ಕನ್ನಡಪ್ರಭ ವಾರ್ತೆ ಬೀದರ್
ಕನ್ನಡಾಭಿಮಾನ ಕೇವಲ ಒಂದು ದಿನ, ಒಂದು ತಿಂಗಳಿಗೆ ಸೀಮಿತಗೊಳ್ಳದೆ ನಮ್ಮ ಹೃದಯದಲ್ಲಿ ನಿತ್ಯೋತ್ಸವವಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ, ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಮಾತನಾಡಿ, ನಮ್ಮ ನೆಲದ ಸುಧೀರ್ಘ ಪರಂಪರೆ ಮತ್ತು ಸಂಸ್ಕೃತಿಗಳ ನೆಲಗಟ್ಟಿನ ಮೇಲೆ ಕರ್ನಾಟಕ ಸರ್ಕಾರದ ಭವಿಷ್ಯ ಮತ್ತಷ್ಟು ಉಜ್ವಲಗೊಳ್ಳುವಂತೆ ಮಾಡಲು ನಾವೆಲ್ಲ ಸಂಕಲ್ಪ ಮಾಡಬೇಕು. ಕನ್ನಡಿಗರ ಕಣ್ಣಲ್ಲಿ ಹೊಸ ಹೊಳಪು ಮಿಂಚಬೇಕು, ಕನ್ನಡ ಉಳಿಯಬೇಕು, ಕನ್ನಡ ಬೆಳೆಯಬೇಕು, ಬೆಳಗಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಕನ್ನಡಾಂಬೆಯ ಭಾವಚಿತ್ರದ ಮೆರವಣಿಗೆ ಜರುಗಿತು ಹಾಗೂ ವಿವಿಧ ಕ್ಷೇತ್ರದ 14 ಸಾಧಕ ಕನ್ನಡಿಗರಿಗೆ ಸನ್ಮಾನಿಸಲಾಯಿತು. ಆಕರ್ಷಕ ಪಥಸಂಚಲನ ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು. ತೋಟಗಾರಿಕಾ ಇಲಾಖೆಯ ಸ್ತಬ್ಧಚಿತ್ರ ಗಮನ ಸೆಳೆಯುವಂತಿತ್ತು.ಕಾರ್ಯಕ್ರಮದಲ್ಲಿ ಶಾಸಕರಾದ ರಹೀಮ್ ಖಾನ್, ಡಾ. ಶೈಲೇಂದ್ರ ಬೆಲ್ದಾಳೆ, ಕರ್ನಾಟಕ ಮೀನುಗಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾಲಾ ನಾರಾಯಣರಾವ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ವಿನೋದ ಅಪ್ಪೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್, ಎಸ್ಪಿ ಪ್ರದೀಪ ಗುಂಟಿ, ಸಹಾಯಕ ಆಯುಕ್ತರಾದ ಅಭಿನವ್ ಜೈನ್, ಅಪರ ಜಿಲ್ಲಾಧಿಕಾರಿ ಸುರೇಖಾ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಾಡಿನ ರಕ್ಷಣೆ ಹಾಗೂ ಕನ್ನಡಿಗರ ಒಳಿತಿಗೆ ಸರ್ಕಾರ ಬದ್ಧವಾಗಿದ್ದು, ಪ್ರತಿಯೊಬ್ಬ ಕನ್ನಡಿಗನೂ ಮಕ್ಕಳಲ್ಲಿ ಕನ್ನಡಾಭಿಮಾನ ಬೆಳೆಸುವುದರ ಜೊತೆಗೆ ಅನ್ಯಭಾಷಿಕ ರನ್ನೂ ಕನ್ನಡದ ಮುಖ್ಯವಾಹಿನಿಗೆ ತರಬೇಕು. ಅಷ್ಟಕ್ಕೂ ಕನ್ನಡ ಕೇವಲ ಭಾಷೆಯಾಗದೆ ನಮ್ಮ ಉಸಿರು ಮತ್ತು ಬದುಕಾಗಬೇಕು ಎಂದು ಕರೆ ನೀಡಿ, ಕನ್ನಡ ಏಕೀ ಕರಣ ಹಾಗೂ ಜಿಲ್ಲೆಯಲ್ಲಿ ಕನ್ನಡದ ಅಸ್ಮಿತೆ ಉಳಿಸಲು ಶ್ರಮಿಸಿದ ಡಾ.ಚನ್ನಬಸವ ಪಟ್ಟದ್ದೇವರು, ಲೋಕನಾಯಕ ಡಾ.ಭೀಮಣ್ಣ ಖಂಡ್ರೆ ಸೇರಿದಂತೆ ಅನೇಕ ಮಹನೀಯರ ತ್ಯಾಗ ಸ್ಮರಣೀಯ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.