ಪತ್ರಕರ್ತರ ಭವನದಿಂದ ಆರಂಭಗೊಂಡ ಹೆಲ್ಮೆಟ್ ಕಡ್ಡಾಯ ಕುರಿತ ಅರಿವು ಜಾಥಾ ಅಂಬೇಡ್ಕರ್ ವೃತ್ತ, ಬಿಬಿ ರಸ್ತೆಯ ಮೂಲಕ ಭುವನೇಶ್ವರಿ ವೃತ್ತ, ಬಜಾರ್ ರಸ್ತೆ, ಗಂಗಮ್ಮ ಗುಡಿರಸ್ತೆಯ ಮೂಲಕ ಎಂಜಿ ರಸ್ತೆ ನಂತರ ಎಪಿಎಂಸಿ ಮಾರುಕಟ್ಟೆವರೆಗೂ ತೆರಳಿ ಹೆಲ್ಮೆಟ್ ಕಡ್ಡಾಯದ ಬಗ್ಗೆ ‘ಹೆಲ್ಮೆಟ್ ಧರಿಸಿ ಜೀವ ಉಳಿಸಿ’ ಘೋಷಣೆಗಳನ್ನು ಕೂಗಿ ಸಾರ್ವಜನಿಕರ ಗಮನ ಸೆಳೆಯಲಾಯಿತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸ್ವಾರ್ಥಿ ತನಗೋಸ್ಕರ ಬದುಕುತ್ತಾನೆ, ಸ್ವಾಭಿಮಾನಿ ಇತರರಿಗೋಸ್ಕರ ಬದುಕುತ್ತಾನೆ. ಪತ್ರಕರ್ತ ಸಮುದಾಯ ಮಾನವೀಯ ಸಮುದಾಯವಾಗಿದೆ, ಇದಕ್ಕೆ ಸಾಕ್ಷಿಯೇ ಪತ್ರಕರ್ತರು ಬೈಕ್ ಸವಾರರಿಗೆ ಹೆಲ್ಮೆಟ್ ಜಾಗೃತಿಗಾಗಿ ನಡೆಸುತ್ತಿರುವ ಬೈಕ್ ರ‍್ಯಾಲಿಯಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದ ಬಳಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಬುಧವಾರ ಹಮ್ಮಿಕೊಂಡಿದ್ದ ಬೈಕ್ ಸವಾರರಲ್ಲಿ ಹೆಲ್ಮೆಟ್ ಕಡ್ಡಾಯದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಬೈಕ್ ಸವಾರರ ರಕ್ಷಣೆ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಬೈಕ್ ಸವಾರರು ಹೆಲ್ಮೆಟ್ ಧರಿಸುವುದನ್ನು ರೂಢಿಗತ ಮಾಡಿಕೊಳ್ಳಬೇಕು. ಇದರಿಂದ ಆಕಸ್ಮಿಕವಾಗಿ ನಡೆಯುವ ರಸ್ತೆ ಅಪಘಾತಗಳಿಂದ ನಮ್ಮ ಜೀವ ರಕ್ಷಣೆಗೆ ಹೆಲ್ಮೆಟ್ ದೊಡ್ಡ ಸಹಾಯ ಮಾಡುತ್ತದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿರುವ ಈ ಸಮಾಜಮುಖಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡುತ್ತಿರುವುದು ಉತ್ತಮ ಬೆಳವಣಿಗೆ. ಇದನ್ನು ಹಾಗೆ ಮುಂದುವರಿಸಿಕೊಂಡು ಹೋಗುವ ಮೂಲಕ ರಸ್ತೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ವಾಹನ ಸವಾರರು ಮುಂದಾಗಬೇಕು. ಹೆಲ್ಮೆಟ್‌ಅನ್ನು ಕಡ್ಡಾಯವಾಗಿ ಬೈಕ್ ಸವಾರರು ಧರಿಸುವ ಮೂಲಕ ತಮ್ಮ ಅಮೂಲ್ಯವಾದ ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕೆಂದು ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಮಾತನಾಡಿ, ಜಿಲ್ಲೆಯಲ್ಲಿ ಸಂಭವಿಸುವ ಅಪಘಾತಗಳಿಂದ ಜನರ ರಕ್ಷಣೆ, ಸಾವು, ನೋವು ತಡೆಯಲು ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ಇದಕ್ಕೆ ನಾಗರಿಕರು ಸಹಕರಿಸಬೇಕು, ಪತ್ರಕರ್ತರ ಸಂಘ ಸಾಮಾಜಿಕ ಕಾಳಜಿಯೊಂದಿಗೆ ಹೆಲ್ಮೆಟ್ ಕಡ್ಡಾಯ ಬಗ್ಗೆ ಜನ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ, ಪತ್ರಕರ್ತರು, ಪೊಲೀಸರು ಸೇತುವೆಯಾಗಿ ಕೆಲಸ ಮಾಡುವ ಮೂಲಕ ಸಮಾಜಮುಖಿಯಾಗಬೇಕು ಎಂದು ಸಲಹೆ ನೀಡಿದರು.

ಗಮನ ಸೆಳೆದ ಪತ್ರಕರ್ತರ ಬೈಕ್ ರ‍್ಯಾಲಿ:

ಪತ್ರಕರ್ತರ ಭವನದಿಂದ ಆರಂಭಗೊಂಡ ಹೆಲ್ಮೆಟ್ ಕಡ್ಡಾಯ ಕುರಿತ ಅರಿವು ಜಾಥಾ ಅಂಬೇಡ್ಕರ್ ವೃತ್ತ, ಬಿಬಿ ರಸ್ತೆಯ ಮೂಲಕ ಭುವನೇಶ್ವರಿ ವೃತ್ತ, ಬಜಾರ್ ರಸ್ತೆ, ಗಂಗಮ್ಮ ಗುಡಿರಸ್ತೆಯ ಮೂಲಕ ಎಂಜಿ ರಸ್ತೆ ನಂತರ ಎಪಿಎಂಸಿ ಮಾರುಕಟ್ಟೆವರೆಗೂ ತೆರಳಿ ಹೆಲ್ಮೆಟ್ ಕಡ್ಡಾಯದ ಬಗ್ಗೆ ‘ಹೆಲ್ಮೆಟ್ ಧರಿಸಿ ಜೀವ ಉಳಿಸಿ’ ಘೋಷಣೆಗಳನ್ನು ಕೂಗಿ ಸಾರ್ವಜನಿಕರ ಗಮನ ಸೆಳೆಯಲಾಯಿತು. ಬೈಕ್ ರ‍್ಯಾಲಿಯಲ್ಲಿ ಪತ್ರಕರ್ತರೊಂದಿಗೆ ನಗರದ ಕನ್ನಡಪರ, ರೈತರ ಸಂಘಟನೆಗಳ ಮುಖಂಡರು, ನಾಯಕರು ಜೊತೆಯಾದರು.

ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜ್ ನಾಯಕ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ, ಖಜಾಂಚಿ ಬಿ.ಕೆ.ಮುದ್ದುಕೃಷ್ಣ, ಸಂಚಾರ ಠಾಣೆ ಪಿಎಸ್‌ಐ ಮಂಜುಳ, ನಗರ ಠಾಣೆ ಪಿಎಸ್‌ಐ ಅಮರ್, ಸಂಘದ ಜಿಲ್ಲಾ ಉಪಾಧ್ಯಕ್ಷ ಮುಬಿಷೀರ್, ಕಾರ್ಯದರ್ಶಿಗಳಾದ ಎಂ.ಆನಂದ್, ಡಿ.ಜೆ ಮಲ್ಲಿಕಾರ್ಜುನ್, ಹಿರಿಯ ಪತ್ರಕರ್ತರಾದ ಎಚ್.ವಿ.ಸೊಮಶೇಖರ್, ಎನ್.ದಯಾಸಾಗರ್, ಕೆನಡಿ, ಸಿ.ಬಾಲಕೃಷ್ಣ, ಟಿ.ಎಸ್.ನಾಗೇಂದ್ರಬಾಬು, ಜಿಲಾನಿ, ಸೋ.ಸು.ನಾಗೇಂದ್ರನಾಥ್, ಕೆ.ಎಸ್.ನಾರಾಯಣಸ್ವಾಮಿ, ಎಂ.ಎಸ್.ಮಲ್ಲಪ್ಪ, ಮುನಿರಾಜು ಎಂ.ಅರಿಕೆರೆ, ಜಗದೀಶ್ ಬಾಬು, ಕನ್ನಡರಕ್ಷಣಾ ವೇದಿಕೆಯ ರಾಮೇಗೌಡ, ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಪತ್ರಕರ್ತರು, ನಗರದ ಕನ್ನಡಪರ, ರೈತರ ಸಂಘಟನೆಗಳ ಮುಖಂಡರು, ನಾಯಕರು ಇದ್ದರು.