ಸರ್ವರೂ ಸಮಾನರಾಗಿ ಬದುಕಲು ದೇಶದ ಕಾನೂನುಗಳ ಬಗ್ಗೆ ತಿಳಿದುಕೊಂಡಿರಬೇಕು. ಆದ್ದರಿಂದ ಕಾನೂನು ಸ್ವಯಂ ಸೇವಕರು ಸಾಮಾಜಿಕ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಡಿ.ಕೆ.ವೇಲಾ ಹೇಳಿದ್ದಾರೆ.

- ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ತರಬೇತಿ ಶಿಬಿರ । ಕುಂದುಕೊರತೆ ಮನವಿ ಸಲ್ಲಿಸಲು ಸಲಹೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ವರೂ ಸಮಾನರಾಗಿ ಬದುಕಲು ದೇಶದ ಕಾನೂನುಗಳ ಬಗ್ಗೆ ತಿಳಿದುಕೊಂಡಿರಬೇಕು. ಆದ್ದರಿಂದ ಕಾನೂನು ಸ್ವಯಂ ಸೇವಕರು ಸಾಮಾಜಿಕ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಡಿ.ಕೆ.ವೇಲಾ ಹೇಳಿದರು.

ನಗರದ ಯುಬಿಡಿಟಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಬೆಂಗಳೂರಿನ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಔಟ ಲಾಡ್ ಇಂಡಿಯಾ ಫೌಂಡೇಷನ್ ಆಶ್ರಯದಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ 3 ದಿನಗಳ ತರಬೇತಿ ಶಿಬಿರವನ್ನು ಉದ್ಫಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯನಿರ್ವಹಿಸುವ ರೀತಿಯಲ್ಲಿ ಜಿಲ್ಲೆಯಲ್ಲಿ ಮತ್ತು ತಾಲೂಕುಗಳಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದೆ. ಕಾನೂನು ಸೇವಾ ಪ್ರಾಧಿಕಾರವು ಜನರಿಗೆ ಕಾನೂನು ಅರಿವು ಮೂಡಿಸಿ, ನೆರವು ನೀಡುವುದು ಇದರ ಉದ್ದೇಶವಾಗಿದೆ ಎಂದರು.

ದೇಶದ ಜನರಿಗೆ ಕಾನೂನಿನ ಅರಿವಿನ ಕೊರತೆ ಇದೆ. ಇದಕ್ಕೆ ಕಾರಣ ಶಿಕ್ಷಣ ಮತ್ತು ಆಸಕ್ತಿ ಕೊರತೆ. ಅಭಿವೃದ್ಧಿಯು ಒಂದೇ ಗ್ರಾಫ್‌ನಲ್ಲಿದ್ದು, ಅದನ್ನು ಮನಗಂಡು ಎಲ್ಲರಿಗೂ ನ್ಯಾಯ ಕೊಡಿಸುವ ಉದ್ದೇಶವನ್ನು ಹೊಂದಿದ್ದೇವೆ. ಸಾಮಾಜಿಕ ಬದ್ಧತೆ ದೃಷ್ಠಿಯಿಂದ ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು ನೇಮಕ ಮಾಡಿಕೊಂಡಿದ್ದೆವೆ. ನಾವುಗಳೆಲ್ಲರು ಸಮಾಜ ನಿನ್ನೆಗಿಂತ ಇಂದು ಚೆನ್ನಾಗಿರಬೇಕು, ಇಂದಿಗಿಂತ ನಾಳೆ ಇನ್ನು ಚೆನ್ನಾಗಿರಬೇಕೆಂಬ ದೃಷ್ಠಿಕೋನದಿಂದ ಕಾನೂನು ಸೇವಾ ಪ್ರಾಧಿಕಾರದಡಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಕಾನೂನು ಸ್ವಯಂ ಸೇವಕರ ಮುಂದೆ ದೊಡ್ಡ ಜವಾಬ್ದಾರಿ ಇದೆ. ಅದು ಸಾಮಾಜಿಕ ಬದ್ಧತೆಗಾಗಿ ಕಾರ್ಯನಿರ್ವಹಿಸಬೇಕಾಗಿದೆ. ಸಾಮಾಜಿಕ ಬದ್ಧತೆ ಇಲ್ಲವಾದಲ್ಲಿ ಜನರು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳನ್ನು ಯಾವ ರೀತಿ ಪಡೆಯಬೇಕೆಂದು ತಿಳಿದಿರುವುದಿಲ್ಲ. ಅಂಥವರಿಗೆ ಕಾನೂನು ಸ್ವಯಂ ಸೇವಕರು ಅರಿವು ಮೂಡಿಸಿ ಸರ್ಕಾರದ ಪ್ರಯೋಜನೆಗಳನ್ನು ಪಡೆದುಕೊಳ್ಳಲು ನೆರವಾಗಬೇಕು ಎಂದರು.

ಜಿಲ್ಲೆಯ ಹೊನ್ನೆಮರನಹಳ್ಳಿ ಗ್ರಾಮಸ್ಥರು ಬಸ್, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳಿಲ್ಲ ಎಂದು ಕಾನೂನು ಸೇವಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಈಗ ಆ ಹಳ್ಳಿಗೆ ಬಸ್ ಸೌಲಭ್ಯ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಹಂತಹಂತವಾಗಿ ಕಲ್ಪಿಸಲಾಗಿದೆ. ಇದೇ ರೀತಿ ಪ್ರತಿ ಹಳ್ಳಿಯ ಜನರು ತಮ್ಮ ಗ್ರಾಮದ ಕುಂದು ಕೊರತೆಗಳ ಬಗ್ಗೆ ಮನವಿ ಸಲ್ಲಿಸಿದರೆ ಕಾನೂನು ಸೇವೆಗಳ ಪ್ರಾಧಿಕಾರ ನೆರವಿಗೆ ಬರಲಿದೆ ಎಂದು ಅಭಯ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಪ್ರಾಸ್ತವಿಕವಾಗಿ ಮಾತನಾಡಿ, ದೇಶದ ಎಲ್ಲ ಜನರಿಗೆ ಕಾನೂನಿನ ಅರಿವು ಮತ್ತು ನೆರವು ನೀಡಬೇಕು ಎಂಬ ಉದ್ದೇಶದಿಂದ ಕಾನೂನು ಸ್ವಯಂ ಸೇವಕರನ್ನು ನೇಮಿಸಿಕೊಂಡಿದೆ. ಅವರಿಗೆ ಕಾನೂನು ಕಾರ್ಯಾಗಾರ ತರಬೇತಿ ಶಿಬಿರ ಹಮ್ಮಿಕೊಂಡಿದೆ. ಇದು ರಾಷ್ಟ್ರ, ರಾಜ್ಯ, ಜಿಲ್ಲೆ ಮತ್ತು ತಾಲೂಕು ಕಾನೂನು ಸೇವಾ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದೆ. ಈ ಒಂದು ಕಾನೂನು ಪ್ರಾಧಿಕಾರದ ಅಡಿಯಲ್ಲಿ ಹಲವಾರು ನಿರ್ದೇಶನಗಳು, ನಿಯಮಗಳು ಮತ್ತು ಮಾಹಿತಿಗಳು ಬರುತ್ತಿರುತ್ತವೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಹಿತ ದೇಶದ ಪ್ರತಿಯೊಬ್ಬ ನಾಗರಿಕನು ಕಾನೂನಿನ ಕನಿಷ್ಠ ಮಾಹಿತಿ ತಿಳಿದಿರಬೇಕು. ಮತ್ತು ಅವನ ಹಕ್ಕನ್ನು ಸಾಧಿಸಲು ಎಲ್ಲಲ್ಲಿ ಸಾಧ್ಯವಿದಿಯೋ ಅಲ್ಲಿ ಹಕ್ಕನ್ನು ಸಾಧಿಸಬೇಕು ಎಂದರು.

ಜಿಲ್ಲೆಯಲ್ಲಿ 54 ಜನ ಪ್ಯಾನೆಲ್ ಅಡ್ವೋಕೆಟ್‌ಗಳು, 8 ಜನ ನುರಿತ ವಕೀಲರು, 204 ಜನ ಕಾನೂನು ಸೇವಕರು, 48 ಜನ ಸಹವರ್ತಿಗಳು ಇದ್ದಾರೆ. ಹಾಗಾಗಿ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಜನರನ್ನು ಭೇಟಿ ಮಾಡುವುದು ಮತ್ತು ಕಾನೂನಿನ ಮಾಹಿತಿಯನ್ನು ನೀಡಬೇಕಾಗಿರುತ್ತದೆ ಎಂದರು.

2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಆರ್.ಎನ್.ಪ್ರವೀಣ್ ಕುಮಾರ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮತ್ತು ಟಿ.ಎಸ್.ಸಿ-1 ಎಸ್.ಎನ್.ಹೆಗಡೆ, ಜಿಲ್ಲಾ ಕೌಟುಂಬಿಕ ನ್ಯಾಯಾಧೀಶ ಶಿವಪ್ಪ ಗಂಗಪ್ಪ ಸಲಗರೆ ಹಾಗೂ ಜಿಲ್ಲೆಯ ಎಲ್ಲ ನ್ಯಾಯಾಧೀಶರು ಉಪಸ್ಥಿತರಿದ್ದರು.

- - -

-12ಕೆಡಿವಿಜಿ40:

ತರಬೇತಿ ಶಿಬಿರವನ್ನು ನ್ಯಾಯಾದೀಶೆ ಡಿ.ಕೆ. ವೇಲಾ ಉದ್ಫಾಟಿಸಿದರು.