ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಬಿಟ್ಟರೆ ಅನುಕೂಲ: ಚಲುವರಾಯಸ್ವಾಮಿ

| Published : Nov 16 2025, 01:30 AM IST

ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಬಿಟ್ಟರೆ ಅನುಕೂಲ: ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜಾಪ್ರಭುತ್ವ ಗಟ್ಟಿಯಾಗಿ, ಸಮಾಜಮುಖಿ ಕೆಲಸಗಳಾಗಬೇಕೆಂದರೆ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು. ಮತ ಹಾಕುವವರು ಮತ್ತು ಮತ ಹಾಕಿಸಿಕೊಂಡವರು ಇಬ್ಬರೂ ಕೂಡ ಸಮಾಜಮುಖಿ ಚಿಂತನೆಯಲ್ಲಿದ್ದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಸಾಧ್ಯ .

ಕನ್ನಡಪ್ರಭ ವಾರ್ತೆ ನಾಗಮಂಗಲ

ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಬೆರೆಸುವುದನ್ನು ಬಿಟ್ಟು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮೈಗೂಡಿಸಿಕೊಂಡಲ್ಲಿ ರೈತರು ಮತ್ತು ಸಹಕಾರ ಸಂಘಗಳಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ಎಂಆರ್‌ಪಿ ಸಮುದಾಯಭವನದ ಆವರಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಸಹಕಾರ ಇಲಾಖೆ, ಹಾಲು ಉತ್ಪಾದಕರ ಸಂಘಗಳು, ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘ ಸೇರಿ ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ ಶನಿವಾರ ಆಯೋಜಿಸಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರ ಕ್ಷೇತ್ರಗಳು ಕೂಡ ಇಂದು ರಾಜಕೀಯ ವರ್ತುಲದಿಂದ ಹೊರತಾಗಿಲ್ಲ. ಪ್ರಜಾಪ್ರಭುತ್ವ ಇರುವ ಕಡೆಗಳಲ್ಲಿ ಈ ರೀತಿಯ ರಾಜಕೀಯ ಮೇಳೈಸುವುದು ಸರ್ವೆ ಸಾಮಾನ್ಯ. ರೈತರ ಬದುಕಿಗೆ ಬೆಂಬಲವಾಗಿ ನಿಲ್ಲಬೇಕೆಂಬ ಉದ್ದೇಶದಿಂದ ಅನೇಕ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ರಾಜಕೀಯ ದಿಗ್ಗಜರು ಸಹಕಾರ ಕ್ಷೇತ್ರವನ್ನು ಬಲಿಷ್ಠಗೊಳಿಸಿದ್ದಾರೆ. ಇಂತಹ ಉದಾತ್ತ ಕಲ್ಪನೆಯ ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಪ್ರಾಮಾಣಿಕತೆ ಮೇಳೈಸಬೇಕಿದೆ ಎಂದರು.

ಪ್ರಜಾಪ್ರಭುತ್ವ ಗಟ್ಟಿಯಾಗಿ, ಸಮಾಜಮುಖಿ ಕೆಲಸಗಳಾಗಬೇಕೆಂದರೆ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು. ಮತ ಹಾಕುವವರು ಮತ್ತು ಮತ ಹಾಕಿಸಿಕೊಂಡವರು ಇಬ್ಬರೂ ಕೂಡ ಸಮಾಜಮುಖಿ ಚಿಂತನೆಯಲ್ಲಿದ್ದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಸಾಧ್ಯ ಎಂದು ಹೇಳಿದರು.

ಮದ್ದೂರಿನ ಭಾರತೀ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ.ಪುಟ್ಟಸ್ವಾಮಿಗೌಡ ಮತ್ತು ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ ಮಾತನಾಡಿದರು. ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಲುಕೊಂಬರಿ ಗೋವಿಂದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಹಲವು ಹಿರಿಯ ಸಹಕಾರಿಗಳು ಮತ್ತು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಮನ್ಮುಲ್ ಅಧ್ಯಕ್ಷ ಶಿವಕುಮಾರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಚ್ಚಿನ್ ಚಲುವರಾಯಸ್ವಾಮಿ, ದಿನೇಶ್, ಜಿಲ್ಲಾ ಹಾಲು ಒಕ್ಕೂಟದ ವಿಶೇಷಾಧಿಕಾರಿ ಕೆ.ಅನಿತ, ಎಂಡಿಸಿಸಿ ಬ್ಯಾಂಕ್ ಸಿಇಒ ವನಜಾಕ್ಷಿ, ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಂ.ಪ್ರಕಾಶ್, ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ್, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ರಾಜೇಗೌಡ, ನರಸಿಂಹಮೂರ್ತಿ ಸೇರಿದಂತೆ ಹಲವರು ಇದ್ದರು.