ತೆಂಗಿಗೆ ಇನ್ನೂ ಹೆಚ್ಚಿನ ಮಾನ್ಯತೆ ಸಿಗಲಿ: ವೆಂಕಟಾಚಲ ಭಟ್

| Published : Sep 04 2024, 01:52 AM IST

ಸಾರಾಂಶ

೨೦೦೯ರಲ್ಲಿ ವಿಶ್ವ ತೆಂಗು ದಿನವನ್ನು ಏಷ್ಯಯನ್ ಫೆಸಿಪಿಕ್ ಕೋಕೊನಟ್ ಕಮ್ಯುನಿಟಿಯವರು ಪ್ರಥಮವಾಗಿ ಆಚರಿಸಿದರು. ಅಂದಿನಿಂದ ವಿಶ್ವ ತೆಂಗು ದಿನಾಚರಣೆ ಜಾರಿಗೆ ಬಂದಿದೆ.

ಕುಮಟಾ: ತೆಂಗಿಗೆ ಇನ್ನೂ ಹೆಚ್ಚಿನ ಮಾನ್ಯತೆ, ಮಹತ್ವ ಹಾಗೂ ಮೌಲ್ಯಬೆಂಬಲ ಸಿಗಬೇಕಿದೆ ಎಂದು ಪ್ರಗತಿಪರ ಕೃಷಿಕ ವೆಂಕಟಾಚಲ ಭಟ್ ತಿಳಿಸಿದರು.

ಇಲ್ಲಿನ ಕೃಷಿ ಇಲಾಖೆಯ ಆವಾರದಲ್ಲಿರುವ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಕಾರ್ಯಾಲಯದಲ್ಲಿ ವಿಶ್ವ ತೆಂಗು ದಿನಾಚರಣೆ ಕಾರ್ಯಕ್ರಮವನ್ನು ತೆಂಗಿನ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದ ಮಾತನಾಡಿ, ಕಲ್ಪವೃಕ್ಷವೆಂದೇ ವರ್ಣಿತವಾದ ತೆಂಗು ದೈನಂದಿನ ಪೂಜೆ, ಆಹಾರ ಸೇರಿದಂತೆ ಸಂಪೂರ್ಣ ಮರವೇ ಬಹುಪಯೋಗಿಯಾಗಿದೆ ಎಂದರು.

ತೋಟಿಗರ ಪಾಲಿಗೆ ಪ್ರಮುಖ ಆದಾಯ ಬೆಳೆಯಾಗಿರುವ ತೆಂಗು ಬೆಳೆದವರಿಗೆ ಬಹುಕಾಲದವರೆಗೆ ಉಪಯೋಗಿಯಾಗಿರುತ್ತದೆ. ೨೦೦೯ರಲ್ಲಿ ವಿಶ್ವ ತೆಂಗು ದಿನವನ್ನು ಏಷ್ಯಯನ್ ಫೆಸಿಪಿಕ್ ಕೋಕೊನಟ್ ಕಮ್ಯುನಿಟಿಯವರು ಪ್ರಥಮವಾಗಿ ಆಚರಿಸಿದರು. ಅಂದಿನಿಂದ ವಿಶ್ವ ತೆಂಗು ದಿನಾಚರಣೆ ಜಾರಿಗೆ ಬಂದಿದೆ ಎಂದರು.

ನಿವೃತ್ತ ಕೃಷಿ ಅಧಿಕಾರಿ ಹಾಗೂ ಎವಿಪಿ ಸಂಸ್ಥೆಯ ಮುಖ್ಯ ತಾಂತ್ರಿಕ ಸಲಹೆಗಾರ ಎಸ್.ವಿ. ಹೆಗಡೆ ಭದ್ರನ್ ಮಾತನಾಡಿ, ತೆಂಗು ಕಲ್ಪವೃಕ್ಷ ಎಂದು ಕರೆಯಲ್ಪಡುತ್ತಿದ್ದು, ಇದರ ಉಪಯೋಗ ಇನ್ನು ಹೆಚ್ಚಿಗೆ ಆಗಬೇಕು. ಸ್ಥಳೀಯವಾಗಿ ತೆಂಗಿನ ಮೌಲ್ಯ ವರ್ಧನೆ ಮತ್ತು ಮಾರುಕಟ್ಟೆ ನಿರ್ಮಾಣಕ್ಕೆ ಇಂಥ ಪೂರಕ ಕಾರ್ಯಕ್ರಮಗಳು ಹೆಚ್ಚಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಗಣಪತಿ ನಾಯ್ಕ, ತೆಂಗಿನ ಸಂಬಂಧಿತ ಉತ್ಪನ್ನಗಳ ಸಮಗ್ರ ಅಭಿವೃದ್ಧಿಗಾಗಿ ೧೯೮೧ರ ಜ. ೧೨ರಂದು ತೆಂಗು ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದಿತು. ನಮ್ಮ ರೈತ ಉತ್ಪಾದಕ ಕಂಪನಿಯಿಂದ ತೆಂಗು ಅಭಿವೃದ್ಧಿ ಮಂಡಳಿಯ ಯೋಜನೆಗಳನ್ನು ಕರಾವಳಿ ತಾಲೂಕುಗಳಿಗೆ ನೀಡುತ್ತಿದ್ದೇವೆ. ಎರೆಹುಳು ತಯಾರಿಕೆ ಘಟಕ, ಮರ ಏರುವವರಿಗೆ ತರಬೇತಿ, ವಿಮೆ ಹಾಗೂ ತೆಂಗಿನ ಮರಗಳಿಗೆ ಪೋಷಕಾಂಶ ನೀಡುವ ಕಾರ್ಯಕ್ರಮವನ್ನು ರೈತರಿಗೆ ನೀಡುತ್ತಿದ್ದೇವೆ ಎಂದರು.ಓಷಿಯನ್ ಎಡ್ಜ್ ಮುಖ್ಯಸ್ಥ ನಿತಿನ್ ಶ್ರೇಯನ್ ಮಾತನಾಡಿದರು. ನಿವೃತ್ತ ಕೃಷಿ ಅಧಿಕಾರಿ ಸಿ.ಎಂ. ಪಟಗಾರ, ಎವಿಪಿ ಸಂಸ್ಥೆಯ ನಿರ್ದೇಶಕ ಕೃಷ್ಣ ನಾಯ್ಕ, ತಿಮ್ಮಣ್ಣ ಭಟ್, ಈಶ್ವರ ಕೊಡಿಯಾ, ಸದಾನಂದ ಪಟಗಾರ, ಸಿಬ್ಬಂದಿ ರಶ್ಮಿ, ಪ್ರತಿಭಾ, ಲೋಹಿತ್ ಇತರರು ಇದ್ದರು. ತಿಮ್ಮಣ್ಣ ಭಟ್ ಸ್ವಾಗತಿಸಿದರು. ಧನಂಜಯ ನಾಯ್ಕ ವಂದಿಸಿದರು.