ಕುಷ್ಟಗಿ: ತಾಲೂಕು ಕೇಂದ್ರ ಕುಷ್ಟಗಿ ನಗರವನ್ನು ಹಸಿರು ನಗರವನ್ನಾಗಿ ಮಾಡಲು ಪ್ರತಿಯೊಬ್ಬರು ಪಣ ತೊಡಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಆರ್.ಮಂಜುನಾಥ ಅಭಿಪ್ರಾಯಪಟ್ಟರು.

ಸಮೀಪದ ನಿಡಶೇಸಿ ಕೆರೆಯ ದಡದಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ಅರಣ್ಯ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ತಾಪಂ,ತಾಲೂಕಾಡಳಿತ ಹಾಗೂ ಪೊಲೀಸ್‌ ಇಲಾಖೆಯಿಂದ ನಡೆದ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ಸಂರಕ್ಷಣೆ ಇಂದಿನ ಕಾಲಘಟ್ಟದ ಅತ್ಯಂತ ದೊಡ್ಡ ಸವಾಲಾಗಿದ್ದು, ಪ್ರಕೃತಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದು ಹೇಳಿದರು.

ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ, ಜಲಮೂಲಗಳ ಮಾಲಿನ್ಯ ಹಾಗೂ ಪರಿಸರದ ಮೇಲೆ ಹೆಚ್ಚುತ್ತಿರುವ ಒತ್ತಡದಿಂದ ಹವಾಮಾನ ವೈಪರೀತ್ಯಗಳು ಉಂಟಾಗುತ್ತಿವೆ. ಇದರ ಪರಿಣಾಮ ಮಾನವ ಜೀವನ ಸೇರಿದಂತೆ ಸಮಸ್ತ ಜೀವಸಂಕುಲ ಸಂಕಷ್ಟಕ್ಕೆ ಸಿಲುಕುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಟ್ಟು ಅದರ ಪೋಷಣೆಯ ಹೊಣೆ ಹೊತ್ತುಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ನೀರಿನ ಸಂರಕ್ಷಣೆಗೆ ಒತ್ತು ನೀಡಬೇಕು. ಪರಿಸರ ರಕ್ಷಣೆಯಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.


ಡಾ.ಕೆ.ಎಸ್‌.ರೆಡ್ಡಿ ಮಾತನಾಡಿ, ಪರಿಸರ ಮತ್ತು ಆರೋಗ್ಯ ಪರಸ್ಪರ ಅವಿನಾಭಾವ ಸಂಬಂಧ ಹೊಂದಿವೆ, ವಾಯು, ನೀರು ಹಾಗೂ ಭೂಮಿಯ ಮಾಲಿನ್ಯ ಹೆಚ್ಚಾಗುತ್ತಿರುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಶುದ್ಧ ಗಾಳಿ, ಶುದ್ಧ ನೀರು ಮತ್ತು ಹಸಿರು ಪರಿಸರವು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಗತ್ಯವಾಗಿದ್ದು, ಪರಿಸರ ಕಾಳಜಿ ಪ್ರತಿಯೊಬ್ಬರ ಜೀವನ ಶೈಲಿಯ ಭಾಗವಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನ್ಯಾಯಾಧೀಶ ಎಂ.ಎಲ್.ಪೂಜೇರಿ, ಮಹಾಂತೇಶ ಚೌವಲಗಿ, ತಹಸೀಲ್ದಾರ ಗುರುರಾಜ ಚಲವಾದಿ, ತಾಪಂ ಇಒ ಅಮರೇಶ, ಸಿಪಿಐ ವಿಶ್ವನಾಥ ಹಿರೇಗೌಡರ, ಪಿಎಸ್ಐ ಹನಮಂತಪ್ಪ ತಳವಾರ್, ಶಿವರಾಜ ಮೇಟಿ, ಶಿವಕುಮಾರ ಜಿ,ಇಂದಿರಾ ಸುಹಾಸಿನಿ, ಎಲ್‌ ರಾಯನಗೌಡ, ಶಶಿಧರ ಶೆಟ್ಟರ್‌, ಶಾರದಾ ಶೆಟ್ಟರ್‌, ಡಾ. ಪಾರ್ವತಿ ಪಳೋಟಿ, ವಂದನಾ ಗೋಗಿ, ಡಾ. ರವಿಕುಮಾರ ದಾನಿ, ಮಹಾಂತಯ್ಯ ಅರಳೇಲಿಮಠ, ವೀರೇಶ ಬಂಗಾರ ಶೆಟ್ಟರ್, ದೇವೇಂದ್ರಪ್ಪ ಬಳೂಟಗಿ, ಶ್ರೀಕಾಂತಗೌಡ ಪಾಟೀಲ, ಪಿಡಿಒ ಶ್ರೀಶೈಲ ಪೋಲೇಸಿ ಸೇರಿದಂತೆ ಅನ್ನದಾನೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗ್ಲೋಬಲ್‌ ಶಾಲೆ ವಿದ್ಯಾರ್ಥಿಗಳು. ವಿವಿಧ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.