ಸಾರಾಂಶ
- ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ: ಹೇಳಿಕೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ನಗರ, ಜಿಲ್ಲೆಯ ಸೌಂದರ್ಯಕ್ಕೆ ಮಾರಕವಾದ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್ ಹಾಗೂ ಇವುಗಳಿಗೆ ಅವಕಾಶ ಮಾಡಿಕೊಟ್ಟು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವ ಜೊತೆಗೆ ಕಾನೂನು ಹೋರಾಟವನ್ನೂ ನಡೆಸುವುದಾಗಿ ಹರಿಹರ ಶಾಸಕ ಬಿ.ಪಿ.ಹರೀಶ ಗೌಡ ಎಚ್ಚರಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ, ಹರಿಹರ ನಗರ ಸೇರಿದಂತೆ ಜಿಲ್ಲಾದ್ಯಂತ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್ ಹಾವಳಿ ಮಿತಿಮೀರಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ. ಈ ಹಿನ್ನೆಲೆ ಲೋಕಾಯುಕ್ತ, ನ್ಯಾಯಾಲಯದಲ್ಲೂ ಕೇಸ್ ದಾಖಲು ಮಾಡಲಿದ್ದೇನೆ ಎಂದರು.ಕಳೆದ ಐದಾರು ದಿನಗಳಿಂದ ಫ್ಲೆಕ್ಸ್, ಹೋರ್ಡಿಂಗ್ಸ್ ತೆರವು ಕಾರ್ಯವನ್ನು ಜಿಲ್ಲಾಡಳಿತದ ಸೂಚನೆ ಹಿನ್ನೆಲೆ ಪಾಲಿಕೆ ಕೈಗೊಂಡಿದೆ. ಆದರೆ, ಫ್ಲೆಕ್ಸ್, ಹೋರ್ಡಿಂಗ್ಸ್ ಅಳವಡಿಸಲು ಯಾವ ಆಧಾರದಲ್ಲಿ ಅನುಮತಿ ನೀಡಿದ್ದೀರೆಂಬ ಬಗ್ಗೆ ತಮ್ಮ ಆಪ್ತ ಸಹಾಯಕನ ಮೂಲಕ ಮಾಹಿತಿ ಕೋರಿ, 2 ತಿಂಗಳಾದರೂ ಮಾಹಿತಿ ನೀಡಿಲ್ಲ. ಡಿ.24ರಂದು ಜಿಲ್ಲಾಧಿಕಾರಿಗೆ ನಾನೇ ಮೌಖಿಕವಾಗಿ ಮಾಹಿತಿ ಕೇಳಿದರೂ ಸಮರ್ಪಕ ಮಾಹಿತಿ ಕೊಡಲಿಲ್ಲ. ಇದರಿಂದಾಗಿ ಜಿಲ್ಲಾಡಳಿತದ ಮೇಲಿನ ನಂಬಿಕೆಯೇ ಹೋಗಿದೆ ಎಂದು ತಿಳಿಸಿದರು.
ಹರಿಹರ ವ್ಯಾಪ್ತಿಯ ಜಾಹೀರಾತು ಫಲಕಗಳ ಮಾಹಿತಿ ಕೇಳಿದ್ದರೆ, ಅಧಿಕಾರಿಗಳು ಇಡೀ ಜಿಲ್ಲೆಯ ಮಾಹಿತಿ ನೀಡಿದ್ದಾರೆ. ನ.16ರವರೆಗೆ ಸುಮಾರು 200 ಫಲಕಕ್ಕೆ ಅನುಮತಿ ನೀಡಿದ್ದಾರೆ. ಆದರೆ, ಹರಿಹರ ಎಇಇಗೆ ಎಲ್ಲೆಲ್ಲಿ ಜಾಹೀರಾತು ಫಲಕಕ್ಕೆ ಅನುಮತಿ ನೀಡಿದ್ದೀರೆಂದು ಪ್ರಶ್ನಿಸಿದರೂ ಉತ್ತರವಿಲ್ಲ. ಲೋಕಾಯುಕ್ತದ ಗಮನಕ್ಕೆ ತಂದು, ಕಾನೂನು ಹೋರಾಟ ಮಾಡುವೆ ಅಂದ ತಕ್ಷಣ, ತಾವೇ ಗಂಡಸರು ಎಂಬಂತೆ ಅಧಿಕಾರಿಗಳು ಜಾಹೀರಾತು ಫಲಕಗಳ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.ಶೇ.90ರಷ್ಟು ಫ್ಲೆಕ್ಸ್, ಹೋರ್ಡಿಂಗ್ಸ್ ಅನಧಿಕೃತವಾಗಿವೆ. ಪ್ರತಿ ಅಡಿಗೆ ತಿಂಗಳಿಗೆ 35 ಪೈಸೆಯಂತೆ ಪಡೆಯಲಾಗುತ್ತದೆ. ಆದರೆ, ಅದೇ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿ ಅಡಿಗೆ ₹23 ಇದೆ. ಇಲ್ಲಿ ನಗರ, ಸ್ಥಳೀಯ ಸಂಸ್ಥೆಗಳಿಗೆ ಬರಬೇಕಾದ ಆದಾಯ ಕಂಡವರ ಪಾಲಾಗುತ್ತಿರುವುದು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್ ಹಾಕಿದವರು ಜಾಹೀರಾತು ಕೊಟ್ಟವರಿಂದ ಕನಿಷ್ಠ ₹3500 ದಿಂದ ₹5 ಸಾವಿರವರೆಗೆ ಹಣ ವಸೂಲು ಮಾಡುತ್ತಿದ್ದ ವಿಚಾರ ಗೊತ್ತಾಗಿದೆ. ಇದೆಲ್ಲದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದರು.
ಸ್ಮಾರ್ಟ್ ಸಿಟಿಯಡಿ 50 ಬಸ್ ಶೆಲ್ಟರ್‌ಗಳಿಂದ ಸುಮಾರು ₹40 ಲಕ್ಷ ಆದಾಯ ಬಂದಿದೆ. ಆದರೆ, ನಗರಾದ್ಯಂತ ಹಾಕಿದ್ದ ಫ್ಲೆಕ್ಸ್, ಹೋರ್ಡಿಂಗ್‌ಗಳಿಂದ ಪಾಲಿಕೆ ಬೊಕ್ಕಸಕ್ಕೆ ಬರಬೇಕಿದ್ದ ಅದೆಷ್ಟೋ ಕೋಟಿ ಹಣ ಕಂಡವರ ಪಾಲಾಗಿದೆ. ಸ್ಮಾರ್ಟ್ ಸಿಟಿ ಬಸ್ ಶೆಲ್ಟರ್‌ಗಳಲ್ಲಿ ನಿಯಮಾನುಸಾರ ಹೆಚ್ಚು ದುಡ್ಡು ಕೊಟ್ಟವರ ಜಾಹೀರಾತು ಕಾಣದಿಂದ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್ ಹಾಕಿ, ಅನ್ಯಾಯ ಮಾಡಲಾಗುತ್ತಿದೆ. ಈಗ ನಾವು ಮಾಹಿತಿ ಕೇಳುತ್ತಿದ್ದಂತೆ ಸುಂದರ ನಗರಕ್ಕಾಗಿ ಫ್ಲೆಕ್ಸ್, ಹೋರ್ಡಿಂಗ್ಸ್ ತೆರವು ಮಾಡಿ, ಅಧಿಕಾರಿಗಳು ಅದರ ಶ್ರೇಯ ತಾವು ಪಡೆಯಲು ಹೊರಟಿದ್ದಾರೆ ಎಂದು ಬಿ.ಪಿ.ಹರೀಶ ಗೌಡ ಆರೋಪಿಸಿದರು.ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ವಿನಾಯಕ ಆರಾಧ್ಯ ಇತರರು ಇದ್ದರು.
- - -ಟಾಪ್ ಕೋಟ್
ಕಾಂಗ್ರೆಸ್ ಆಳ್ವಿಕೆಯಲ್ಲಿ ದಾವಣಗೆರೆಯಲ್ಲಿ ಗುತ್ತಿಗೆದಾರರು ಕಣ್ಣೀರು ಹಾಕುತ್ತಿದ್ದಾರೆ. ವರ್ಕ್ ಆರ್ಡರ್ ಕೊಡದೇ, ಕೆಲಸ ಮಾಡುವಂತೆ ಹೇಳಿ, ನಂತರ ಕಾರ್ಯಾದೇಶ ನೀಡುವಂತಹ ಕೆಲಸ ಆಗುತ್ತಿದೆ. ಇಂತಹ ದೌರ್ಜನ್ಯದ ವಿರುದ್ಧ ನಮ್ಮ ಹೋರಾಟ ನಿರಂತರ ನಡೆಯಲಿದೆ- ಬಿ.ಪಿ.ಹರೀಶ ಗೌಡ, ಬಿಜೆಪಿ ಶಾಸಕ, ಹರಿಹರ
- - - -20ಕೆಡಿವಿಜಿ65:ದಾವಣಗೆರೆಯಲ್ಲಿ ಸೋಮವಾರ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.