ಬೆಂಗಳೂರಿಗರು ಕನ್ನಡ ಕಲಿತು ಮಾತನಾಡಿದರೆ ಬೆಂಗಳೂರು ಜಲ ಮಂಡಳಿಯಿಂದ ನೀರು ಕೊಟ್ಟಿದ್ದು ಸಾರ್ಥಕವಾಗುತ್ತದೆ. ಕಾವೇರಿ ನೀರು ಕುಡಿಯುವವರೆಲ್ಲ ಕನ್ನಡ ಭಾಷೆ ಮಾತನಾಡಬೇಕು ಎಂಬುದು ನನ್ನ ಇಚ್ಛೆ. ನನ್ನ ಪ್ರಶ್ನೆಯನ್ನು ಜನ ಹೇಗೆ ಸ್ವೀಕರಿಸುತ್ತಾರೆ ತಿಳಿಯದು ಎಂದರು.

ಕನ್ನಡಪ್ರಭ ವಾರ್ತೆ ಹಲಗೂರು

ಕಾವೇರಿ ನೀರು ಕುಡಿದು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅನ್ಯ ಭಾಷಿಕ ಜನರು ಕನ್ನಡ ಭಾಷೆಯನ್ನು ಕಲಿತು ಮಾತನಾಡಬೇಕು ಎಂದು ಬೆಂಗಳೂರು ಜಲಮಂಡಳಿ ಕಾವೇರಿ ಕಾರ್ಯಾಚರಣೆ ಮತ್ತು ನಿರ್ವಹಣೆ ಮುಖ್ಯ ಅಭಿಯಂತರ ಎ.ರಾಜಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.

ತೊರೆಕಾಡನಹಳ್ಳಿಯಲ್ಲಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸ್ಥಳೀಯ ಸಮಿತಿ ವತಿಯಿಂದ 2026ನೇ ನುಡಿಹಬ್ಬ (ಕಾವೇರಿ ಮಡಿಲಿನಲ್ಲಿ ನಿತ್ಯೋತ್ಸವ)ದಲ್ಲಿ ಮಾತನಾಡಿದರು.

ತೊರೆಕಾಡನಹಳ್ಳಿಯಿಂದ ಕಾವೇರಿ ನದಿ ನೀರು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಸರಬರಾಜಾಗುತ್ತದೆ. ಅಲ್ಲಿ ವಾಸಿಸುವ ಒಂದು ಕೋಟಿ ನಲ್ವತ್ತು ಲಕ್ಷ ಜನರಿಗೆ ಕಾವೇರಿ ನೀರು ಬೇಕಿದೆ. ಆದರೆ, ನಮ್ಮ ನಾಡಿನ ಭಾಷೆ, ಕನ್ನಡ ಭಾಷೆ ಬಗ್ಗೆ ನಿರ್ಲಕ್ಷ್ಯ ಸರಿಯಲ್ಲ. ಕನ್ನಡ ಭಾಷೆ ಕೇವಲ ಕಾದಂಬರಿಗಳಲ್ಲಿ ಮತ್ತು ಪುಸ್ತಕಗಳಲ್ಲಿದ್ದರೆ ಸಾಲದು. ಅದನ್ನು ಎಲ್ಲರೂ ಸಾಮಾನ್ಯ ಭಾಷೆಯಾಗಿ ಮಾತನಾಡಿದರೆ ನಾಡು, ಭಾಷೆಗೆ ಗೌರವ ಕೊಟ್ಟಂತಾಗುತ್ತದೆ ಎಂದರು.

ಜಲ ಮಂಡಳಿ ನೌಕರರ ಸಂಘದ ಅಧ್ಯಕ್ಷ ಎ.ಗೋವಿಂದರಾಜ್ ಅವರು ಹಲವು ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅದನ್ನು ಪೂರೈಸಲು ಶ್ರಮಿಸುತ್ತೇನೆ. ನಾನು ಎಇಇ ಮತ್ತು ಎಇ ಆಗಿ ಕೆಲಸ ಮಾಡಿದ್ದೆ. ನನಗೆ ಹೊರಗೆ ಕೆಲಸ ಮಾಡುವ ನೌಕರರ ಸಿಬ್ಬಂದಿಯವರ ಕಷ್ಟ , ಸಮಸ್ಯೆ ಏನೆಂದು ಗೊತ್ತು. ಜಲಮಂಡಳಿಯಲ್ಲಿ ವಸತಿ ಗೃಹಗಳು ತುಂಬಾ ಹಳೆಯದಾಗಿವೆ. ಬೆಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸುವ ನೌಕರರು ಇಲ್ಲಿ ಈ ಹಳೆ ವಸತಿ ಗೃಹಗಳಲ್ಲಿ ವಾಸಿಸುತ್ತಿದ್ದಾರೆ ಎಂದರು.

ನಾನು ಮುಖ್ಯ ಇಂಜಿನಿಯರ್ ಆಗಿ ಬಂದಾಗ ಹೊಸ ವಸತಿ ಗೃಹಗಳನ್ನು ಕಟ್ಟಿಸಬೇಕೆಂಬ ಆಸೆ ಇತ್ತು. ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ 5ನೇ ಹಂತದ ಕಾಮಗಾರಿಗೆ ಕೆಲವು ಹಳೆಯ ವಸತಿ ಗೃಹಗಳನ್ನು ಒಡೆಯಲಾಯಿತು. ಮುಂದೆ ಇರುವ ಹಳೆ ವಸತಿ ಗೃಹಗಳನ್ನು ಒಡೆದು ಹಾಕಿ ಆ ಜಾಗದಲ್ಲಿ ಒಂದು ಯೂನಿಟ್ ಗೆ 12 ಮನೆ ಬರುವ ಹಾಗೆ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದರು.

ಬೆಂಗಳೂರಿಗರು ಕನ್ನಡ ಕಲಿತು ಮಾತನಾಡಿದರೆ ಬೆಂಗಳೂರು ಜಲ ಮಂಡಳಿಯಿಂದ ನೀರು ಕೊಟ್ಟಿದ್ದು ಸಾರ್ಥಕವಾಗುತ್ತದೆ. ಕಾವೇರಿ ನೀರು ಕುಡಿಯುವವರೆಲ್ಲ ಕನ್ನಡ ಭಾಷೆ ಮಾತನಾಡಬೇಕು ಎಂಬುದು ನನ್ನ ಇಚ್ಛೆ. ನನ್ನ ಪ್ರಶ್ನೆಯನ್ನು ಜನ ಹೇಗೆ ಸ್ವೀಕರಿಸುತ್ತಾರೆ ತಿಳಿಯದು ಎಂದರು.

ನಂತರ ಸೂಪರ್ ಸ್ಟಾರ್ ಮೆಲೋಡೀಸ್ ಮೈಸೂರ್ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಈವೇಳೆ ಆಡಳಿತಾಧಿಕಾರಿ ಮದನ್ ಮೋಹನ್, ಮುಖ್ಯ ಇಂಜಿನಿಯರ್ ರಾಜಶೇಖರ್, ಕುವೆಂಪು ವಿವಿ ನಿರ್ದೇಶಕಿ ಲೋಲಾಕ್ಷಿ,, ಪ್ರಧಾನ ಇಂಜಿನಿಯರ್ ದಲಾಯತ್, ಮುಖ್ಯ ಲೆಕ್ಕಾಧಿಕಾರಿ ಜೆ.ಎಸ್.ಸುಬ್ಬರಾಮಯ್ಯ, ಮುಖ್ಯ ಇಂಜಿನಿಯರ್ ಜಯಶಂಕರ್, ಅಪರ ಮುಖ್ಯ ಇಂಜಿನಿಯರ್ ರಾಘವೇಂದ್ರ, ಗೋವಿಂದರಾಜು, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೂಡಲ ಸಂಗಮ, ಗಿರಿಗೌಡ, ಪ.ಜಾ. ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಚೇತನ್, ಎಇಇ ನರೇಶ್, ಮೊಹಮದ್ ಹನೀಫ್, ರವಿಚಂದ್ರ, ಚಂದ್ರಮೋಹನ್, ಮಹೇಂದ್ರರಾಜು, ವರದರಾಯಸ್ವಾಮಿ, ಕಾರ್ತಿಕ್ ಭಾಗವಹಿಸಿದ್ದರು.