ಪ್ರಕೃತಿಗೆ ಬಹುದೊಡ್ಡ ಕೊಡುಗೆ ನೀಡಿದ ತಿಮ್ಮಕ್ಕ

| Published : Nov 16 2025, 01:15 AM IST

ಸಾರಾಂಶ

ಈ ಸಮಾಜವು ಯಾವತ್ತು ಸಾಲುಮರದ ತಿಮ್ಮಕ್ಕನಿಗೆ ಚಿರ ಋಣಿಯಾಗಿರುತ್ತದೆ. ಭಗವದ್ಗೀತೆಯಲ್ಲಿನ ಮಾತಿನಂತೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಕರ್ತವ್ಯವನ್ನು ಮಾಡಿ ವಿಶ್ವಾದ್ಯಂತ ಛಾಪು ಮೂಡಿಸಿ ನಮ್ಮನ್ನಗಲಿದ್ದಾರೆ. ಮಹಾತಾಯಿಯು ವೃಕ್ಷ ಮಾತೆ ಎಂದೇ ಪ್ರಸಿದ್ಧಿಯಾಗಿದ್ದರು. ದೇಶ ವಿದೇಶಗಳಲ್ಲಿ ಪುರಸ್ಕಾರಗಳನ್ನು ಗಳಿಸಿ ಅಜರಾಮರರಾಗಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶುಕ್ರವಾರ ನಿಧನರಾದ ಸಾಲು ಮರದ ತಿಮ್ಮಕ್ಕರಿಗೆ ನಗರದ ಬಿ.ಬಿ.ರಸ್ತೆಯ ಜ್ಯೂನಿಯರ್ ಕಾಲೇಜು ಆವರಣದ ನಂದಿ ರಂಗಮಂದಿರದಲ್ಲಿರುವ ಕಸಾಪ ಕಚೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಿಮ್ಮಕ್ಕನವರ ಭಾವಚಿತ್ರಕ್ಕೆ ಕಸಾಪ ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.

ಈವೇಳೆ ಸಾಹಿತಿ ಹಾಗೂ ಶಿಕ್ಷಕಿ ಬಿ.ಎಂ.ಪ್ರಮೀಳ ಮಾತನಾಡಿ, ಈ ಸಮಾಜವು ಯಾವತ್ತು ಸಾಲುಮರದ ತಿಮ್ಮಕ್ಕನಿಗೆ ಚಿರ ಋಣಿಯಾಗಿರುತ್ತದೆ. ಭಗವದ್ಗೀತೆಯಲ್ಲಿನ ಮಾತಿನಂತೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತನ್ನ ಕರ್ತವ್ಯವನ್ನು ಮಾಡಿ ವಿಶ್ವಾದ್ಯಂತ ಛಾಪು ಮೂಡಿಸಿ ನಮ್ಮನ್ನಗಲಿದ್ದಾರೆ. ಮಹಾತಾಯಿಯು ವೃಕ್ಷ ಮಾತೆ ಎಂದೇ ಪ್ರಸಿದ್ಧಿಯಾಗಿದ್ದು, ದೇಶ ವಿದೇಶಗಳಲ್ಲಿ ಪುರಸ್ಕಾರಗಳನ್ನು ಗಳಿಸಿ ಸರಳ ಸಜ್ಜನಿಕೆಯಿಂದ ಸೇವೆ ಮಾಡಿ ತಮ್ಮ ಅಜರಾಮರ ರಾಗಿದ್ದಾರೆ ಎಂದರು.

ಕರ್ನಾಟಕ ಸರ್ಕಾರವು ಅವರ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ. ಇವರ ಸೇವೆಯನ್ನು ಗುರ್ತಿಸಿದ ದೂರದ ಕ್ಯಾಲಿಫೋರ್ನಿಯಾ ಸರ್ಕಾರ ಪುರಸ್ಕಾರ ನೀಡಿದ್ದು ಇವರ ಸೇವಗೆ ಸಂದ ಗೌರವ. ತಮಗೆ ಮಕ್ಕಳಿಲ್ಲ ಎಂಬ ಕೊರಗನ್ನು ನಿವಾರಿಸಲು ಸಸಿಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ, ಬೆಳೆಸಿ ಪ್ರಕೃತಿಗೆಗೆ ಕೊಡುಗೆ ನೀಡಿ ಸಾರ್ಥಕ ಭಾವಪಡೆದವರು ತಿಮ್ಮಕ್ಕ ಎಂದು ಸ್ಮರಿಸಿದರು.

ಬೆಂಗಳೂರು ಉತ್ತರ ವಿವಿ ಶಿಕ್ಷಣ ಮಹಾವಿದ್ಯಲಯದ ಪ್ರಾಧ್ಯಾಪಕ ಡಾ.ಶಂಕರ್ ಮಾತನಾಡಿ, ಪ್ರಪಂಚದಲ್ಲಿ ಎಲ್ಲ ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಆದರೆ ಇವರು ಸಲ್ಲಿಸಿದ ಕ್ಷೇತ್ರದಲ್ಲಿ ಸ್ಪರ್ಧೆಯೇ ಇಲ್ಲ, ಯಾಕೆಂದೆರೆ ಸ್ವಾರ್ಥದಲ್ಲೇ ಎಲ್ಲರೂ ಮುಳುಗಿರುವಾಗ ನಿಸ್ವಾರ್ಥ ಸೇವೆ ಸಲ್ಲಿಸಿ ಪ್ರಕೃತಿಗೆ ಬಹು ದೊಡ್ಡ ಕೊಡುಗೆ ನೀಡಿ ನೆನಪನ್ನು ನಾಡಿಗೆ ಬಿಟ್ಟು ಹೋಗಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ,ಕೋಶಾಧ್ಯಕ್ಷ ಡಿ.ಎಂ.ಶ್ರೀರಾಮ, ಶ್ರೀನಿವಾಸ್, ನಟರಾಜ್, ಚರಣ್,ಲೋಕೇಶ್ ಮತ್ತಿತರರು ಇದ್ದರು.