ಜಾಕಿ ಕಂಪನಿಯಿಂದ ಆಸ್ಪತ್ರೆಗೆ ಬಡ ರೋಗಿಗಳ ಆರೋಗ್ಯ ರಕ್ಷಣೆಗಾಗಿ ಉಚಿತವಾಗಿ ಚಿಕಿತ್ಸೆ ನೀಡುವ ಸದುದ್ದೇಶದಿಂದ ಸುಮಾರು 25 ಲಕ್ಷ ರು.ಬೆಲೆ‌ ಬಾಳುವ ಶಸ್ತ್ರ ಚಿಕಿತ್ಸೆಗೆ ಸಹಕರಿಸುವ ಹೊಸ ಯಂತ್ರವನ್ನು ಉಚಿತವಾಗಿ ವಿತರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ಜಾಕಿ ಕಂಪನಿ ಸಹಯೋಗದಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ಸಿಎಆರ್‌ಎಂ ಮಿಷನ್ ಉಪಕರಣವನ್ನು ಕಂಪನಿ ಮುಖ್ಯಸ್ಥರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವಿತರಿಸಿದರು.

ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿ ಮರಡಹಳ್ಳಿ ಬಳಿಯ ಜಾಕಿ ಕಂಪನಿಯಿಂದ ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ ಘಟಕ, ಪೇಜ್ ಆರೋಗ್ಯ ಉಪಕ್ರಮ 2025-26 ಸಿ ಆರ್ಮ್ ಶಸ್ತ್ರ ಚಿಕಿತ್ಸೆಯ ಯಂತ್ರವನ್ನು ಜಾಕಿ ಕಂಪನಿ ಮುಖ್ಯಸ್ಥರಾದ ಜಿಎಂ ರಾಜಶೇಖರ್, ಉಪ ವ್ಯವಸ್ಥಾಪಕ ಶ್ರೀಧರ್, ಪ್ರೊಡಕ್ಷನ್ ವ್ಯವಸ್ಥಾಪಕ ನವೀನ್ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಸರ್ಕಾರಿ ಆಸ್ಪತ್ರೆ ಆಡಳಿತ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಅವರಿಗೆ ಕಂಪನಿ ಮುಖ್ಯಸ್ಥರು ಹಸ್ತಾಂತರ ಮಾಡಿದರು.

ನಂತರ ಜಾಕಿ ಕಂಪನಿ ಜಿಎಂ ರಾಜಶೇಖರ್ ಮಾತನಾಡಿ, ಜಾಕಿ ಕಂಪನಿಯಿಂದ ಆಸ್ಪತ್ರೆಗೆ ಬಡ ರೋಗಿಗಳ ಆರೋಗ್ಯ ರಕ್ಷಣೆಗಾಗಿ ಉಚಿತವಾಗಿ ಚಿಕಿತ್ಸೆ ನೀಡುವ ಸದುದ್ದೇಶದಿಂದ ಸುಮಾರು 25 ಲಕ್ಷ ರು.ಬೆಲೆ‌ ಬಾಳುವ ಶಸ್ತ್ರ ಚಿಕಿತ್ಸೆಗೆ ಸಹಕರಿಸುವ ಹೊಸ ಯಂತ್ರವನ್ನು ಉಚಿತವಾಗಿ ವಿತರಿಸಲಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಗೆ ವಿತರಿಸುತ್ತಿದ್ದೇವೆ.‌ ಇನ್ನುಳಿದ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗೆ ಇಂತಹ ಯಂತ್ರ ವಿತರಿಸಲಾಗುವುದು. ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಈ ಹಿಂದೆ ಒಂದು ತುರ್ತು ವಾಹನವನ್ನು ವಿತರಿಸಿದ್ದೇವೆ. ನಮ್ಮ ಜಾಕಿ ಕಂಪನಿಯ ಉದ್ದೇಶ, ಗ್ರಾಮೀಣ ಪ್ರದೇಶದ ಬಡ ಕುಟುಂಬಸ್ಥರಿಗೆ ಉಚಿತ ಚಿಕಿತ್ಸೆ ನೀಡಲು ನಮ್ಮಿಂದ ಸಹಕಾರ ನೀಡುತ್ತಿದ್ದೇವೆ ಎಂದರು.

ಪಾಂಡವಪುರ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳನ್ನು ಗುರುತಿಸಿ ಜಾಕಿ ಕಂಪನಿಯವರು ಶಸ್ತ್ರ ಚಿಕಿತ್ಸೆಗೆ ಉಪಯುಕ್ತ ಆಗುವಂತಹ ಯಂತ್ರಗಳನ್ನು ವಿತರಿಸುವ ಮೂಲಕ ಸಮಾಜಮುಖಿ ಕರ್ತವ್ಯ ಹಾಗೂ ಸೇವೆ ಪ್ರದರ್ಶಿಸಿದ್ದಾರೆ. ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಈ ಯಂತ್ರದ ಮೂಲಕ ಮೂಳೆ ಮುರಿತ ಶಸ್ತ್ರ ಚಿಕಿತ್ಸೆ ಹಾಗೂ ಬೆನ್ನು, ಕೀಲು ಶಸ್ತ್ರ ಚಿಕಿತ್ಸೆಗಳನ್ನು ಮಾಡಬಹುದು ಎಂದರು.

ಸರ್ಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಎಣ್ಣೆಹೊಳೆಕೊಪ್ಪಲು ಮಂಜುನಾಥ್ ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪರಿಕಲ್ಪನೆ ಮೂಲಕ ಹಳ್ಳಿಗಾಡಿನ ಬಡ ಕುಟುಂಬಸ್ಥರ ರೋಗಿಗಳಿಗೆ ತಾಲೂಕು ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ಸಿಗುವಂತಾಗಬೇಕು. ಬಡ ರೋಗಿಗಳು ಖಾಸಗಿ ಆಸ್ಪತ್ರೆಗೆ ದಾಖಲಾದರೆ ಹೆಚ್ಚು ಹಣ ಬೇಕಾಗುತ್ತದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಯಲ್ಲೇ ಹೆಚ್ಚುವರಿ ಚಿಕಿತ್ಸೆ ದೊರಕಿದರೆ ಹೆಚ್ಚು ಉಪಯುಕ್ತವಾಗುತ್ತದೆ. ಜಾಕಿ ಕಂಪನಿ ಸೇವೆಗೆ ಖುಣಿಯಾಗಿರುತ್ತೇವೆ ಎಂದರು.

ಈ ವೇಳೆ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಎಲೆಕೆರೆ ಚಂದ್ರಶೇಖರ್, ಸೌಮ್ಯ ಕೃಷ್ಣಚಾರಿ, ವೈದ್ಯರಾದ ಡಾ.ದರ್ಶನ್, ಡಾ.ಕಾದಂಬರಿ, ಔಷಧಿ ವಿಭಾಗದ ಮುಖ್ಯಸ್ಥ ವೆಂಕಟೇಶ್ ಹಾಗೂ ಜಾಕಿ ಕಂಪನಿ ಸಿಬ್ಬಂದಿ ವರ್ಗ ಇದ್ದರು.