ಕೇಂದ್ರ ಸರ್ಕಾರ ಗ್ರಾಮೀಣ ಬಡವರಿಗೆ ಸಂವಿಧಾನ ಬದ್ಧ ಉದ್ಯೋಗದ ಹಕ್ಕನ್ನು ಕಲ್ಪಿಸುವ ಕಾನೂನಾದ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಿ ಬಡವರ ಬದುಕಿಗೆ ಆಸರೆಯನ್ನಾಗಿಸಿತ್ತು. ಆದರೆ ಇಂದಿನ ಕೇಂದ್ರ ಸರ್ಕಾರ ಏಕಾಏಕಿ ಇದನ್ನು ರದ್ದುಗೊಳಿಸಿದೆ.
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ಕೇಂದ್ರ ಸರ್ಕಾರ ವಿಬಿಜಿ ರಾಮ್ ಜಿ ಕಾಯ್ದೆ ವಾಪಸ್ ಪಡೆದು ನರೇಗಾ ಮುಂದುವರಿಕೆ ಹಾಗೂ ಕೃಷಿ ಕಾರ್ಮಿಕರ, ಪಂಚಾಯತಿ ಬಿಸಿಯೂಟ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಕೃಷಿ ಮತ್ತು ಕೂಲಿ ಕಾರ್ಮಿಕರ ಸಂಘ, ಸಿಐಟಿಯು, ಕೃಷಿ ಕಾರರು ಹಾಗೂ ಗ್ರಾಮೀಣ ಕಾರ್ಮಿಕರ ಸಂಘ ಸೇರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ತಾಲೂಕಿನ ಅಜ್ಜವಾರ, ಪಟ್ರೇನಹಳ್ಳಿ, ಆವಲಗುರ್ಕಿ, ಹೊಸಹುಡ್ಯ, ಹಾರೋಬಂಡೆ, ಗೊಲ್ಲಹಳ್ಳಿ ಗ್ರಾ.ಪಂ ಕಚೇರಿಗಳ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.ಈ ವೇಳೆ ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ ಮಾತನಾಡಿ, ಕೇಂದ್ರ ಸರ್ಕಾರ ಗ್ರಾಮೀಣ ಬಡವರಿಗೆ ಸಂವಿಧಾನ ಬದ್ಧ ಉದ್ಯೋಗದ ಹಕ್ಕನ್ನು ಕಲ್ಪಿಸುವ ಕಾನೂನಾದ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಿ ಬಡವರ ಬದುಕಿಗೆ ಆಸರೆಯನ್ನಾಗಿಸಿತ್ತು. ಆದರೆ ಇಂದಿನ ಕೇಂದ್ರ ಸರ್ಕಾರ ಏಕಾಏಕಿ ಇದನ್ನು ರದ್ದುಗೊಳಿಸಿದೆ. ಗ್ರಾಮೀಣ ಶ್ರೀಮಂತರನ್ನು ತೃಪ್ತಿಗೊಳಿಸುವ ಸಲುವಾಗಿ ನೂತನ ವಿಬಿ-ಜಿರಾಮ್ ಜಿ ಕಾಯ್ದೆ ಜಾರಿಗೆ ತಂದಿದೆ. ಇದು ಬಡವರ ಉದ್ಯೋಗದ ಹಕ್ಕನ್ನು ಕಸಿಯುವ ಮತ್ತು ಬಡವರಿಗೆ ಉದ್ಯೋಗವಿಲ್ಲದೆ ಮಾಡುವ ಬಡವರ ವಿರೋಧಿ ಕಾನೂನಾಗಿದೆ. ಆದ್ದರಿಂದ ಈ ಕಾನೂನನ್ನು ಕೂಡಲೇ ರದ್ದುಗೊಳಿಸಬೇಕು, ಮನರೇಗಾ ಕಾನೂನನ್ನು ಪುನರ್ ಜಾರಿಗೊಳಿಸಲು ಆಗ್ರಹಿಸಿದರು.
ಅಸಂಘಟಿತ ಕಾರ್ಮಿಕರು ಮತ್ತು ಸ್ತ್ರೀ ನೌಕರರ ಕಾಯಂಗೊಳಿಸಬೇಕು. ಗ್ರಾಮ ಪಂಚಾಯತಿ ನೌಕರರು ಆಗ ಅಸಂಘಟಿತ ಕಾರ್ಮಿಕರಿಗೂ ಬಿಪಿಎಲ್ ರೇಷನ್ ಕಾರ್ಡನ್ನು ಕಲ್ಪಿಸಬೇಕು. ಕರ್ನಾಟಕ ರಾಜ್ಯ ಸರ್ಕಾರ ಬಡವರಿಗೆ ಮನೆ ನಿವೇಶನ ಕಲ್ಪಿಸುವಲ್ಲಿ ತುಂಬಾ ವಿಳಂಬ ನೀತಿ ಅನುಸರಿಸುತ್ತಿದೆ. ಬಡವರಿಗೆ ತೀವ್ರ ಸಂಕಷ್ಟ ನಿರ್ಮಾಣವಾಗಿದ್ದು ಬಡವರಿಗೆ ಮನೆ, ನಿವೇಶನ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಭೂಹೀನ ಬಡವರು ಕಳೆದ 40 ವರ್ಷಗಳಿಂದ ಸರ್ಕಾರಿ ಭೂಮಿಯನ್ನು ಉಳುಮೆ ಮಾಡುತ್ತಿದ್ದು ಆ ಜಮೀನಿನ ಹಕ್ಕು ಪತ್ರಕ್ಕಾಗಿ ಅರ್ಜಿ 53, 57 ಹಾಕಿ ಹಲವು ವರ್ಷಗಳಾಗುತ್ತಿದೆ ಆದರೂ ಕೂಡ ಬಡವರಿಗೆ ಹಕ್ಕು ಪತ್ರ ಕಲ್ಪಿಸುತ್ತಿಲ್ಲ. ಆದುದರಿಂದ ಸರ್ಕಾರ ಕೂಡಲೇ ಎಲ್ಲಾ ಬಡವರಿಗೂ ಹಕ್ಕು ಪತ್ರ ನೀಡಬೇಕು. ಈ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಪರಿಹಾರಕ್ಕಾಗಿ ಮುಂದಾಗಬೇಕು. ಈ ಸಮಸ್ಯೆಗಳು ಪರಿಹಾರ ಆಗದಿದ್ದಲ್ಲಿ ಮುಂದಿನ ದಿನಗಳಲ್ಲಿ ನಿರಂತರವಾದ ಹೋರಾಟಗಳನ್ನು ನಡೆಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಡಿ.ಎನ್.ರಾಜು, ನರಸಿಂಹರೆಡ್ಡಿ, ರಾಮಕೃಷ್ಣಪ್ಪ, ಮುನಿನಾರಾಯಣಪ್ಪ, ವೆಂಕಟೇಶಮ್ಮ, ಅನುಸೂಯಮ್ಮ, ನಾಗರತ್ನಮ್ಮ, ಮುನಿವೆಂಕಟಮ್ಮ, ನ್ಯಾತಪ್ಪ, ಮಂಜುನಾಥ್ ಮತ್ತಿತರರು ಇದ್ದರು.ಸಿಕೆಬಿ-1 ಮನರೇಗಾ ಮುಂದುವರಿಕೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಪಟ್ರೇನಹಳ್ಳಿ ಗ್ರಾಮ ಪಂಚಾಯತಿ ಕಚೇರಿ ಮುಂದೆ ಪ್ರಾಂತ್ಯ ರೈತ ಸಂಘ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.