ನಮ್ಮ ಮಂಡ್ಯ ಜಿಲ್ಲೆ ವಿಶ್ವದಲ್ಲಿಯೇ ಅತೀ ಹೆಚ್ಚು ಕನ್ನಡ ಮಾತನಾಡುವ ಜನರಿರುವ ಜಿಲ್ಲೆ ಎಂಬ ಕೀರ್ತಿಗೆ ಭಾಜನವಾಗಿದೆ. ಕನ್ನಡ ಭಾಷೆಯನ್ನು ನಿತ್ಯ ಮಾತನಾಡುತ್ತ ಭಾಷಾಭಿಮಾನಿಗಳಾಗಬೇಕು, ಕನ್ನಡ ಭಾಷೆ ವಿಶ್ವ ಭಾಷೆಯಾಗಿ ಬೆಳೆದು ಬೆಳಗಲಿ, ಪ್ರಪಂಚದಾದ್ಯಂತ ಭಾಷೆ ಬೆಳೆಸಲು ದುಡಿಯಬೇಕಿದೆ.
ಮದ್ದೂರು:
ಯುವಜನರು ಸದಾ ನಾಡು, ನುಡಿ, ನೆಲ, ಜಲ ಹಾಗೂ ಗ್ರಾಮಗಳ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ದುಡಿಯುವ ಮೂಲಕ ಮಾತೃಭೂಮಿಯ ಋಣದಿಂದ ಮುಕ್ತರಾಗಬೇಕಿದೆ ಎಂದು ಸಾಹಿತಿ ಸಿ.ಎಂ. ಕ್ರಾಂತಿಸಿಂಹ ಹೇಳಿದರು.ತಾಲೂಕಿನ ಯಡವನಹಳ್ಳಿಯಲ್ಲಿ ಶ್ರೀಕಸ್ತೂರಿ ಕನ್ನಡ ಗೆಳೆಯರ ಬಳಗ ಉದ್ಘಾಟಿಸಿ ಮಾತನಾಡಿ, ನಮ್ಮ ಮಂಡ್ಯ ಜಿಲ್ಲೆ ವಿಶ್ವದಲ್ಲಿಯೇ ಅತೀ ಹೆಚ್ಚು ಕನ್ನಡ ಮಾತನಾಡುವ ಜನರಿರುವ ಜಿಲ್ಲೆ ಎಂಬ ಕೀರ್ತಿಗೆ ಭಾಜನವಾಗಿದೆ ಎಂದರು.
ಕನ್ನಡ ಭಾಷೆಯನ್ನು ನಿತ್ಯ ಮಾತನಾಡುತ್ತ ಭಾಷಾಭಿಮಾನಿಗಳಾಗಬೇಕು, ಕನ್ನಡ ಭಾಷೆ ವಿಶ್ವ ಭಾಷೆಯಾಗಿ ಬೆಳೆದು ಬೆಳಗಲಿ, ಪ್ರಪಂಚದಾದ್ಯಂತ ಭಾಷೆ ಬೆಳೆಸಲು ದುಡಿಯಬೇಕಿದೆ. ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರ ಕೂಟರು, ಹೊಯ್ಸಳರು, ವಿಜಯನಗರ ಅರಸರು, ಯಲಹಂಕ ನಾಡಪ್ರಭುಗಳು, ಮೈಸೂರು ಒಡೆಯರು ಇನ್ನು ಹಲವರು ಕರುನಾಡನ್ನು ಆಳಿ ಕನ್ನಡ ಭಾಷೆಯ ಬೆಳವಣೆಗೆಗೆ ಷ್ರೋತ್ಸಾಹ ನೀಡಿದ್ದಾರೆ ಎಂದರು.ರನ್ನ, ಪೊನ್ನ, ಜನ್ನ, ವಚನಕಾರರು, ಸರ್ವಜ್ಞ, ಬಿಎಂಶ್ರೀ, ಪುತಿನಾ ಕುವೆಂಪು, ದ.ರಾ.ಬೇಂದ್ರೆ ತರಾಸು ಇನ್ನೂ ಮುಂತಾದ ಮಹನೀಯರು ಕನ್ನಡ ಭಾಷೆ ಅಭ್ಯೂದಯಕ್ಕಾಗಿ ದುಡಿದ್ದಿದ್ದಾರೆ. ನಾವು ನಮ್ಮ ಕಾಲಘಟ್ಟದಲ್ಲಿ ಕನ್ನಡದ ಬೆಳವಣಿಗೆಗೆ ಶ್ರಮಿಸೋಣ ಎಂದು ಕರೆ ನೀಡಿದರು.
ಬಳಗದ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಮಂಚಯ್ಯ, ಡಿ.ಮಹೇಂದ್ರ, ರಾಮಲಿಂಗಯ್ಯ, ನಿಧಿಯಪ್ಪ, ಸಂಘದ ಗೌರವಾಧ್ಯಕ್ಷ ಎಂ.ಸಂತೋಷ್, ಉಪಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ಹುಚ್ಚಪ್ಪ, ಖಚಾಂಚಿ ಪ್ರಕಾಶ್, ಪದಾಧಿಕಾರಿಗಳಾದ ಚೇತನ್, ಶಿವರಾಜು, ಮಂಜು ಮಂಗಪ್ಪ ಹಲವರು ಭಾಗವಹಿಸಿದ್ದರು.ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಅವಶ್ಯಕ: ಡಾ.ರವಿಶಂಕರ್
ಮದ್ದೂರು: ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮುಳ್ಳಹಳ್ಳಿ ವ್ಯಾಪ್ತಿಯ ಕ್ಷಯ ರೋಗಿಗಳಿಗೆ ಡಾ.ರವಿಶಂಕರ್ ಫುಡ್ ಕಿಟ್ ವಿತರಿಸಿದರು.ನಂತರ ಮಾತನಾಡಿದ ಅವರು, ಈಗಾಗಲೇ ಹೈ ಟೆನ್ ಫಾಸ್ಟನರ್ ಕಂಪನಿ ಸೋಮನಹಳ್ಳಿ ಅವರು ಕಳೆದ ಎರಡು ವರ್ಷಗಳಿಂದ ಪ್ರತಿ ತಿಂಗಳು 50 ಕ್ಷಯ ರೋಗಿಗಳನ್ನು ದತ್ತು ತೆಗೆದುಕೊಂಡು ಫುಡ್ ಕಿಟ್ ಕೊಡುತ್ತಿದ್ದಾರೆ. ಇದು ಹಲವಾರು ರೋಗಿಗಳಿಗೆ ತುಂಬಾ ಉಪಯೋಗವಾಗುತ್ತಿದೆ ಎಂದರು.
ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಅವಶ್ಯಕತೆ ಇದ್ದು, ಬೇರೆ ದಾನಿಗಳು ರೋಗಿಗಳನ್ನು ದತ್ತು ಪಡೆದು ಫುಡ್ ಕಿಟ್ ಕೊಟ್ಟರೆ ಅನುಕೂಲವಾಗುವ ಜೊತೆಗೆ ರೋಗಿಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಹಾಯವಾಗುತ್ತದೆ. ಅಲ್ಲದೇ, ಕ್ಷಯ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಮುಖ್ಯ ಎಂದರು. ಈ ವೇಳೆ ಎಸ್ ಟಿಎಸ್ ಕೆಂಪೇಗೌಡ, ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.