ಸಾರಾಂಶ
ಕೊಪ್ಪಳ: ನಿರ್ಗತಿಕ ಮತ್ತು ಮಾನಸಿಕ ಅಸ್ವಸ್ಥ, ಅನಾರೋಗ್ಯ ಪೀಡಿತ ಇಬ್ಬರು ಮಹಿಳೆಯರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸಖಿ–ಒನ್ ಸ್ಟಾಫ್ ಸೆಂಟರ್‌ನಿಂದ ನೆರವು ಸಿಕ್ಕಿದೆ.
ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಶೇಖರ ಸಿ. ನಿರ್ದೇಶನದಂತೆ ಕಾರ್ಯಾಚರಣೆ ಜರುಗಿದೆ.ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲಕಾರಿ ರಾಮಪ್ಪ ಒಡೆಯರ್ ಅವರು, ಜಿಲ್ಲಾ ನ್ಯಾಯಾಲಯದ ವ್ಯವಸ್ಥಾಪಕ ಬಸಪ್ಪ ಕಟ್ಟೇರ್, ಮಹಿಳಾ ಪೊಲೀಸ್ ಠಾಣೆ ಕೊಪ್ಪಳದ ಆರಕ್ಷಕ ನಿರೀಕ್ಷಕ ಆಂಜನೇಯ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಅನ್ನಪೂರ್ಣಾ, ಜಿಲ್ಲಾಸ್ಪತ್ರೆಯ ಮನೋತಜ್ಞ ಡಾ. ಓಂಕಾರ್, ಮಹಿಳಾ ಸಬಲೀಕರಣ ಘಟಕದ ಟೆಂಡರ್ ಸ್ಪೆಷಲಿಸ್ಟ್ ಫಾತಿಮಾ, ಸಖಿ ಘಟಕದ ಆಡಳಿತ ಅಧಿಕಾರಿ ಯಮುನಾ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಹೊಸಪೇಟೆ ರಸ್ತೆಯ ಬೇವಿನಾಳ ಅಂಡರ್ ಬ್ರಿಡ್ಜ್‌ನ ಬಳಿಗೆ ತೆರಳಿ, ಅಲ್ಲಿ ಸುಮಾರು ಎರಡು ತಿಂಗಳಿಂದ ರಸ್ತೆಯ ಬದಿಯಲ್ಲಿ ವಾಸವಾಗಿದ್ದ ಸ್ಥಳದ ಪರಿಶೀಲನೆ ನಡೆಸಿದರು. ಈ ಸ್ಥಳದಿಂದ ಜು. 17ರಂದು ನಿರ್ಗತಿಕ ಮಾನಸಿಕ ಅಸ್ವಸ್ಥೆ ಮಹಿಳೆಯನ್ನು ಕರೆದೊಯ್ದು ರಕ್ಷಣೆ ಮಾಡಲಾಗಿದೆ ಎಂದು ಸಖಿ ಘಟಕದ ಅಧಿಕಾರಿಗಳು ತಿಳಿಸಿದರು. ಬಳಿಕ ತಂಡವು ಮಹಿಳೆ ಇರುವ ಸಖಿ ಘಟಕಕ್ಕೆ ಭೇಟಿ ನೀಡಿತು. ಈ ವೇಳೆ ನ್ಯಾಯಾಧೀಶ ವಡೆಯರ್ ಅವರು ಆ ಮಹಿಳೆಯ ಆರೋಗ್ಯದ ಬಗ್ಗೆ ವಿಚಾರಣೆ ಮಾಡಿದರು. ಸ್ಥಳಕ್ಕೆ ಜಿಲ್ಲಾಸ್ಪತ್ರೆಯ ಮನೋರೋಗ ತಜ್ಞರನ್ನು ಕರೆಸಿದರು. ಈ ಮಹಿಳೆಯ ಆರೋಗ್ಯದ ಕುರಿತು ವರದಿ ಮಾಡುವಂತೆ ವೈದ್ಯಾಧಿಕಾರಿಗೆ ನ್ಯಾಯಾಧೀಶರು ಆದೇಶ ಮಾಡಿದರು. ಇದೆ ವೇಳೆ ನ್ಯಾಯಾಧೀಶರು ಸ್ಥಳಕ್ಕೆ ಮಹಿಳಾ ಪೊಲೀಸ್ ಠಾಣೆಯ ಸಿಪಿಐ ಆರಕ್ಷಕ ನಿರೀಕ್ಷಕರನ್ನು ಕರೆಸಿದರು. ನಿರ್ಗತಿಕ ಮಹಿಳೆಯರ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲೆ ಮಂಡನೆ ಮಾಡುವಂತೆ ನಿರ್ದೇಶನ ನೀಡಿದರು.ಬಳಿಕ ತಂಡದ ಅಧಿಕಾರಿಗಳು ಹಿಟ್ನಾಳ ಕ್ರಾಸ್ ಹೈವೇ ಬದಿಯಲ್ಲಿ ನಿರ್ಜನ ಪ್ರದೇಶದ ಕಸದ ತೊಟ್ಟಿಯ ಪಕ್ಕದಲ್ಲಿ ವಾಸಿಸುತ್ತಿದ್ದ ಮಹಿಳೆಯನ್ನು ರಕ್ಷಣೆ ಮಾಡಿದರು. ಸುತ್ತಲಿನ ಜನರು ಅವಳ ದುಸ್ಥಿತಿ ಕಂಡು ಮರುಗಿ, ಆಕೆಗೆ ನೀರಿನ ಬಾಟಲ್, ಊಟ ನೀಡುತ್ತಿದ್ದರು. ಮಳೆ ಬಂದಾಗ ಹತ್ತಿರದ ದೇವಸ್ಥಾನದ ಬಳಿ ಅಥವಾ ಮರದ ಕೆಳಗೆ ಹೋಗುತ್ತಾಳೆ. ಮೂಲತ ಈ ಮಹಿಳೆ ಪುಣೆ ಜಿಲ್ಲೆಯವಳು. ಪ್ರೇಮ ವಿವಾಹವಾಗಿದ್ದು, ಗಂಡನು ತೀರಿಕೊಂಡು ಕೆಲವು ವರ್ಷಗಳಾಗಿವೆ. ಗಂಡನ ಅಕಾಲಿಕ ಮರಣದಿಂದಾಗಿ ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ ಎಂಬು ಪರಿಶೀಲನೆ ವೇಳೆಯಲ್ಲಿ ತಿಳಿದುಬಂದಿದೆ.
ಭದ್ರತೆ: ಬಾಧಿತ ಮಹಿಳೆಯರಿಗೆ ಉಚಿತ ವೈದ್ಯಕೀಯ ತಪಾಸಣೆ, ಮನೋಚಿಕಿತ್ಸೆ, ಪೊಲೀಸ್ ಹಾಗೂ ಜಿಲ್ಲಾ ಆಸ್ಪತ್ರೆಯ ನೆರವಿನೊಂದಿಗೆ ಕೊಪ್ಪಳದ ಸಖಿ ಘಟಕದಲ್ಲಿ ಪೋಷಣೆ ಮತ್ತು ರಕ್ಷಣೆ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ.ತಾತ್ಕಾಲಿಕ ಆಶ್ರಯ: ಸಖಿ ಘಟಕದ ಅಧಿಕಾರಿ ಯಮುನಾ ಮತ್ತು ತಂಡದವರು ಇಬ್ಬರು ಮಹಿಳೆಯರಿಗೆ ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ತಾತ್ಕಾಲಿಕ ಆಶ್ರಯ, ವೈಯಕ್ತಿಕ ಶುಚಿತ್ವದ ಅಡಿಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಕ್ರಮ ವಹಿಸಿದರು.