ಹೂವಿನಹಡಗಲಿ: ಪರಿಸರ ವಿನಾಶದಿಂದ ಶುದ್ಧ ಗಾಳಿ ಇಲ್ಲದೇ ಆಮ್ಲಜನಕವನ್ನು ಖರೀದಿಸುವ ಸ್ಥಿತಿಗೆ ಬಂದು ತಲುಪಿದ್ದೇವೆ. ಪ್ರತಿಯೊಬ್ಬರು ಗಿಡ ಮರಗಳನ್ನು ಬೆಳೆಸುವುದು ನಮ್ಮ ಉಸಿರಾಗಬೇಕಿದೆ ಎಂದು ತಾಪಂ ಇಒ ಜಿ.ಪರಮೇಶ್ವರ ಹೇಳಿದರು.

ತಾಲೂಕಿನ ಮಿರಾಕೊರ್ನಹಳ್ಳಿ ಗ್ರಾಮದ ಶರಣ ಬಸವೇಶ್ವರ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಅರಣ್ಯ ಇಲಾಖೆ, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿ ನೆಟ್ಟು ಮಾತನಾಡಿದರು.

ಇಂದು ಅಪಾರ ಪ್ರಮಾಣದಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ. ಇದರ ಪರಿಣಾಮ ಭೂಮಿಯ ಮೇಲೆ ಜೀವಿಸುವ ಎಲ್ಲ ಪ್ರಾಣಿ, ಪಶು, ಪಕ್ಷಿಗಳಿಗೂ ಕಂಟಕ ಎದುರಾಗುತ್ತಿದೆ. ಜತೆಗೆ ಸಕಾಲದಲ್ಲಿ ಮಳೆಯೂ ಬರುತ್ತಿಲ್ಲ. ಇದರಿಂದ ಭೂಮಿಯ ಮೇಲಿನ ತಾಪಮಾನ ಹೆಚ್ಚಳವಾಗುತ್ತಿದೆ. ಇಂತಹ ಪರಿಸ್ಥಿತಿಯಿಂದ ಹೊರಗೆ ಬರಲು ನಾವೆಲ್ಲ ನಮ್ಮ ಜಮೀನು, ಬಯಲು ಜಾಗ, ಸರ್ಕಾರಿ ಕಚೇರಿಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಗಿಡ ಮರಗಳನ್ನು ಹೆಚ್ಚು ಬೆಳೆಸಬೇಕಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಕೆ. ಮಾತನಾಡಿ, ಪ್ರತಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ಮತ್ತು ಪ್ರಜ್ಞೆ ಮಾಡಿಸುವ ಅಗತ್ಯವಿದೆ. ಪ್ರತಿ ಶಾಲಾ ಕಾಲೇಜು ಆವರಣದಲ್ಲಿ ಹೆಚ್ಚು ಗಿಡ ಮರಗಳನ್ನು, ಬೆಳೆಸಲು ವಿದ್ಯಾರ್ಥಿಗಳಿಗೆ ಶಿಕ್ಷಕರು ಪ್ರೇರೇಪಿಸಬೇಕಿದೆ. ಪ್ರತಿ ವರ್ಷವೂ ವಿಶ್ವ ಪರಿಸರ ದಿನಾಚರಣೆ ಮಾಡಿ ಒಂದು ಗಿಡ ಮರ ನೆಟ್ಟರೆ ಸಾಲದು, ಅದನ್ನು ಅರ್ಥಪೂರ್ಣವಾಗಿ ಆಚರಿಸಬೇಕಾದರೆ ಪ್ರತಿಯೊಬ್ಬರೂ ಗಿಡ ಮರಗಳ ಉಳಿಸಿ ಬೆಳೆಸುವ ಪ್ರಯತ್ನ ಎಲ್ಲರಿಂದಲೂ ಆಗಬೇಕಿದೆ ಎಂದರು.

ಸಾಮಾಜಿಕ ವಲಯ ಅರಣ್ಯಾಧಿಕಾರಿ ಕಿರಣ್‌ಕುಮಾರ ಕಲ್ಲಮ್ಮನವರ್‌, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಆರ್‌.ಉಮೇಶ್ ನಾಯ್ಕ, ಮುಖ್ಯ ಗುರು ಸೂರ್ಯಕಾಂತ್, ಎಸ್‌ಡಿಎಂಸಿ ಅಧ್ಯಕ್ಷ ಮಹಮದ್ ರಫಿ, ಶಾಲಾ ಶಿಕ್ಷಕರು, ಮಕ್ಕಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.


ಹೊಳಗುಂದಿ ಸರ್ಕಾರಿ ಶಾಲೆಯಲ್ಲಿ ಸಸಿ ವಿತರಣೆ:

ತಾಲೂಕಿನ ಹೊಳಗುಂದಿ ಬಾವಿಹಳ್ಳಿ ಗ್ರಾಮದ ಜಾಗೃತಿ ಸ್ನೇಹ ಬಳಗವು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರೌಢ, ಪ್ರಾಥಮಿತ ಶಾಲೆ ಮತ್ತು ಅಂಗನವಾಡಿ ಕೇಂದ್ರದಲ್ಲಿ ಸಸಿಗಳನ್ನು ನೆಟ್ಟರು.

ಮಾಜಿ ಗ್ರಾಪಂ ಸದಸ್ಯ ಎಚ್‌.ಎಂ. ಸ್ವರೂಪಾನಂದ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ, ಮೂಡಿಸಬೇಕೆಂಬ ಉದ್ದೇಶದಿಂದ ಶಾಲಾ ಮಕ್ಕಳಿಂದ ಸಸಿ ನೆಡಲಾಯಿತು. ಇದರಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಜಾಗೃತಿ ಮೂಡಿಸಿದ್ದೇವೆ ಎಂದರು.

ಎಂ.ಬಾಷಾಸಾಹೇಬ್, ಹಳ್ಳಿಕೇರಿ ಮಲ್ಲಿಕಾರ್ಜುನ, ಎಸ್.ಬಿ. ವಿರೂಪಾಕ್ಷಪ್ಪ, ಎಂ.ನಾಗನಗೌಡ, ಕೆ.ಗವಿಸಿದ್ದಪ್ಪ, ಎನ್.ಜಯಪ್ಪ, ಕೆ.ಮಂಜುನಾಥ, ಟಿ.ನವೀನ ಕುಮಾರ, ಅಂಗನವಾಡಿ ಕಾರ್ಯಕರ್ತೆ ಎಂ.ಗಂಗಮ್ಮ ಇದ್ದರು.