ಯಾವುದು ಒಳ್ಳೆಯ ಕಾರ್ಯವನ್ನು ಮಾಡುತ್ತೋ ಅದು ಸಂಸ್ಕೃತಿ ಎಂದು ಕರೆಸಿಕೊಳ್ಳುತ್ತದೆ. ಹಸಿವಾದಾಗ ಸ್ವಾಭಾವಿಕವಾಗಿ ಆಹಾರ ಸೇವನೆ ಮಾಡುತ್ತೇವೆ. ಇದು ಪ್ರಕೃತಿಯ ನಿಯಮ. ನನಗೆ ಹಸಿವಾದಾಗ ಪಕ್ಕದ ತಟ್ಟೆಯಿಂದ ಕಿತ್ತುಕೊಳ್ಳುವುದು ವಿಕೃತಿ. ಹಸಿದ ವ್ಯಕ್ತಿಗೆ ಆಹಾರ ನೀಡುವ ಜೊತೆಗೆ ಹಂಚಿಕೊಂಡು ತಿನ್ನುವುದು ಸಂಸ್ಕೃತಿ ನಮ್ಮದು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಅಕ್ಷರ, ಅನ್ನ ದಾಸೋಹವನ್ನು ನಮ್ಮ ದಾರ್ಸನಿಕರು ನೀಡುತ್ತಾ ಬರುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಹೇಳಿದರು.ಪಟ್ಟಣದಲ್ಲಿ ಆಯೋಜಿಸಿರುವ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಂಯತ್ಯುತ್ಸವದಲ್ಲಿ ಭಾರತೀಯ ಸಂಸ್ಕೃತಿ ಮೌಲ್ಯಗಳು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಸಂಸ್ಕೃತಿಯು ಅತ್ಯಂತ ಅದರ್ಶಪ್ರಾಯವಾದುದು. ಸಂಸ್ಕೃತಿಯ ಮೂಲ ತಿರುಳು ನಮ್ಮ ವ್ಯಕ್ತಿತ್ವ ರೂಪಿಸಿದೆ ಎಂದರು.
ಯಾವುದು ಒಳ್ಳೆಯ ಕಾರ್ಯವನ್ನು ಮಾಡುತ್ತೋ ಅದು ಸಂಸ್ಕೃತಿ ಎಂದು ಕರೆಸಿಕೊಳ್ಳುತ್ತದೆ. ಹಸಿವಾದಾಗ ಸ್ವಾಭಾವಿಕವಾಗಿ ಆಹಾರ ಸೇವನೆ ಮಾಡುತ್ತೇವೆ. ಇದು ಪ್ರಕೃತಿಯ ನಿಯಮ. ನನಗೆ ಹಸಿವಾದಾಗ ಪಕ್ಕದ ತಟ್ಟೆಯಿಂದ ಕಿತ್ತುಕೊಳ್ಳುವುದು ವಿಕೃತಿ. ಹಸಿದ ವ್ಯಕ್ತಿಗೆ ಆಹಾರ ನೀಡುವ ಜೊತೆಗೆ ಹಂಚಿಕೊಂಡು ತಿನ್ನುವುದು ಸಂಸ್ಕೃತಿ ನಮ್ಮದು ಎಂದು ಬಣ್ಣಿಸಿದರು.ಇವನು ನಮ್ಮವನು, ಅವನು ಬೇರೆಯವನು ಎಂಬ ತಾರತಮ್ಯ ಬಿಟ್ಟು ಇಡೀ ಜಗತ್ತು ಒಂದೇ ಕುಟುಂಬ ಎಂಬ ಮೌಲ್ಯಗಳನ್ನು ತುಂಬಿದ್ದು ನಮ್ಮ ಸಂಸ್ಕೃತಿ. ನಾನು ಮಾತ್ರ ಖುಷಿಯಿಂದ ಜೀವಿಸುವುದಲ್ಲ. ಎಲ್ಲರೂ ಆರೋಗ್ಯದಿಂದ ಉತ್ತಮವಾಗಿ ಬದುಕಬೇಕೆಂಬ ಅಶಯ ನಮ್ಮ ಭಾರತೀಯ ಸಂಸ್ಕೃತಿಯಲ್ಲಿದೆ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಇದು ಸರ್ವ ಸಮಾಜದ ಉತ್ಸವ ಎಂಬ ಆಶಯವನ್ನು ಇಟ್ಟುಕೊಂಡು ಜಯಂತ್ಯುತ್ಸವ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ. ಸುತ್ತೂರು ಮಠವು ಕೇವಲ ಅಧ್ಯಾತ್ಮ ಕೇಂದ್ರವಾಗದೇ ಸಮಾಜದ ಮನಸ್ಸಗಳನ್ನು ಶುದ್ಧೀಕರಿಸುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಯುವಜನರಿಗೆ ನಾಡು ನುಡಿಯ ಬಗ್ಗೆ ಮೌಲ್ಯಗಳನ್ನು ಬಿತ್ತಬೇಕು. ಇದನ್ನು ಕೇವಲ ಸಂಸ್ಥೆಗಳು ಮಾಡಲು ಸಾಧ್ಯವಿಲ್ಲ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಾಧ್ಯ. ಜೊತೆಗೆ ಪ್ರತಿಯೊಬ್ಬರೂ ಜೀವನ ಆದರ್ಶ ಹೆಚ್ಚಿಸಿಕೊಳ್ಳುವ ಮೂಲಕ ಸತ್ಪ್ರಜೆಗಳಾಗಬೇಕಿದೆ ಎಂದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ತಾಲೂಕಿನಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಸ್ವ-ಸಹಾಯ ಸಂಘಗಳು ಮಳಿಗಗಳನ್ನು ಹಾಕುತ್ತಿದ್ದು, ಸಾರ್ವಜನಿಕರು ಇದಕ್ಕೆ ಪ್ರೋತ್ಸಾಹ ನೀಡಿ ಬೆಳೆಸಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಮಾತನಾಡಿ, ಸುತ್ತೂರು ಮಠದಿಂದ ದೇಶದ ವಿವಿಧೆಡೆಗಳಲ್ಲಿ ಇನ್ನಷ್ಟು ಶಿಕ್ಷಣ ಸಂಸ್ಥೆಗಳನ್ನು ತೆರಯುವ ಮೂಲಕ ಬಡಜನರಿಗೆ ಆಸರೆಯಾಗಬೇಕು. ಮಠದ ಕೀರ್ತಿ ದೇಶ ವಿದೇಶಗಳಿಗೂ ಪಸರಿಸಲಿ ಎಂದು ಹಾರೈಸಿದರು.
ಇದೇ ವೇಳೆ ಪುಟ್ಟಹೊನ್ನಯ್ಯ ವಿರಚಿತ ಸುತ್ತೂರು ಪಂಚಾಂಗ ದರ್ಶಿನಿ ಬಿಡುಗಡೆಗೊಳಿಸಲಾಯಿತು. ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಕಾರ್ಯಕ್ರಮದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉರಿಲಿಂಗ ಪೆದ್ದಿ ಮಠದ ಪೀಠಾಧ್ಯಕ್ಷ ಜ್ಞಾನ ಪ್ರಕಾಶ ಸ್ವಾಮೀಜಿ, ದೇಗುಲ ಮಠದ ಪೀಠಾಧ್ಯಕ್ಷ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಕಾಗಿನೆಲೆ ಪೀಠದ ಶ್ರೀಮಹಾಂತಸ್ವಾಮಿ, ಹೈಕೋರ್ಟ್ ನ್ಯಾಯ ಮೂರ್ತಿ ಎಲ್.ನಾರಾಯಣಸ್ವಾಮಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಕೆ.ಅನ್ನದಾನಿ, ಮರಿತಿಬ್ಬೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.