಶಸ್ತಿ ಪುರಸ್ಕೃತ ಶಿಲ್ಪಿ ವೀರೇಶ ಬ. ಬಡಿಗೇರ, ಕಾರ್ಯಕ್ರಮ ಸಂಘಟಕ ಪಕ್ಕೀರೇಶ ಯಾದವ, ಸೀಮಾ, ಪುಷ್ಪ, ಟ್ರಸ್ಟ್ ಗೌರವಾಧ್ಯಕ್ಷ ಅಜ್ಜೇರ ಪರಸಪ್ಪ, ಕಾರ್ಯದರ್ಶಿ ಸೌಭಾಗ್ಯ ಪರಸಪ್ಪ, ಖಜಾಂಚಿ ಮಂಜಪ್ಪ, ಮಾಲಾಶ್ರೀ, ತರಬೇತಿ ಪಡೆದ ಮಕ್ಕಳ ಪೋಷಕರು, ಸಾರ್ವಜನಿಕರು, ಅಭಿಮಾನಿಗಳು ಇದ್ದರು.- - -
-17ಎಚ್.ಆರ್.ಆರ್02:ಹರಿಹರದಲ್ಲಿ ಸಂಗೀತದೊಂದಿಗೆ 30 ದಿನಗಳ ಕಾಲ ನಡೆದ ಬೇಸಿಗೆ ಶಿಬಿರ, ಮುಕ್ತಾಯ ಸಮಾರಂಭವನ್ನು ಶಾಸಕ ಬಿ.ಪಿ. ಹರೀಶ್ ಉದ್ಘಾಟಿಸಿ ಮಾತನಾಡಿದರು.