ಚನ್ನಪಟ್ಟಣ: ಹಾವು ಕಡಿತಕ್ಕೆ ಒಳಗಾಗಿದ್ದ ನಾಲ್ಕೂವರೆ ವರ್ಷದ ಬಾಲಕನಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಂಟಿಸ್ನೇಕ್ ವೀನಮ್(ಎಎಸ್‌ವಿ) ಚುಚ್ಚುಮದ್ದು ದಾಸ್ತಾನಿದ್ದರೂ ನೀಡದೆ ಮಗುವಿನ ಸಾವಿಗೆ ಕಾರಣರಾಗಿರುವ ವೈದ್ಯಾಧಿಕಾರಿ ಡಾ.ರಂಜಿತ್ ಅವರನ್ನು ಆರೋಗ್ಯ ಇಲಾಖೆ ಆಯುಕ್ತರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ
ಚನ್ನಪಟ್ಟಣ: ಹಾವು ಕಡಿತಕ್ಕೆ ಒಳಗಾಗಿದ್ದ ನಾಲ್ಕೂವರೆ ವರ್ಷದ ಬಾಲಕನಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಂಟಿಸ್ನೇಕ್ ವೀನಮ್(ಎಎಸ್‌ವಿ) ಚುಚ್ಚುಮದ್ದು ದಾಸ್ತಾನಿದ್ದರೂ ನೀಡದೆ ಮಗುವಿನ ಸಾವಿಗೆ ಕಾರಣರಾಗಿರುವ ವೈದ್ಯಾಧಿಕಾರಿ ಡಾ.ರಂಜಿತ್ ಅವರನ್ನು ಆರೋಗ್ಯ ಇಲಾಖೆ ಆಯುಕ್ತರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಸೇವೆಯಿಂದ ಅಮಾನತುಗೊಂಡಿರುವ ಡಾ.ರಂಜಿತ್ ಅವರನ್ನು ತಕ್ಷಣ ಗದಗಜಿಲ್ಲೆ ಶಿರಹಟ್ಟಿ ತಾಲೂಕಿನ ಲಕ್ಷೇಶ್ವರ ಸಾರ್ವಜನಿಕ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಘಟನೆಯ ಹಿನ್ನೆಲೆ: ಏ.೨೮ರಂದು ಚನ್ನಪಟ್ಟಣ ನಗರದ ಮಹದೇಶ್ವರ ನಗರ ಬಡಾವಣೆಯಲ್ಲಿ ಬಾಲಕ ಸಾತ್ವಿಕ್‌ಗೆ ನಾಗರ ಹಾವು ಕಡಿದಿತ್ತು. ತಕ್ಷಣ ಬಾಲಕನ ಕುಟುಂಬದವರು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದರು. ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯಾಧಿಕಾರಿ ಡಾ.ರಂಜಿತ್ ಮಗುವಿನ ಆರೋಗ್ಯ ತಪಾಸಣೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆಯುತ್ತಿದ್ದ ಮಗು ಏ.೩೦ರಂದು ಕೊನೆಯುಸಿರೆಳೆದಿತ್ತು.
ಈ ಸಂಬಂಧ ಮೃತ ಮಗುವಿನ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಆರೋಗ್ಯ ಇಲಾಖೆಯ ಸಮಗ್ರರೋಗ ಕಣ್ಗಾವಲು ವಿಭಾಗದ ಯೋಜನಾ ನಿರ್ದೇಶಕರಿಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು. ಯೋಜನಾ ನಿರ್ದೇಶಕರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿ, ಕರ್ತವ್ಯ ನಿರತ ವೈದ್ಯರಿಂದ ಹೇಳಿಕೆ ಪಡೆದುಕೊಂಡಿದ್ದರು.ವೈದ್ಯರ ಲೋಪ ಸಾಬೀತು: ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾವುಕಡಿತಕ್ಕೆ ನೀಡುವ ಇಂಜೆಕ್ಷನ್ ದಾಸ್ತಾನದಿದ್ದರೂ ಅದನ್ನು ನೀಡಿಲ್ಲ. ಡಾ.ರಂಜಿತ್ ಅವರ ನಿರ್ಲಕ್ಷ್ಯದಿಂದಲೇ ಮಗು ಸಾವಿಗೀಡಾಗಿದೆ ಎಂದು ವಿಚಾರಣೆ ನಡೆಸಿದ ಅಧಿಕಾರಿಗಳು ಅಭಿಪ್ರಾಯಪಟ್ಟು ಆರೋಗ್ಯ ಇಲಾಖೆ ಆಯುಕ್ತರಿಗೆ ವರದಿ ನೀಡಿದ ಹಿನ್ನೆಲೆಯಲ್ಲಿ ಆಯುಕ್ತರು ಅಮಾನತುಗೊಳಿಸಿ ಇಲಾಖಾ ವಿಚಾರಣೆ ನಿಗದಿ ಪಡಿಸಿ ಆದೇಶಿಸಿದ್ದಾರೆ.
