ಕನ್ನಡಪ್ರಭ ವಾರ್ತೆ ಸವದತ್ತಿ
ಸಂಶೋಧನೆಗಳು ಸಮಕಾಲೀನ ಸಮಾಜವನ್ನು ಗಮನದಲ್ಲಿಟ್ಟುಕೊಂಡು ಜ್ಞಾನ ಸೃಷ್ಟಿಯತ್ತ ಸಾಗಬೇಕಿದೆ. ಆಧುನಿಕೋತ್ತರ ಕಾಲಘಟ್ಟದಲ್ಲಿ ಸಾಹಿತ್ಯ, ಸಮಾಜ ಮತ್ತು ವಿಜ್ಞಾನವು ಪ್ರಸಕ್ತ ವಿದ್ಯಮಾನಗಳಿಗೆ ಪ್ರತಿಬಿಂಬವಾಗುತ್ತಿವೆ ಎಂದು ಶ್ರೀಲಂಕಾದ ಈಸ್ಟರ್ನ್ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಶ್ರೀಕರುಣಾಕರನ್ ಹೇಳಿದರು.ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್.ವಿ.ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಏರ್ಪಡಿಸಿದ ಸಾಹಿತ್ಯ ಮತ್ತು ಸಮಾಜ ವಿಜ್ಞಾನದಲ್ಲಿ ಆಧುನಿಕೋತ್ತರ ಸಮಸ್ಯೆಗಳ ಕುರಿತ ಬಹುಶಿಸ್ತೀಯ ದೃಷ್ಟಿಕೋನ ಎಂಬ ವಿಷಯದ ಒಂದು ದಿನದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿರುಪಾಕ್ಷಪ್ಪ ಮಾಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾಜಿಕವಾಗಿ ನಾವು ಪರಿವರ್ತನೆಯಾಗಬೇಕಾದರೆ ಶಿಕ್ಷಣವೇ ನಮಗಿರುವ ಶಕ್ತಿ. ವಿದ್ಯಾರ್ಥಿಗಳು ಇಂದಿನ ತಂತ್ರಜ್ಞಾನವನ್ನು ಧನಾತ್ಮಕ ರೂಪದಲ್ಲಿ ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಟಿ.ಬಾಗಲಕೋಟಿ ಮಾತನಾಡಿ, ಆಧುನಿಕೋತ್ತರವಾದ ಎಂಬ ವಿಚಾರವು ಕೈಗಾರೀಕರಣ, ಪ್ರಥಮ ವಿಶ್ವಯುದ್ಧ ಮತ್ತು ನಗರೀಕರಣದಂತಹ ಪರಿಣಾಮಗಳಿಂದ ಉದಯಿಸಿತು. ಇದರ ಹಿಂದೆ ಬೆಳೆದು ಬಂದಿರುವ ಪಾರಂಪರಿಕ ಕಲಾ ರೂಪಗಳು ಆಧುನಿಕತೆಯ ಪರಿಣಾಮವನ್ನು ಎದುರಿಸಲು ಅಸಮರ್ಥವಾಗಿದ್ದವು. ಇದರಿಂದ ಆಧುನಿಕತೆಯ ಶೈಲಿಗಳಲ್ಲಿ ಅಭಿವ್ಯಕ್ತಿಸಲು ಪ್ರಾರಂಭಿಸಿದರು ಎಂದರು.
ಧಾರವಾಡದ ಕರ್ನಾಟಕ ವಿವಿ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಡಾ.ಎನ್.ಎಚ್.ಕಲ್ಲೂರ ಮಾತನಾಡಿ, 20ನೇ ಶತಮಾನದ ಕೊನೆಯಲ್ಲಿ ಸಾಂಸ್ಕೃತಿಕ, ರಾಜಕೀಯ, ತಂತ್ರಜ್ಞಾನ ಮತ್ತು ಜ್ಞಾನ ಸಂಬಂಧಿತ ವಿಷಯಗಳು ವೇಗವಾಗಿ ಬೆಳೆಯುತ್ತಿರುವ ಸಾಮಾಜಿಕ ಬದಲಾವಣೆಗೆ ಪ್ರತಿಕ್ರಿಯೆಯಾಗಿ ಆಧುನಿಕೋತ್ತರವಾದವು ಹುಟ್ಟಿಕೊಂಡಿತು. ಪ್ರಗತಿ, ಸತ್ಯ ಮತ್ತು ಜ್ಞಾನದ ಪರಿಭಾಷೆಯನ್ನು ಇದು ಪ್ರಶ್ನಿಸಿತು ಎಂದರು.
ತಾಂತ್ರಿಕ ಗೋಷ್ಠಿಯಲ್ಲಿ ಬೇರೆ ಬೇರೆ ರಾಜ್ಯ ಮತ್ತು ವಿವಿಧ ಜಿಲ್ಲೆಗಳ ಪ್ರಾಧ್ಯಾಪಕರು ಮತ್ತು ಸಂಶೋಧನಾರ್ಥಿಗಳು ಒಟ್ಟು ೧೪೨ ಜನ ಪ್ರಬಂಧ ಮಂಡಿಸಿದರು. ಈ ಸಮ್ಮೇಳನದ ನಿಮಿತ್ತ ಆಹ್ವಾನಿಸಲಾದ ಪ್ರಬಂಧಗಳನ್ನು ಸಂಕಲಿಸಿ ಐದು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಪ್ರಾಚಾರ್ಯ ಡಾ.ಎನ್.ಆರ್.ಸವತಿಕರ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಪ್ರೊ.ಕೆ.ರಾಮರೆಡ್ಡಿ, ಡಾ.ಎ.ಎಫ್.ಬದಾಮಿ, ಎಸ್.ಎಂ.ಹೊಳಿ, ಎ.ಎ.ಹಳ್ಳೂರ, ಎಂ.ಸಿ.ಹಾದಿಮನಿ, ಭಾಗ್ಯಶ್ರೀ ಪೊಲೇಶಿ, ಗೀತಾ ಮಲ್ಲಾಪುರ, ಪಿ.ಎಫ್.ಹಾದಿಮನಿ, ಕಿರಣಕುಮಾರ ಲಮಾಣಿ, ಮೋಹನ್ ಬಿ. ವಿವೇಕ ಸೂಳೆಭಾವಿ, ಎಂ.ಎನ್.ಸಂಗೊಳ್ಳಿ, ಕೆ.ಬಿ.ನರಗುಂದ, ಎಸ್.ಜೆ.ಮಜ್ಜಗಿ, ಅಶೋಕ ಪಮ್ಮಾರ, ಪ್ರೊ.ಎಸ್.ಬಿ.ಕಿಲ್ಲೆದಾರ, ಡಾ.ಎಸ್.ಸಿ.ಮಠಪತಿ, ಅಶೋಕ ವಿಘ್ನೇಶಿ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರವಿ ಹೊಳೆಯಣ್ಣವರ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಡಾ.ಎನ್.ಎ.ಕೌಜಗೇರಿ ಸ್ವಾಗತಿಸಿದರು, ವಿ.ಎಸ್.ಮೀಶಿ ಪರಿಚಯಿಸಿದರು, ಸ್ನೇಹಾ ಗಂಗಲ ನಿರೂಪಿಸಿ ವಂದಿಸಿದರು