ತಾಯಿ, ತಂದೆ, ಗುರು ಆನಂತರ ದೇವರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಹೆತ್ತವರನ್ನು, ಪಾಠ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ಮೊಬೈಲ್‌ ಬಿಟ್ಟು ಪುಸ್ತಕ ಓದಿದರೆ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ವಿದ್ಯೆ ಮತ್ತು ಕಲೆ ಯಾರಪ್ಪನ ಮನೆ ಸ್ವತ್ತಲ್ಲ. ಶ್ರದ್ಧೆಯಿಂದ ಸಾಧನೆ ಮಾಡಿದ ಸಾಧಕನಿಗೆ ಸರಸ್ವತಿ ಒಲಿಯುತ್ತಾಳೆ ಎಂದು ಚಿತ್ರ ನಟ ದೊಡ್ಡಣ್ಣ ತಿಳಿಸಿದರು. ನಗರ ಹೊರವಲಯದ ಎಸ್‌ಜೆಸಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆವರಣದ ಬಿಜಿಎಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮ 2026 ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ತಾಯಿ, ತಂದೆ, ಗುರು ಆನಂತರ ದೇವರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಹೆತ್ತವರನ್ನು, ಪಾಠ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ಮೊಬೈಲ್‌ ಬಿಟ್ಟು ಪುಸ್ತಕ ಓದಿದರೆ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ ಸರ್ವಶ್ರೇಷ್ಠ ಭಾಷೆ ಕನ್ನಡ. ಕನ್ನಡ ಭಾಷೆಗಿರುವ ತಾಕತ್ತು ಯಾವ ಭಾಷೆಗೂ ಇಲ್ಲ. ಇಡೀ ಜಗತ್ತಿನಲ್ಲಿ ಇರುವುದು ಮೂರೇ ಪ್ರಮುಖ ಭಾಷೆ. ಅದರಲ್ಲಿ ನಮ್ಮ ಕನ್ನಡವೂ ಒಂದು ಎಂಬುದು ಹೆಮ್ಮೆ. ನಾವು ಬರೆದಂತೆ ಮಾತನಾಡಬಹುದು. ಸಂಧಿ, ಸಮಾಸ, ವ್ಯಾಕರಣ ಎಲ್ಲವನ್ನೂ ಹೊಂದಿರುವ ಸಮೃದ್ಧ ಭಾಷೆ ಕನ್ನಡ. ತಾಯಿ ಭಾಷೆಯನ್ನು ಯಾರೂ ಕಡೆಗಣಿಸಬಾರದು. ನಾಟಕದಿಂದ ಭಾಷೆ ಶುದ್ಧವಾಗುತ್ತದೆ. ಸೃಜನಶೀಲತೆ ಬೆಳೆಯುತ್ತದೆ ಎಂದರು.

ಪ್ರತಿಯೊಬ್ಬರ ಸಾಧನೆ ಹಿಂದೆ ಗುರು ಇರುತ್ತಾರೆ. ಗುರುವನ್ನು ನಂಬಿದರೆ ಯಾರೂ ಕೆಡಲ್ಲ. ಗುರುವಿಗೆ ನಿಮ್ಮ ಭವಿಷ್ಯ ರೂಪಿಸುವ ಶಕ್ತಿ ಇದೆ. ವಿದ್ಯಾರ್ಥಿಗಳು ಹೆಚ್ಚಿನ ಪುಸ್ತಕಗಳನ್ನು ಓದಬೇಕು. ಓದಿದರೆ ಮಾತ್ರ ಜ್ಞಾನಾರ್ಜನೆಯಾಗುತ್ತದೆ. ಮೊಬೈಲ್‌ ಅತಿಯಾದ ಬಳಕೆ ಅಪಾಯಕಾರಿ. ಈಗಿನ ಕಾಲದ ವಿದ್ಯಾರ್ಥಿಗಳು ಮೊಬೈಲ್‌ ಗೀಳನ್ನು ಬಿಟ್ಟು ಹೆಚ್ಚು ಓದಬೇಕು. ಅಹಂಕಾರವಿದ್ದರೆ ಕಲೆ ಯಾರ ಬಳಿಯೂ ಸುಳಿಯಲ್ಲ. ಭಾರತದಂತಹ ಪವಿತ್ರ ಮಣ್ಣು. ಇಡೀ ಜಗತ್ತಿನಲ್ಲೇ ಇಲ್ಲ. ಇಂತಹ ಮಣ್ಣಿನ ನಾಥ ಪಂಥದ ಬಾಲಗಂಗಾಧರನಾಥ ಸ್ವಾಮೀಜಿಯವರ ಸಂಸ್ಥೆಯಲ್ಲಿ ನೀವು ವ್ಯಾಸಂಗ ಮಾಡುತ್ತಿರುವುದು ನಿಮ್ಮ ಪುಣ್ಯ. ನಮ್ಮ ಕೆಲಸವನ್ನು ನಾವು ಯಾರಿಗೂ ತೊಂದರೆ ನೀಡದಂತೆ ಮಾಡಿದರೆ, ಫಲ ತನ್ನಷ್ಟಕ್ಕೆ ತಾನು ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.

ಹಿರಿಯ ನಟ ದೊಡ್ಡಣ್ಣ ಅವರು ಭಾಷಣದಲ್ಲಿ ಕನ್ನಡದ ಮೇರು ಕವಿಗಳಾದ ರಾಘವಾಂಕ, ಕುವೆಂಪು, ಪಂಪ, ದಿನಕರ ದೇಸಾಯಿ, ಡಿ.ವಿ.ಗುಂಡಪ್ಪ ಸೇರಿದಂತೆ ಹಲವರ ಸಾಹಿತ್ಯ ಜತೆ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ಬುದ್ಧಿ ಹೇಳಿದರು.

ಸಮಾರಂಭಕ್ಕೂ ಮುನ್ನ ಕಾಲೇಜಿನ ಪ್ರವೇಶದ್ವಾರದಿಂದ ಮಂಗಳನಾಥ ಸ್ವಾಮೀಜಿ, ನಟ ದೊಡ್ಡಣ್ಣ ಹಾಗೂ ಅತಿಥಿಗಳನ್ನು ತೆರೆದ ವಾಹನದಲ್ಲಿ ಸಾಂಪ್ರದಾಯಿಕ ಮೆರವಣಿಗೆ ಮೂಲಕ ವಿದ್ಯಾರ್ಥಿಗಳು ನಾನಾ ವೇಷಭೂಷಣಗಳನ್ನು ತೊಟ್ಟು ಗಣ್ಯರನ್ನು ಸ್ವಾಗತಿಸಿದರು.

ನಾಟಕ, ನೃತ್ಯ, ಗಾಯನ ಹೀಗೆ ಹಲವು ಸಾಂಸ್ಕೃತಿಕ ಸ್ಪರ್ಧೆಗಳನ್ನು ಸಂಭ್ರಮ ಸಮಾರಂಭದಲ್ಲಿ ಏರ್ಪಡಿಸಲಾಗಿತ್ತು. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ, ಎಸ್‌ಜೆಸಿಐಟಿ ಪ್ರಾಂಶುಪಾಲ ಡಾ.ಜಿ.ಟಿ. ರಾಜು,ಆಡಳಿತಾಧಿಕಾರಿ ರಂಗಸ್ವಾಮಿ ಜಿ.ಆರ್, ಡೀನ್ ಅಕಾಡೆಮಿಕ್ಸ್ ಮುಖ್ಯಸ್ಥ ಡಾ.ಮಂಜುನಾಥ್ ಕುಮಾರ್ ಬಿ.ಹೆಚ್, ಡೀನ್ ಅಕಾಡೆಮಿಕ್ಸ್, ಸ್ಟುಡೆಂಟ್ ವೆಲ್‌ಫೇರ್ ಡೀನ್ ಡಾ.ಜಿ.ನಾರಾಯಣ್, ಎಲ್ಲಾ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು. ಸಿಕೆಬಿ-3 ನಗರ ಹೊರವಲಯದ ಎಸ್‌ಜೆಸಿಐಟಿ ಆವರಣದ ಬಿಜಿಎಸ್ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮ 2026 ಸಮಾರಂಭಕ್ಕೆ ನಟ ದೊಡ್ಡಣ್ಣ ಚಾಲನೆ ನೀಡಿದರು. ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ಮತ್ತಿತರರು ಇದ್ದರು.